ಬೆಂಗಳೂರು: ಜನ್‍ಧನ್ ಖಾತೆದಾರರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಬೆಂಗಳೂರಲ್ಲಿ ಜನ್‍ಧನ್ ಖಾತೆ ಹೊಂದಿರುವ 18 ಮಂದಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಐನೂರು ಮತ್ತು ಸಾವಿರ ರೂಪಾಯಿ ನೋಟುಗಳ ನಿಷೇಧದ ಬಳಿಕ ಈ ಖಾತೆಗಳಲ್ಲಿ ಠೇವಣಿಯ ಮೊತ್ತ ಏಕಾಏಕಿ ಹೆಚ್ಚಳವಾಗಿದ್ದು, ಆರೂವರೆ ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಜಮೆಯಾದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಯಾಗಿದೆ. ಖಾತೆದಾರರಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.
ಜನ್‍ಧನ್ ಖಾತೆದಾರರು ತಾತ್ಕಾಲಿಕವಾಗಿ 10 ಸಾವಿರ ರೂ. ಹಣ ಮಾತ್ರ ಡ್ರಾ ಮಾಡಬಹುದು ಎಂದು ಬುಧವಾರದಂದು ಅರ್‍ಬಿಐ ಹೇಳಿದೆ. ಅಲ್ಲದೆ ನೋಟ್ ಬ್ಯಾನ್ ನಂತರ ಯಾವುದೇ ಖಾತೆಯಲ್ಲಿ 2.5 ಲಕ್ಷಕ್ಕಿಂತ ಹೆಚ್ಚಿನ ಹಣ ಠೇವಣಿಯಾಗಿದ್ದಲ್ಲಿ ಅಂತಹ ಖಾತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
ಕಪ್ಪುಹಣ ಹೊಂದಿರುವವರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಶೇ.50 ರಷ್ಟು ತೆರಿಗೆ ಹಾಗೂ ದಂಡ ಕಟ್ಟಿ ತಮ್ಮ ಹಣವನ್ನು ಸಕ್ರಮ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಶೇ.50ರಷ್ಟು ತೆರಿಗೆ ನೀಡಿ ಹಾಗೂ ಶೇ.25ರಷ್ಟು ಹಣವನ್ನ 4 ವರ್ಷದವರೆಗೆ ಠೇವಣಿದಾರ ಬಳಸುವಂತಿಲ್ಲ. ಈ ಹಣಕ್ಕೆ ಸರ್ಕಾರ 4 ವರ್ಷದ ಅವಧಿಗೆ ಯಾವುದೇ ಬಡ್ಡಿ ನೀಡುವುದಿಲ್ಲ. ಬದಲಾಗಿ ಬಡವರಿಗೆ ಮೂಲಭೂತ ಅಗತ್ಯತೆಗಳನ್ನು ಒದಗಿಸಲು ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಉಳಿದ ಶೇ.25ರಷ್ಟು ಹಣ ಮಾತ್ರ ಠೇವಣಿದಾರರಿಗೆ ಬಳಸಿಕೊಳ್ಳಲು ಸಿಗುತ್ತದೆ. ಒಂದು ವೇಳೆ ಠೇವಣಿದಾರ ಇದನ್ನು ನಿರಾಕರಿಸಿದ್ರೆ ಶೇ.85 ರಷ್ಟು ಹಣವನ್ನು ತೆರಿಗೆ ಹಾಗೂ ದಂಡದ ರೂಪದಲ್ಲಿ ಸರ್ಕಾರ ಪಡೆದುಕೊಳ್ಳುತ್ತದೆ.
ಒಂದು ವೇಳೆ ಘೋಷಣೆಯಾಗದ ಕಪ್ಪು ಹಣವನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ರೆ ಆ ಹಣದ ಶೇ.90 ರಷ್ಟು ಭಾಗವನ್ನು ತೆರಿಗೆ ಹಾಗೂ ದಂಡದ ರೂಪದಲ್ಲಿ ಸರ್ಕಾರ ಪಡೆದುಕೊಳ್ಳಲಿದ್ದು, ಉಳಿದ ಶೇ.10 ರಷ್ಟು ಹಣ ಮಾತ್ರ ಮಾಲೀಕನಿಗೆ ಬಳಸಿಕೊಳ್ಳಲು ಸಿಗುತ್ತದೆ.