ಬೆಂಗಳೂರು(ಡಿ. 30): ವಿಶ್ವದ ಅತ್ಯಂತ ಜನಪ್ರಿಯ ಆ್ಯಪಲ್ ಸಂಸ್ಥೆಯ ಐಫೋನ್’ಗಳು ಭಾರತದಲ್ಲಿ ಇನ್ನಷ್ಟು ಅಗ್ಗವಾಗುವ ನಿರೀಕ್ಷೆ ಇನ್ನೂ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲೇ ಐಫೋನ್’ಗಳನ್ನು ತಯಾರಿಸಲು ಆ್ಯಪಲ್ ಸಂಸ್ಥೆ ನಿರ್ಧರಿಸಿದೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಐಫೋನ್’ಗಳ ತಯಾರಿಕೆಗಾಗಿ ತೈವಾನ್ ದೇಶದ ವಿಸ್’ಟ್ರಾನ್ ಎಂಬ ಸಂಸ್ಥೆಯು ಪೀಣ್ಯದ ಬಳಿ ಬೃಹತ್ ಘಟಕವನ್ನು ನಿರ್ಮಿಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯೊಂದು ಪ್ರಕಟವಾಗಿದೆ.
ಪತ್ರಿಕೆಯ ವರದಿ ಪ್ರಕಾರ, ಬರುವ ಏಪ್ರಿಲ್’ನಿಂದ ಪೀಣ್ಯದ ಘಟಕದಲ್ಲಿ ಐಫೋನ್’ನ ಅಸೆಂಬ್ಲಿಂಗ್ ನಡೆಯಲಿದೆ. ಮುಂದಿನ ವರ್ಷಾಂತ್ಯದೊಳಗೆ ಇಲ್ಲಿಯೇ ಸಂಪೂರ್ಣವಾಗಿ ತಯಾರಿಕೆಯ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ. ಆ್ಯಪಲ್’ನ ಸಂಸ್ಥೆಯು ಭಾರತದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಈ ಸುದ್ದಿಗೆ ಇಂಬು ಕೊಡುವಂತಿದೆ.
ಬೆಲೆ ಇಳಿಕೆ?
ಆ್ಯಪಲ್’ನ ಐಫೋನ್ ತಯಾರಿಕೆ ಪ್ರಮುಖವಾಗಿ ನಡೆಯುತ್ತಿರುವುದು ಚೀನಾದಲ್ಲೇ. ಹೀಗಾಗಿ, ಆಮದು ಶುಲ್ಕ ಸೇರಿ ಐಫೋನ್’ಗಳು ಭಾರತದಲ್ಲಿ ಸ್ವಲ್ಪ ದುಬಾರಿಯಾಗಿವೆ. ಈಗ, ಭಾರತದಲ್ಲೇ ತಯಾರಿಕೆ ನಡೆದಲ್ಲಿ ಈ 12.5% ಆಮದು ಶುಲ್ಕ ನಿವಾರಣೆಯಾಗಲಿವೆ. ಬೆಲೆಗಳು ಇನ್ನಷ್ಟು ಇಳಿಯಲಿವೆ. ದಿನೇದಿನೇ ವಿಸ್ತರಣೆಯಾಗುತ್ತಿರುವ ಭಾರತದ ಸ್ಮಾರ್ಟ್’ಫೋನ್ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ಆ್ಯಪಲ್ ಸಂಸ್ಥೆಗೆ ಇದು ನೆರವಾಗಲಿದೆ.
ಆ್ಯಪಲ್ ಮತ್ತು ಬೆಂಗಳೂರು:
ಭಾರತದಲ್ಲಿ ಬೇರು ಬಿಡಲು ಆ್ಯಪಲ್ ಸಂಸ್ಥೆ ದೊಡ್ಡ ಯೋಜನೆ ಹಾಕಿಕೊಂಡಿದ್ದು, ಸಿಲಿಕಾನ್ ಸಿಟಿ ಎನಿಸಿರುವ ಬೆಂಗಳೂರನ್ನೇ ತನ್ನ ಪ್ರಮುಖ ನೆಲೆಯನ್ನಾಗಿ ಮಾಡಿಕೊಳ್ಳುತ್ತಿರುವಂತಿದೆ. ಇದೇ ಮೇ ತಿಂಗಳಲ್ಲಿ ಆ್ಯಪಲ್ ಸಂಸ್ಥೆಯು ಬೆಂಗಳೂರಿನಲ್ಲಿ “ಡಿಸೈನ್ ಅಂಡ್ ಡೆವಲಪ್ಮೆಂಟ್ ಆಕ್ಸಲರೇಟರ್” ಘಟಕವನ್ನು ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಆ ಯೋಜನೆ ಕೂಡ ಏಪ್ರಿಲ್’ನಿಂದಲೇ ಜಾರಿಗೆ ಬರುವ ನಿರೀಕ್ಷೆ ಇದೆ.