ಕರ್ನಾಟಕ

ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸಿಗೆ, ದಿಂಬುಗಳಿಂದಲೂ ಕಾಂಗ್ರೆಸ್ ಸರಕಾರ ಹಣ ಲೂಟಿ: ಈಶ್ವರಪ್ಪ

Pinterest LinkedIn Tumblr

eshwarappa
ಬೆಂಗಳೂರು(ನ. 27): ಹಿಂದುಳಿದ ವರ್ಗದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಈಗ ಆ ವರ್ಗಕ್ಕೆ ಏನು ಮಾಡಿದ್ದಾರೆ? ತಾವು ಏರಿದ ಏಣಿಯನ್ನೇ ಅವರು ಮರೆತುಬಿಟ್ಟಿದ್ದಾರೆ ಎಂದು ರಾಜ್ಯದ ಬಿಜೆಪಿ ನಾಯಕರು ಟೀಕಿಸಿದ್ದಾರೆ. ಇಂದು ಪ್ಯಾಲೇಸ್ ಮೈದಾನದಲ್ಲಿ ನಡೆಯುವ ಹಿಂದುಳಿದ ವರ್ಗಗಳ ಏಕತಾ ಸಮಾವೇಶದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಎಸ್ ಈಶ್ವರಪ್ಪ, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಾಸಿಗೆ, ದಿಂಬುಗಳಿಂದಲೂ ಈ ಸರಕಾರ ಹಣ ಹೊಡೆದಿದೆ ಎಂದು ರಾಜ್ಯ ಸರಕಾರದ ವಿರುದ್ಧ ಅರೋಪ ಮಾಡಿದ್ದಾರೆ.
ಅಧಿಕಾರಕ್ಕೆ ಬರುವ ಮುನ್ನ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ ಎನ್ನುತ್ತಿದ್ದವರು ಈಗ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪೂ ಸುಲ್ತಾನ್ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯನವರ ಮೇಲೆ ಈಶ್ವರಪ್ಪ ಹರಿಹಾಯ್ದಿದ್ದಾರೆ.
ಮುಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ ಎಂದು ಪುನರುಚ್ಚರಿಸಿದ ಈಶ್ವರಪ್ಪ, “ಹಿಂದುಳಿದ ವರ್ಗಗಳಿಗಾಗಿ ಯಡಿಯೂರಪ್ಪನವರು ಸಾವಿರ ಕೋಟಿಯ ಯೋಜನೆ ಮಾಡಿದ್ದಾರೆ. ಸಿದ್ದರಾಮಯ್ಯನವರೇ ನೀವೇನು ಮಾಡಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಮಾತನಾಡಿದ ಜಗದೀಶ್ ಶೆಟ್ಟರ್, ಮುಂದಿನ ಬಾರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಿರುವ ರಾಜ್ಯ ಸರಕಾರ ಜನವಿರೋಧಿಯಾಗಿದೆ. ಈ ಬೃಹತ್ ಸಮಾವೇಶ ನೋಡಿ ಕಾಂಗ್ರೆಸ್ಸಿಗರಿಗೆ ನಿದ್ರೆ ಬರುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಜಯಶಾಲಿಯಾಗಲಿದೆ. ಕಾಂಗ್ರೆಸ್ ಸರಕಾರ ತೊಲಗಲಿದೆ ಎಂದು ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಇನ್ನು, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾಂಗ್ರೆಸ್’ನ ಮುಖವಾಡ ಕಳಚಿ ಬಿದ್ದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೋದಿ ಮಾಡಿರುವ ನೋಟು ನಿಷೇಧದ ಕ್ರಮವನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಯಾರ ಪರ ಇದೆ ಎಂಬುದು ಜನತೆಗೆ ತಿಳಿದಂತಾಗಿದೆ. ಭಯೋತ್ಪಾದಕರಿಗೆ ದುಡ್ಡು ಕೊಡುತ್ತಿದ್ದವರ ಪರವಾಗಿ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವೆಯೂ ಆದ ಶೋಭಾ ಕರಂದ್ಲಾಜೆ ವಿಷಾದಿಸಿದ್ದಾರೆ.

Comments are closed.