ಕರ್ನಾಟಕ

ಭೂಮಿಯಲ್ಲಿ ಅಡಗಿರುವ ನಿಧಿ “ಸುವರ್ಣ ಗೆಡ್ಡೆ”ಯ ವಿಶೇಷ

Pinterest LinkedIn Tumblr

elephant_yam_1

ಹೆಸರೇ ಹೇಳುವಂತೆ ಬಂಗಾರದ ಬಣ್ಣದ ದೊಡ್ಡದಾದ ಗೆಡ್ಡೆ. ಹಲವಾರು ಎಲೆಗಳು ಸೇರಿದಂತೆ ಕಾಣುವ ದೊಡ್ಡ ಎಲೆ. ಅಲಂಕಾರಿಕ ಸಸ್ಯವಾಗಿ ಬೆಳೆಯ ಬಹುದಾದರೂ ನಿಧಿಯಂತೆ ಭೂಮಿಯಲ್ಲಿ ಅಡಗಿರುವ ಗೆಡ್ಡೆ ಬೋನಸ್. ಆಹಾರವಾಗಿ, ಔಷಧಿಯಾಗಿ ಬಳಕೆ. ಹೆಚ್ಚು ಪ್ರಚಾರ ಪಡೆಯದಿದ್ದ ಕಾರಣ, ನಿಧಿಯಾಗಿಯೇ ಉಳಿದಿರುವ ಈ ಗೆಡ್ಡೆ ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸ ಬಹುದು.

ಕನ್ನಡದಲ್ಲಿ ‘ಸುವರ್ಣ ಗೆಡ್ಡೆ’ ಹಿಂದಿ ಭಾಷೆಯಲ್ಲಿ ‘ಸೂರನ್’ ತಮಿಳಿನಲ್ಲಿ ‘ಶೇನೈ ಕಳಂಗು’ಎಂದು ಕರೆಸಿಕೊಳ್ಳುವ ಈ ಗಿಡಕ್ಕೆ ‘ಎಲಿಫೆಂಟ್ ಯಾಮ್’ ಎಂಬ ಅನ್ವರ್ಥ ನಾಮ. ‘ಅಮಾರ್ಫೋ ಫಾಲಸ್ ಪಯೋನೊ ಫೋಲಿಯಸ್’ ಎಂಬುದು ಸಸ್ಯಶಾಸ್ತ್ರೀಯ ಹೆಸರು. ಅಪರೂಪಕ್ಕೆ ಬಿಡುವ ಇದರ ಹೂವಿನ ದುರ್ವಾಸನೆ ಸಹಿಸುವುದು ಕಷ್ಟ ಎಂಬುದು ಬೆಳೆದವರ ಅನುಭವ. ಗೆಡ್ಡೆ ಕೀಳದೆ ಬಿಟ್ಟರೆ ನಾಲ್ಕನೆಯ ವರ್ಷದಲ್ಲಿ ಹೂವು ಬಿಡ ಬಹುದು.

ಸುವರ್ಣ ಗೆಡ್ಡೆ ಮೂಲ: 
ಏಷ್ಯಾದ ಮೂಲ ಬೆಳೆ ಇದಾದರೂ, ಫಿಲಿಫೈನ್ಸ್, ಮಲೇಶಿಯ, ಇಂಡೋನೇಶಿಯ ಗಳಲ್ಲಿ ಸಹ ಬೆಳೆದು ಬಳಸಲಾಗುತ್ತಿದೆ. ಇಂಡಿಯದಲ್ಲಿ ಪಶ್ಚಿಮ ಬಂಗಾಳ,ಕೇರಳ,ಆಂಧ್ರ, ಮಹಾರಾಷ್ಟ್ರ, ಒರಿಸ್ಸಾಗಳಲ್ಲಿ ಹೆಚ್ಚು ಬೆಳೆಯಲಾಗುತ್ತೆ.

ಸಾಕಷ್ಟು ಎತ್ತರ ಬೆಳೆಯುವ ಗಿಡ. ಹೆಚ್ಚು ಹ್ಯೂಮಸ್ ಇರುವ, ಚೆನ್ನಾಗಿ ನೀರು ಬಸಿದು ಹೋಗುವಂತಿರುವ, ಮರಳು ಮಿಶ್ರಿತ ಮಣ್ಣು ಈ ಗಿಡದ ಬೆಳವಣಿಗೆಗೆ ಸೂಕ್ತ. ದೊಡ್ಡ ಗೆಡ್ಡೆಯ ಸಣ್ಣ ಚೂರುಗಳನ್ನು ನಾಟಿಗೆ ಬಳಸ ಬಹುದು. ಆದರೆ ಪ್ರತಿ ತುಂಡು 30-40 ಗ್ರಾಂಗಳಿಗಿಂತ ಕಮ್ಮಿ ಇರಬಾರದು. ಗಿಡಕ್ಕೆ ಹೆಚ್ಚಿನ ಆಧಾರವಾಗಲು ಸಹಾಯಕ ವಾಗುವಂತೆ ಗೆಡ್ಡೆಯ ತುಂಡನ್ನು ಆಳದಲ್ಲಿ ನಾಟಿ ಮಾಡ ಬೇಕು. ಕುಂಡಗಳಲ್ಲಿ ಚೀಲಗಳಲ್ಲಿ ಹಾಗೇ ಹಿತ್ತಿಲಿನಲ್ಲಿ ಬೆಳೆಯ ಬಹುದಾದ ಗಿಡ. ಬೆಳವಣಿಗೆಯ ಹಂತದಲ್ಲಿ ನೀರು ಬೇಕಾಗುತ್ತದೆ. ಆದರೆ ಗೆಡ್ಡೆಗಳ ಸುಪ್ತಾವಸ್ಥೆಯ (ಡಾರ್ಮೆನ್ಸಿ) ಸಮಯದಲ್ಲಿ ನೀರಿನ ಅವಶ್ಯಕತೆ ಕಮ್ಮಿ. ಸಮ ಪ್ರಮಾಣದ ಗೊಬ್ಬರದಿಂದ ಗೆಡ್ಡೆ ದಪ್ಪವಾಗುತ್ತದೆ.

ಅಲ್ಲಲ್ಲೇ ಕಾಡಿನಲ್ಲಿ ಬೆಳೆಯುತ್ತಿದ್ದ ನಾಟಿ(ವೈಲ್ಡ್) ಗೆಡ್ಡೆಗಳ ಹೊರ ಮೈ ತುಂಬ ಒರಟು. ಆದರೆ ನಾಡಿನಲ್ಲಿ ಬೆಳೆಯುವ ಸುಧಾರಿತ ಗೆಡ್ಡೆಗಳು ನಯವಾಗಿಲ್ಲ ದಿದ್ದರೂ, ಸ್ವಲ್ಪ ಕಡಿಮೆ ಒರಟು. ಬಂಗಾರದ ಬಣ್ಣ, ಸಾಧಾರಣ ಒರಟು ಮೈ, ಇವೆಲ್ಲ ಸುಧಾರಿತ ಬೇಸಾಯ ಕ್ರಮಗಳ, ಗೊಬ್ಬರದ ಸೇರ್ಪಡೆಯಿಂದಾದ ಮಾರ್ಪಾಡುಗಳು. ಬೆಳೆಯುವ ಹಂತದಲ್ಲಿ ಹೆಚ್ಚು ಬಿಸಿಲಿದ್ದರೆ ಅನುಕೂಲ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ , ನೀರಾವರಿಯಲ್ಲೂ ಬೆಳೆಯ ಬಹುದು. ಜೇಡಿ ಮಣ್ಣಿನಲ್ಲಿ ನೀರು ನಿಲ್ಲುವ ಸಂಭವಗಳು ಉಂಟು. ಗೆಡ್ಡೆ ಕೊಳೆಯುವ ಆತಂಕ ಸಹ. ಗಿಡದ ಸುತ್ತ ಕೈಯಾಡಿಸಿ ಮಣ್ಣು ಸಡಿಲ ಗೊಳಿಸಿದರೆ ಗಾಳಿ ಯಾಡಲು ಸಹಾಯಕವಾಗುತ್ತೆ. ಮಣ್ಣು ಏರಿಹಾಕಿ, ಮುಚ್ಚಿಗೆ ಮಾಡುವುದು ಗಿಡದ ಬೆಳವಣಿಗೆಗೆ ಅನುಕೂಲ.

ಸುಂದರವಾದ ಗಿಡ:
ಬಹಳ ದಿನ ಬಾಳಿಕೆ ಬರುವ ಗೆಡ್ಡ್ಡೆಯಾದ್ದರಿಂದ , ಹೆಚ್ಚು ದಿನ ಇಟ್ಟು ಬಳಸ ಬಹುದು. ಕೆಲವು ಕೃಷಿಕರು ಇದನ್ನು ಏಕ ಬೆಳೆಯಾಗಿ ಬೆಳೆದಿದ್ದಾರೆ. ಇತ್ತೀಚೆಗೆ ಸಾವಯವ ಕೃಷಿಯಲ್ಲಿ ಅಂತರ ಬೆಳೆಯಾಗಿ ಸ್ಥಾನ ಗಳಿಸಿದೆ. ತೆಂಗಿನ, ಅಡಿಕೆಯ ತೋಟಗಳಲ್ಲಿ, ಬಾಳೆ ಮಧ್ಯೆ ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಈ ಗಿಡಕ್ಕಾಗಿ ಪ್ರತ್ಯೇಕ ಗೊಬ್ಬರ ನೀರು ಕೊಡಬೇಕಿಲ್ಲ. ಒಮ್ಮೆ ನಾಟಿ ಮಾಡಿದರೆ ನಾಲ್ಕು ವರ್ಷದ ವರೆಗೆ ಯೋಚನೆ ಇಲ್ಲದೆ ಬೆಳೆಯುತ್ತೆ.8-12 ತಿಂಗಳ ಬೆಳೆಯಾದರೂ, ಮೊದಲೆರಡು ವರ್ಷ ಗೆಡ್ಡೆ ದಪ್ಪವಾಗಿರುವುದಿಲ್ಲ. ನಾಲ್ಕನೆಯ ವರ್ಷಕ್ಕೆ ಗೆಡ್ಡೆ ಸುಮಾರು 3-9 ಕೆಜಿಯಷ್ಟು ತೂಕ ಪಡೆದುಕೊಳ್ಳುತ್ತದೆ.

ಗಿಡದ ಎಲೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿದಾಗ, ಗೆಡ್ಡೆ ಕೀಳ ಬಹುದು. ಹಲವಾರು ತಿನಿಸುಗಳನ್ನು ಮಾಡ ಬಹುದಾದ ಈ ಗೆಡ್ಡೆ ನಿಮ್ಮಲ್ಲಿದ್ದರೆ ದಿಢೀರನೆ ಬರುವ ಅತಿಥಿಗಳನ್ನು ಸುಧಾರಿಸುವುದು ಸುಲಭ. ತಮಿಳುನಾಡಿನವರು ಮಾಡುವ ‘ಅವೈಲ್’ ಗೆ ಈ ಗೆಡ್ಡೆ ಇರಲೇ ಬೇಕು. ‘ಪೊರಿಯಲ್’ ಸಹ ಬಹು ಬೇಡಿಕೆಯುಳ್ಳದ್ದು.

Comments are closed.