ಕರ್ನಾಟಕ

ಬೆಂಗಳೂರಿನ ಈ ವಾರ್ಡ್ ಜನರಿಗೆ ವಾರಕೊಮ್ಮೆ ನೀರು

Pinterest LinkedIn Tumblr

warm_water_photo_1
ಬೆಂಗಳೂರು: ನಗರದ ವರ್ತೂರು ವಾರ್ಡ್‌ನಲ್ಲಿ ಬೇಸಿಗೆಗೆ ಮುನ್ನವೇ ನೀರಿನ ಬವಣೆ ಹೆಚ್ಚಾಗಿದೆ.

ವರ್ತೂರು ಗ್ರಾಮ ಒಂದರಲ್ಲೇ 18 ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ 1.5 ಲಕ್ಷ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ಮತ್ತು 6 ಕೊಳವೆ ಬಾವಿಗಳಿಂದ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಕೆಲವರು ಟ್ಯಾಂಕರ್‌ ನೀರು ಪಡೆಯುತ್ತಿದ್ದು, ಪ್ರತಿ ಟ್ಯಾಂಕರ್‌ಗೆ ₹300 ರಿಂದ ₹400 ನೀಡುತ್ತಿದ್ದಾರೆ. ಬೇಸಿಗೆಯಲ್ಲಿ ಇದು ದುಪ್ಪಟ್ಟು ಆಗುವ ಸಂಭವ ಇದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಸೋರಹುಣಸೆ, ಗುಂಜೂರು, ಚಿಕ್ಕ ಬೆಳ್ಳಂದೂರು, ಬಳಗೆರೆ, ಪಣತ್ತೂರು ಗ್ರಾಮಗಳಲ್ಲೂ ನೀರಿನ ಸಮಸ್ಯೆ ಇದೆ. ಉಳ್ಳವರು ಕೊಳವೆ ಬಾವಿಗಳನ್ನು ಕೊರೆಸಿ ಕೊಂಡಿದ್ದಾರೆ. ಹಣ ಕೊಟ್ಟು ಟ್ಯಾಂಕರ್‌ ನೀರು ಖರೀದಿಸಲು ಆಗದವರು ಜಲ ಮಂಡಳಿ ಪೂರೈಸುವ ನೀರಿಗಾಗಿ ಕಾಯಬೇಕಾದ ಅನಿವಾರ್ಯ ಎದುರಾಗಿದೆ.

ಬಳಗೆರೆ ರಸ್ತೆಯ ಕೆಲ ಬಾಡಿಗೆ ನಿವಾಸಿಗಳು 1 ಕಿ.ಮೀ. ದೂರದಿಂದ ನೀರು ತರಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಇಲ್ಲಿಯ ಸುಬ್ಬಯ್ಯ ಗಾರ್ಡನ್‌ನ ಗೃಹಿಣಿ ಶಿವಮ್ಮ ಚಂದ್ರಶೇಖರ್‌ ದೂರಿದರು.

ವಾರಕೊಮ್ಮೆ ನೀರು: ‘ವರ್ತೂರಿನ ಕೆಲವು ಭಾಗಗಳಲ್ಲಿ ವಾರಕೊಮ್ಮೆ ನೀರು ಬಿಡುತ್ತಿದ್ದು, ಹಲವೆಡೆ 3 ದಿನಕೊಮ್ಮೆ ಬಿಡುತ್ತಿದ್ದಾರೆ. ಬಿಟ್ಟರೂ ವಾರವಿಡೀ ನೀರು ಬಳಸಲು ಸಾಧ್ಯ ಆಗುತ್ತಿಲ್ಲ. ಇತರೆ ಭಾಗಗಳಲ್ಲೂ ಇದೇ ಪರಿಸ್ಥಿತಿ ಇದೆ’ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡರು.

‘ಈ ಗ್ರಾಮಗಳು ವರ್ತೂರು ಕೆರೆಯ ಅಂಚಿನಲ್ಲಿ ಇದ್ದರೂ ಅಂತರ್ಜಲ ಕುಸಿದಿದೆ. ಸಾವಿರ ಅಡಿ ಕೊರೆದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಹಲವಾರು ವರ್ಷಗಳಿಂದ ಕೆರೆಯಲ್ಲಿ ಹೂಳು ತೆಗೆಯದ ಕಾರಣ ಸಮಸ್ಯೆಯಾಗಿದೆ’ ಎಂದು ಎನ್‌.ಪಿ.ಮುನಿರಾಜು ಅಭಿಪ್ರಾಯ ವ್ಯಕ್ತ ಪಡಿಸಿದರು.
ವರ್ತೂರು ವಾರ್ಡ್‌ನ ಗ್ರಾಮಗಳಲ್ಲಿ 40 ಕೊಳವೆ ಬಾವಿಗಳ ಕೊರೆಸಲು ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ ರಮೇಶ್‌ ಅವರು ತಿಳಿಸಿದರು.

Comments are closed.