ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಫ್ ಅವರನ್ನು ಟೈಮ್ಸ್ ಪತ್ರಿಕೆ 2016ರ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದೆ.
ಹಿಲರಿ ಕ್ಲಿಂಟನ್, ಟರ್ಕಿ ಅಧ್ಯಕ್ಷ ಎರ್ಡೋಗನ್, ಬರಾಕ್ ಒಬಾಮ, ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿ ಟ್ರಂಪ್ ‘ವರ್ಷದ ವ್ಯಕ್ತಿ’ ಗೌರವ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನುಭವಿಸಿದ ಹಿಲರಿ ಕ್ಲಿಂಟನ್ ಎರಡನೇ ಸ್ಥಾನ ಪಡೆದಿದ್ದಾರೆ ಎಂದು ಬುಧವಾರ ಸಂಜೆ ಟೈಮ್ಸ್ ಪತ್ರಿಕೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ನಂತರ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಇದು ನನಗೆ ಸಿಕ್ಕಿರುವ ಗೌರವ, ನಾನು ಟೈಮ್ಸ್ ಪತ್ರಿಕೆ ಓದುತ್ತಾ ಬೆಳೆದಿದ್ದೇನೆ. ಇದೊಂದು ಅತ್ಯುತ್ತಮ ಪತ್ರಿಕೆ. ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿರುವುದು ನನಗೆ ಅತೀವ ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಟೈಮ್ಸ್ ಪತ್ರಿಕೆ ಆಯ್ಕೆ ಮಾಡಿದ್ದ ಅಂತಿಮ 11 ಜನರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದರು. ಇದಕ್ಕೂ ಮುನ್ನ ನರೇಂದ್ರ ಮೋದಿ ಆನ್ಲೈನ್ ಮತ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಆದರೆ ಟೈಮ್ಸ್ ಸಂಪಾದಕ ಮಂಡಳಿ ಬಿಡುಗಡೆ ಮಾಡಿದ ಅಂತಿಮ ಪಟ್ಟಿಯಲ್ಲಿ ಮೋದಿ ಅವರಿಗೆ ಸ್ಥಾನ ಸಿಗಲಿಲ್ಲ.
Comments are closed.