ಕರ್ನಾಟಕ

ಕೆಎಎಸ್ ಅಧಿಕಾರಿಯ ಅಕ್ರಮ ಆಸ್ತಿ ಬಯಲುಗೊಳಿಸಿದ ಕಾರು ಚಾಲಕ ಆತ್ಮಹತ್ಯೆ

Pinterest LinkedIn Tumblr

ramesh-finalಮಂಡ್ಯ: ಅಕ್ರಮ ಆಸ್ತಿ ಗಳಿಸಿದ್ದ ಕೆಎಎಸ್‌ ಅಧಿಕಾರಿಯೊಬ್ಬರು ಹಾಕಿದ ಒತ್ತಡ ಹಾಗೂ ಮಾನಸಿಕ ಕಿರುಕುಳ ಸಹಿಸದೆ ಅವರ ಕಾರು ಚಾಲಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ.

ಮದ್ದೂರು ತಾಲ್ಲೂಕಿನ ಕಾಡಕೊತ್ತನಹಳ್ಳಿಯ ರಮೇಶಗೌಡ (30) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಸುದೀರ್ಘ ಪತ್ರದಲ್ಲಿ ಅವರು, ತನ್ನ ಅಧಿಕಾರಿಯಾಗಿದ್ದ ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯಕ್‌ ಅವರು ಎಲ್ಲೆಲ್ಲಿ ಅಕ್ರಮವಾಗಿ ಆಸ್ತಿ ಮಾಡಿದ್ದರು ಎಂಬುದನ್ನು ವಿವರಿಸಿದ್ದಾರೆ.

ಬೆಳಗಾವಿಯ ಸದಾಶಿವನಗರದಲ್ಲಿ ಬಂಗಲೆ, ಹೊಸಪೇಟೆಯಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಾಲ ಮಾಡಿ ಅಲ್ಲಿನ ಬಂಬೂ ಬಜಾರ್‌ ಬಳಿ 30 ಗುಂಟೆ ಖಾಲಿ ನಿವೇಶನ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹೊಣಬಪುರದಲ್ಲಿ 30 ಎಕರೆ ಭೂಮಿ ಖರೀದಿಸಿದ್ದಾರೆ ಎಂದು ಅದರಲ್ಲಿ ನಮೂದಿಸಿದ್ದಾರೆ.

ಮರಿಯಮ್ಮನಹಳ್ಳಿಯಲ್ಲಿ ಅಣ್ಣ –ತಮ್ಮಂದಿರ 10 ಎಕರೆ ಭೂಮಿ, ಬೆಂಗಳೂರಿನ ಎಂ.ಎಸ್‌. ಪಾಳ್ಯದ ಬಳಿ ಡೋನಾಟಾ ಕಂಪೆನಿಯಲ್ಲಿ ಅನಿಲ್‌ ಜೈನ್‌ ಎಂಬುವವರ ಬಳಿ 5 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಯಲಹಂಕದಲ್ಲಿ ಸ್ವಂತ ಮನೆ ಹೊಂದಿದ್ದು, ಪಕ್ಕದಲ್ಲಿ ಮೂರು ನಿವೇಶನಗಳನ್ನು ಅವರ ಹೆಂಡತಿ ಹೆಸರಿನಲ್ಲಿ ಖರೀದಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರ ತಮ್ಮ ಕೃಷ್ಣನಾಯಕ ಹೆಸರಿನಲ್ಲಿ ಪೆಟ್ರೊಲ್‌ ಬಂಕ್‌ ಮಾಡಿದ್ದಾರೆ. ಹಾಗೆಯೇ ಮೂರು ದುಬಾರಿ ಕಾರು ಖರೀದಿಸಿದ್ದಾರೆ. ಇಲಾಖೆಯ ತನಿಖೆ ಪ್ರಕರಣ ಮುಚ್ಚಲು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಗೆ 25 ಲಕ್ಷ ಲಂಚ ನೀಡಿದ್ದಾರೆ. ಕೃಷ್ಣಯ್ಯ ಶೆಟ್ಟಿ ಅಂಡ್‌ ಸನ್ಸ್‌ನಲ್ಲಿ ಒಂದು ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದ್ದಾರೆ. 50 ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಕೈಯಲ್ಲಿ ಹಾಕಿದ್ದಾರೆ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಅವರನ್ನು ಪಾರಿಜಾತ ಗೆಸ್ಟ್‌ ಹೌಸ್‌ನಲ್ಲಿ ಭೇಟಿ ಮಾಡಿದ್ದಾರೆ. 25 ಕೋಟಿ ಕೊಡುತ್ತೇನೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿಯಿಂದ ಚುನಾವಣೆಗೆ ನಿಲ್ಲುವ ಬಗೆಗೆ ಚರ್ಚೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ರೆಡ್ಡಿ ಅವರ ಮಗಳ ಮದುವೆ 25 ಕೋಟಿ ವೈಟ್‌ ಮನಿ ಕೊಡಿಸಿ, ಅವರ ಬಳಿ ಇದ್ದ 100 ಕೋಟಿ ಹಣವನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ಇದನ್ನೆಲ್ಲ ತಿಳಿದಿದ್ದ ನನಗೆ ಬೇರೆಯವರಿಗೆ ಹೇಳಿದರೆ ಜೀವ ಬೆದರಿಕೆ ಹಾಕಿದ್ದಾರೆ. ರೌಡಿಗಳಿಂದ ಕೊಲೆ ಮಾಡಿಸುವ ಬೆದರಿಕೆಯೂ ನೀಡಿದ್ದಾರೆ ಎಂದಿದ್ದಾರೆ.

‘ನನ್ನ ಕೊನೆ ಆಸೆಯಂತೆ ಅಕ್ಕನ ಮಗ ಮನೋಜ್‌ಗೌಡ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಬೇಕು. ನನ್ನ ಸಾವಿಗೆ ಅಧಿಕಾರಿ ಭೀಮಾನಾಯ್ಕ ಹಾಗೂ ಅವರ ಮನೆಯ ವಾಹನ ಚಾಲಕ ಮಹಮದ್‌ ಕಾರಣ ಎಂದು ದೂರಿದ್ದಾರೆ.

Comments are closed.