ಕರ್ನಾಟಕ

ಮೊಬೈಲ್‌ಗಾಗಿ ನಡೆಯಿತು ವಿದ್ಯಾರ್ಥಿಯ ಕೊಲೆ !

Pinterest LinkedIn Tumblr

harsha

ಬೆಂಗಳೂರು: ಐದು ಸಾವಿರ ರೂ. ಮೌಲ್ಯದ ಮೊಬೈಲ್‌ ವಿಚಾರಕ್ಕೆ ಸ್ನೇಹಿತರ ಜತೆ ಮಾಡಿಕೊಂಡಿದ್ದ ಗಲಾಟೆಯೇ ಪಿಇಎಸ್‌ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿ ಹರ್ಷ ಕೊಲೆಗೆ ಕಾರಣ ಎಂಬುದು ಹನುಮಂತನಗರ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಾನೂನು ಸಂಘರ್ಷಕ್ಕೊಳಗಾದ (ಅಪ್ರಾಪ್ತ ವಯಸ್ಕ) ಮೂವರು ಬಾಲಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಪೈಕಿ ಪಿಯುಸಿ ವಿದ್ಯಾರ್ಥಿಗಳು ಸಹ ಇದ್ದಾರೆ.

ಶ್ರೀನಗರದ ಯಶವಂತ್‌, ಶ್ರೀನಿವಾಸ್‌ ಹಾಗೂ ಅಂಚೆಪಾಳ್ಯದ ಸುಮನ್‌ ಬಂಧಿತರು. ಈ ಕೃತ್ಯದ ಸಂಚುಕೋರ ಶೇಖರ್‌ ಅಲಿಯಾಸ್‌ ಮೊಟ್ಟೆ, ಮಹೇಶ್‌ ಹಾಗೂ ಮಂಜುನಾಥ್‌ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತೀಚಿಗೆ ಶೇಖರ್‌ ಮೊಬೈಲ್‌ ಅನ್ನು ತನ್ನ ಸ್ನೇಹಿತನ ಮೂಲಕ ಹರ್ಷ ಖರೀದಿಸಿದ್ದ. ಆದರೆ ಮಾರಾಟ ಮಾಡಿದ ಕೆಲ ದಿನಗಳ ಬಳಿಕ ಆ ಮೊಬೈಲ್‌ ಮರಳಿ ಪಡೆಯಲು ಶೇಖರ್‌ ಯತ್ನಿಸಿದ್ದು ಜಗಳಕ್ಕೆ ಕಾರಣವಾಗಿ ಗುಂಪು ಘರ್ಷಣೆ ನಡೆದು ಹರ್ಷ ಬಲಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್‌ ಗಲಾಟೆ: ಹಲವು ದಿನಗಳಿಂದ ಮೃತ ವಿದ್ಯಾರ್ಥಿ ಹರ್ಷ ಹಾಗೂ ಆರೋಪಿಗಳಿಗೆ ನಡುವೆ ಗೆಳೆತನವಿತ್ತು. ಶ್ರೀನಗರದ ಬಸ್‌ ನಿಲ್ದಾಣ ಪಕ್ಕದಲ್ಲಿರುವ ವಿಜಯ ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಈ ಸ್ನೇಹ ಬೆಳದಿದೆ. ಪ್ರತಿ ವಾರ ಎರಡು ಗುಂಪುಗಳು ಕ್ರಿಕೆಟ್‌ ಆಡುತ್ತಿದ್ದರು. ಹೀಗಿರುವಾಗ ಕೆಲ ದಿನಗಳ ಹಿಂದೆ ಬ್ಯಾಟರಾಯನಪುರದ ಹತ್ತಿರದ ಸಂಜಯನಗರದ ಯುವಕನಿಗೆ ತನ್ನ ಮೊಬೈಲ್‌ ಅನ್ನು ಐದು ಸಾವಿರ ರೂ. ಗೆ ಶೇಖರ್‌ ಮಾರಾಟ ಮಾಡಿದ್ದ. ಆ ಮೊಬೈಲ್‌ಅನ್ನು ಶೇಖರ್‌ ಗೆಳೆಯ, ತನ್ನ ಮತ್ತೂಬ್ಬ ಸ್ನೇಹಿತ ಹರ್ಷನಿಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಡಿಸೆಂಬರ್‌ 19ರ ರಾತ್ರಿ ಸಂಜಯನಗರದ ಗೆಳೆಯನ ಮನೆಗೆ ತೆರಳಿದ ಶೇಖರ್‌, “ನಿನ್ನ ಹಣ ಕೊಡುವೆ. ನನ್ನ ಮೊಬೈಲ್‌ ವಾಪಸ್‌ ಬೇಕು’ ಎಂದಿದ್ದಾನೆ. ಅದಕ್ಕೊಪ್ಪದ ಆತ, ಈ ಮೊಬೈಲ್‌ ಶ್ರೀನಗರದ ಸ್ನೇಹಿತನಿಗೆ ಮಾರಾಟ ಮಾಡಿದ್ದು, ಈಗಾಗಲೇ ಆತನಿಂದ ಮುಂಗಡ ಹಣ ಪಡೆದಿರುವುದಾಗಿ ಹೇಳಿದ. ಅದರಿಂದ “ನಿನಗೆ ಹಣ ವಾಪಸ್‌ ಕೊಡಲು ಸಾಧ್ಯವಿಲ್ಲ?’ ಎಂದಿದ್ದಾನೆ. ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಈ ಗಲಾಟೆ ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಹರ್ಷ ಹಾಗೂ ಆತನ ಸ್ನೇಹಿತರು, ಶೇಖರ್‌ಗೆ ಹೊಡೆದು ಕಳುಹಿಸಿದ್ದರು. ಇದರಿಂದ ಕೆರಳಿದ ಶೇಖರ್‌, ಪ್ರತೀಕಾರ ತೀರಿಸಲು ತೀರ್ಮಾನಿಸಿದ.

ಅದರಂತೆ ಅಂದು ರಾತ್ರಿಯೇ ತನ್ನ ಗೆಳೆಯರನ್ನು ಸಂಪರ್ಕಿಸಿ ಗಲಾಟೆ ಸಂಗತಿ ತಿಳಿಸಿದ್ದ. ಕೊನೆಗೆ ಹರ್ಷ ಗುಂಪಿನ ಮೇಲೆ ದಾಳಿಗೆ ಶೇಖರ್‌ ತಂಡ ಸಜ್ಜಾಗಿತ್ತು. ಪೂರ್ವನಿಯೋಜಿತ ಸಂಚಿನಂತೆ ಮಂಗಳವಾರ ಮಧ್ಯಾಹ್ನ ಕೃತ್ಯ ಎಸಗಲು ನಿರ್ಧರಿಸಿದ್ದರು. ಪಿಇಎಸ್‌ ಕಾಲೇಜು ಹತ್ತಿರದ ವಾಟರ್‌ ಟ್ಯಾಂಕ್‌ ಪಾರ್ಕ್‌ ಹತ್ತಿರದ ಹರ್ಷ ಪಟಲಾಂನ “ಅಡ್ಡ’ದ ಗೊತ್ತಿದ್ದ ಶೇಖರ್‌, ಮಧ್ಯಾಹ್ನ 1 ಗಂಟೆಗೆ ಅಲ್ಲಿಗೆ ತನ್ನ ಸಹಚರನೊಬ್ಬನ್ನು ಕಳುಹಿಸಿ ಹರ್ಷ ಗ್ಯಾಂಗ್‌ ಅಲ್ಲಿರುವುದನ್ನು ಖಚಿತಪಡಿಸಿಕೊಂಡಿದ್ದ.

ನಂತರ ಬ್ಯಾಟ್‌, ವಿಕೆಟ್‌ ಹಾಗೂ ಚಾಕು ತೆಗೆದುಕೊಂಡು ಬೈಕ್‌ಗಳಲ್ಲಿ ಸ್ಥಳ ಬಂದ ಅವರು, ಏಕಾಏಕಿ ಹರ್ಷ ಹಾಗೂ ಆತನ ಗೆಳೆಯರ ಗುಂಪಿನ ಮೇಲೆರಗಿದ್ದಾರೆ. ಬ್ಯಾಟ್‌ ವಿಕೆಟ್‌ಗಳಿಂದ ಮನಸೋ ಇಚ್ಛೆ ಹೊಡೆದಿದ್ದಾರೆ. ಈ ವೇಳೆ ಯಶವಂತ್‌, ಚಾಕುವಿನಿಂದ ಹರ್ಷನ ಬೆನ್ನಿಗೆ ಇರಿದ್ದಿದ್ದ. ಸ್ಥಳದಲ್ಲಿ ಜನರು ಜಮಾಯಿಸುತ್ತಿದ್ದಂತೆ ಎರಡು ಗುಂಪುಗಳು ಪರಾರಿಯಾಗಿದ್ದವು. ಆದರೆ, ಎದುರಾಳಿ ಗುಂಪು ತನ್ನ ಬೆನ್ನಿಗೆ ಚಾಕು ಇರಿದಿರುವ ಸಂಗತಿ ಒಂದು ತಾಸಿನ ನಂತರ ಹರ್ಷನ ಅರವಿಗೆ ಬಂದಿತು ಎಂದು ಪೊಲೀಸರು ವಿವರಿಸಿದ್ದಾರೆ.

ಸುಳ್ಳು ಹೇಳಿದ್ದರು: ಹಲ್ಲೆಗೊಳಗಾದ ಹರ್ಷನನ್ನು ಚಿಕಿತ್ಸೆಗೆ ಕರೆದೊಯ್ದಿದ್ದ ಆತ ಗೆಳೆಯರು, ಹನುಮಂತನಗರದ 50 ಅಡಿ ರಸ್ತೆಯಲ್ಲಿರುವ ಗಣಪತಿ ಕ್ಲಿನಿಕ್‌ ಹಾಗೂ ಕಿಮ್ಸ್‌ ವೈದ್ಯರಿಗೆ “ಅಪಘಾತದಲ್ಲಿ ಗೆಳೆಯ ಗಾಯಗೊಂಡಿದ್ದಾನೆ. ವಿಭಜಕದ ಮೇಲೆ ಬಿದ್ದಿದ್ದರಿಂದ ಸರಳು ಚುಚ್ಚಿಕೊಂಡಿತು ಎಂದು ಸುಳ್ಳು ಹೇಳಿದ್ದರು. ಆದರೆ, ಸಂಜೆ ಜಯದೇವ ಆಸ್ಪತ್ರೆಗೆ ಕರೆ ತಂದಾಗ ಸತ್ಯ ಬಯಲಾಯಿತು. ಅಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು, “ಇದು ಅಪಘಾತದಿಂದ ಆದ ಗಾಯವಲ್ಲ. ಯಾರೋ ಚಾಕುವಿನಿಂದ ಬಲವಾಗಿ ಇರಿದಿದ್ದು, ಶ್ವಾಸಕೋಶಕ್ಕೂ ಹಾನಿಯಾಗಿದೆ. ಬದಕುವ ಸಾಧ್ಯತೆ ತೀರಾ ಕಡಿಮೆ’ ಎಂದು ಹೇಳಿದ್ದರು. ಅಲ್ಲದೆ ಈ ಬಗ್ಗೆ ತಿಲಕನಗರ ಠಾಣೆಗೂ ವಿಷಯ ವೈದ್ಯರು ಮುಟ್ಟಿಸಿದ್ದರು.

ಆಸ್ಪತ್ರೆ “ಮೆಮೋ’ ಪಡೆದು ಆಗಮಿಸಿದ ಸ್ಥಳೀಯ ಪೊಲೀಸರು, ಗಾಯಾಳುವಿನ ಸ್ನೇಹಿತರು ಹಾಗೂ ತಂದೆ ಜಗದೀಶ ಅವರನ್ನು ವಿಚಾರಣೆ ನಡೆಸಿದಾಗ ಗಲಾಟೆ ವಿಷಯ ತಿಳಿಯಿತು. ನಂತರ ಅವರು ಘಟನೆ ನಡೆದಿದ್ದ ಸ್ಥಳ ಹನುಮಂತನಗರ ಠಾಣಾ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಮಾಹಿತಿ ಮೇರೆಗೆ ಮೊದಲು ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಹನುಮಂತರ ನಗರ ಠಾಣೆ ಪೊಲೀಸರು, ಚಿಕಿತ್ಸೆ ಫ‌ಲಿಸದೆ ರಾತ್ರಿ ಹರ್ಷ ಸಾವನ್ನಪ್ಪಿದ ಬಳಿಕ ಪ್ರಕರಣವನ್ನು ಕೊಲೆ ಕೃತ್ಯವಾಗಿ ಬದಲಾಯಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

ಮನೆ ತೊರೆದಿದ್ದ ಆರೋಪಿಗಳು: ಹರ್ಷನ ಮೇಲೆ ಹಲ್ಲೆ ನಡೆಸಿದ ಬಳಿಕ ಶೇಖರ್‌ ಹಾಗೂ ಆತನ ಸಹಚರರು, ಅಂದು ರಾತ್ರಿಯೇ ಮನೆ ತೊರೆದು ಪರಾರಿಯಾಗಿದ್ದರು. ಆದರೆ ಮೊಬೈಲ್‌ ಕರೆಗಳ ವಿವರ ಆಧರಿಸಿ ಇಬ್ಬರು ಅಪ್ರಾಪ್ತ ಬಾಲಕರನ್ನು ಕೆ.ಪಿ.ಅಗ್ರಹಾರದಲ್ಲಿ ವಶಕ್ಕೆ ಪಡೆಯಲಾಯಿತು. ಬಳಿಕ ನಾಗವಾರ ಸಮೀಪದ ಎಲೆಕೊಪ್ಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ರಕ್ಷಣೆ ಪಡೆದಿದ್ದ ಯಶವಂತ್‌ ಹಾಗೂ ಶ್ರೀನಿವಾಸ್‌ನನ್ನು ಸೆರೆ ಹಿಡಯಲಾಯಿತು. ಇನ್ನಿಬ್ಬರು ಕಾಳಿದಾಸ ಲೇಔಟ್‌ನಲ್ಲಿ ಬಲೆಗೆ ಬಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂವರು ಪಿಯುಸಿ ವಿದ್ಯಾರ್ಥಿಗಳು
ಇನ್ನು ಈ ಬಂಧಿತರ ಪೈಕಿ ಶ್ರೀನಿವಾಸ್‌ ಸೇರಿದಂತೆ ಮೂವರು ಪಿಯುಸಿ ವಿದ್ಯಾರ್ಥಿಗಳು. ಇನ್ನುಳಿದವರು ಎಸ್‌ಎಸ್‌ಎಲ್‌ಸಿ ಪಿಯುಸಿಗೇ ಶಿಕ್ಷಣ ತೊರೆದು ವಿವಿಧ ಖಾಸಗಿ ಕಂಪನಿಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಶೇಖರ್‌ ಅಪರಾಧ ಹಿನ್ನೆಲೆವುಳ್ಳವನಾಗಿದ್ದು, ಆತನ ವಿರುದ್ಧ ಡಕಾಯಿತಿ ಸಂಚು ಆರೋಪದಡಿ ಹನುಮಂತ ನಗರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Comments are closed.