ಕರ್ನಾಟಕ

ಹುಟ್ಟೂರು ಹಾಲಹಳ್ಳಿಯಲ್ಲಿ ಮಹದೇವಪ್ರಸಾದ್‌ ಅಂತ್ಯಕ್ರಿಯೆ

Pinterest LinkedIn Tumblr

mahadev
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಯಲ್ಲಿ ಬುಧವಾರ ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಅಂತ್ಯಕ್ರಿಯೆಯು ಸರ್ಕಾರಿ ಗೌರವದೊಂದಿಗೆ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.

ಮಂಗಳವಾರ ಮಧ್ಯರಾತ್ರಿ ಸಚಿವರ ಹುಟ್ಟೂರಾದ ಹಾಲಹಳ್ಳಿಗೆ ಪಾರ್ಥಿವ ಶರೀರ ತಂದು ಅವರ ಮನೆಯಲ್ಲಿ ಇಡಲಾಗಿತ್ತು. ಬೆಳಿಗ್ಗೆ ಮನೆಯ ಸಮೀಪದಲ್ಲಿ ಇರುವ ಸಮುದಾಯ ಭವನದ ಪಕ್ಕದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಗುಂಡ್ಲುಪೇಟೆ ತಾಲ್ಲೂಕು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಮಹದೇವಪ್ರಸಾದ್‌ ಅವರ ಅಭಿಮಾನಿಗಳು, ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.

ಪಾರ್ಥಿವ ಶರೀರದ ಮುಂದೆ ಮಹದೇವಪ್ರಸಾದ್‌ ಅವರ ಪತ್ನಿ ಡಾ.ಎಂ.ಸಿ. ಮೋಹನ್‌ಕುಮಾರಿ(ಡಾ.ಗೀತಾ ಮಹದೇವಪ್ರಸಾದ್‌), ಪುತ್ರ ಎಚ್‌.ಎಂ. ಗಣೇಶ್‌ಪ್ರಸಾದ್‌, ಸೊಸೆ ವಿದ್ಯಾಶ್ರೀ ಸೇರಿದಂತೆ ಕುಟುಂಬದ ಸದಸ್ಯರು ಕಣ್ಣೀರಿಟ್ಟರು. ಗೀತಾ ಅವರು ದುಃಖ ತಡೆಯಲಾರದೆ ಅಸ್ವಸ್ಥಗೊಂಡರು. ಕೂಡಲೇ, ಸ್ಥಳಕ್ಕೆ ಆಗಮಿಸಿದ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು.

ಗ್ರಾಮದ ಹೊರವಲಯದಲ್ಲಿ ಇರುವ ತೋಟದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಕೈಗೊಳ್ಳಲಾಗಿತ್ತು. ಮಧ್ಯಾಹ್ನ 2ಗಂಟೆಗೆ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ತೋಟಕ್ಕೆ ತರಲಾಯಿತು. ಅಭಿಮಾನಿಗಳು ಮೆರವಣಿಗೆಯುದ್ದಕ್ಕೂ ಮಹದೇವಪ್ರಸಾದ್‌ ಪರವಾಗಿ ಘೋಷಣೆ ಕೂಗಿ ಅಭಿಮಾನ ಮೆರೆದರು.

ತೋಟದ ಮನೆ ಮುಂಭಾಗ ಲಿಂಗಾಯತ ಸಮುದಾಯದ ಸಂಪ್ರದಾಯದಂತೆ ಪಾರ್ಥಿವ ಶರೀರಕ್ಕೆ ಪೂಜೆ ನೆರವೇರಿಸಲಾಯಿತು. ಬಳಿಕ ಸಮಾಧಿ ಸ್ಥಳಕ್ಕೆ ಪಾರ್ಥಿವ ಶರೀರ ತರಲಾಯಿತು. ಅಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು.
ನಂತರ ಸಚಿವರ ತಂದೆ ಮತ್ತು ತಾಯಿಯ ಸಮಾಧಿ ಪಕ್ಕದಲ್ಲಿಯೇ ಮಾದಾಪಟ್ಟಣದ ಸದಾಶಿವ ಸ್ವಾಮೀಜಿ ಅವರ ನೇತೃತ್ವದಡಿ ಕ್ರಿಯಾ ಸಮಾಧಿ ನೆರವೇರಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಎಚ್‌.ಸಿ. ಮಹದೇವಪ್ಪ, ಕಾಗೋಡು ತಿಮ್ಮಪ್ಪ, ಕೃಷ್ಣಪ್ಪ, ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ್, ಕೆ.ಆರ್‌. ರಮೇಶ್‌ಕುಮಾರ್‌, ಆರ್. ರೋಷನ್‌ ಬೇಗ್‌, ಪ್ರಿಯಾಂಕ್‌ ಖರ್ಗೆ, ಬಸವರಾಜ ರಾಯರೆಡ್ಡಿ, ಈಶ್ವರ್‌ ಖಂಡ್ರೆ, ಎಸ್‌.ಎಸ್. ಮಲ್ಲಿಕಾರ್ಜುನ್‌, ಟಿ.ಬಿ. ಜಯಚಂದ್ರ, ದಿನೇಶ್‌ ಗುಂಡೂರಾವ್, ಕೆ.ಜೆ. ಜಾರ್ಜ್‌, ಎಂ.ಆರ್‌. ಸೀತಾರಾಂ, ಉಮಾಶ್ರೀ, ವಿನಯ್‌ ಆರ್. ಕುಲಕರ್ಣಿ, ಸಂತೋಷ್‌ ಲಾಡ್‌, ಎ. ಮಂಜು, ರಾಮಲಿಂಗರೆಡ್ಡಿ, ತನ್ವೀರ್‌ ಸೇಠ್‌, ಯು.ಟಿ. ಖಾದರ್, ಡಾ.ಶರಣ ಪ್ರಕಾಶ್‌ ಪಾಟೀಲ್, ಎಚ್‌. ಆಂಜನೇಯ, ಬಿ. ರಮಾನಾಥ್‌ ರೈ, ಪ್ರಮೋದ್‌ ಮದ್ವರಾಜ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಂಸದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ಮುಖಂಡ ಎಚ್‌.ಡಿ. ರೇವಣ್ಣ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್‌ ಅವರು ಅಂತಿಮ ದರ್ಶನ ಪಡೆದರು.

Comments are closed.