ಕರ್ನಾಟಕ

ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಕ್ರಮ ಮನೆಗಳ ಸಕ್ರಮಕ್ಕೆ ಗಡವು ವಿಸ್ತರಣೆ

Pinterest LinkedIn Tumblr

kagodu
ಬೆಂಗಳೂರು, ಡಿ. ೨೩- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದನ್ನು ಸಕ್ರಮಗೊಳಿಸಲು ನಿಗಧಿಪಡಿಸಿದ್ದ ಗಡುವನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಣೆ ಮಾಡಿರುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ತಿಳಿಸಿದರು.
ಅಕ್ರಮ ಸಕ್ರಮಕ್ಕೆ ಈ ತಿಂಗಳ 20 ರವರೆಗೂ ಅವಕಾಶ ಕಲ್ಪಿಸಲಾಗಿತ್ತು. ಸಾಕಷ್ಟು ಮಂದಿ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಗಿಲ್ಲ. ಈ ಹಿನ್ನೆಲೆಯಲ್ಲಿ ಅವಧಿಯನ್ನು ಬರುವ ಜನವರಿ 21 ರವರೆಗೆ ವಿಸ್ತರಣೆ ಮಾಡಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ 50 ರಿಂದ 80 ಚದುರಡಿ ವಿಸ್ತೀರ್ಣದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ 30×40 ಚದುರ ಅಡಿ ವಿಸ್ತೀರ್ಣದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೂ 15 ರಿಂದ 20 ಲಕ್ಷ ಅರ್ಜಿಗಳು ಬಂದಿವೆ. ಇಷ್ಟೇ ಪ್ರಮಾಣದ ಅರ್ಜಿಗಳು ಇನ್ನೂ ಬರುವ ಸಾಧ್ಯತೆ ಇದೆ. ಎಲ್ಲ ಫಲಾನುಭವಿಗಳಿಂದ ಸೂಕ್ತ ಶುಲ್ಕ ವಸೂಲಿ ಮಾಡುವ ಮೂಲಕ ಅವರಿಗೆ ಸ್ವಾದೀನಪತ್ರಗಳನ್ನು ಕೊಡಲು ತೀರ್ಮಾನಿಸಲಾಗಿದೆ ಎಂದರು.
ಗ್ರಾಮ ಪಂಚಾಯ್ತಿಯ ಗ್ರಾಮ ಲೆಕ್ಕಿಗ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಪ್ರತಿಯೊಂದು ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳಿಗೆ ಭೇಟಿ ಕೊಟ್ಟು ಅವರಿಂದ ಅರ್ಜಿ ಪಡೆದು ಸಕ್ರಮಗೊಳಿಸುವಂತೆ ಸೂಚಿಸಲಾಗಿದೆ ಎಂದರು.
50×80 ಚದುರಡಿ ವಿಸ್ತೀರ್ಣದ ಗ್ರಾಮೀಣ ಪ್ರದೇಶದ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡವರಿಗೆ 6 ಸಾವಿರ ರೂ. ಶುಲ್ಕ ಪಾವತಿಸಬೇಕು ಎಂದು ನಿಗದಿಪಡಿಸಲಾಗಿದೆ. ಈ ಮೊತ್ತವನ್ನು ಶೇ. 50 ರಷ್ಟು ಇಳಿಸಲು ಉದ್ದೇಶಿಸಲಾಗಿದೆ. ಅದೇ ರೀತಿ 30×40 ಚದುರಡಿ ವಿಸ್ತೀರ್ಣದಲ್ಲಿ ಮನೆ ಕಟ್ಟಿಕೊಂಡವರಿಗೆ 1 ಸಾವಿರಕ್ಕೂ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಅದನ್ನು ಶೇ. 50 ಕ್ಕೆ ಇಳಿಸಲಾಗುವುದು. ನಗರ ಪ್ರದೇಶಗಳಲ್ಲಿನ ಮನೆಗಳ ಅಕ್ರಮ ಸಕ್ರಮಕ್ಕೂ ನಿಗದಿಪಡಿಸಿರುವ ಹಣವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಸಕ್ರಮಗೊಳಿಸಲು ಕಂದಾಯ ಇಲಾಖೆಯ 94(ಸಿ) ಅನ್ವಯ ಸುತ್ತೋಲೆ ಹೊರಡಿಸಲಾಗಿದೆ. ಅದೇ ರೀತಿ ನಗರ ಪ್ರದೇಶಗಳಲ್ಲಿನ ಅಕ್ರಮ ಮನೆಗಳ ಸಕ್ರಮಕ್ಕೆ 94(ಸಿಸಿ) ಅನ್ವಯ ಆದೇಶ ಹೊರಡಿಸಲಾಗಿದೆ ಎಂದರು.
ಅಕ್ರಮ ಸಕ್ರಮ ಯೋಜನೆಯ ಲಾಭವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು. ನಿಗದಿತ ಅರ್ಜಿಯನ್ನು ಸಲ್ಲಿಸಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮ ಮಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದರು.

Comments are closed.