ಕರ್ನಾಟಕ

ಬಿಜೆಪಿಯಿಂದ ಇಂದು ನಡೆಯುವ ಏಕತಾ ಸಮಾವೇಶಕ್ಕೆ ಸಕಲ ಸಿದ್ಧತೆ

Pinterest LinkedIn Tumblr

ekataಬೆಂಗಳೂರು, ನ. ೨೬- ರಾಜ್ಯ ಬಿಜೆಪಿ ನಾಳೆ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಹಿಂದುಳಿದ ವರ್ಗಗಳ ಏಕತಾ ಸಮಾವೇಶಕ್ಕೆ ಸಕಲ ಸಿದ್ದತೆಗಳು ನಡೆದಿದ್ದು, ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ.
ಈ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳುತ್ತಿರುವುದರಿಂದ ಈ ಸಮಾವೇಶವನ್ನು ಯಶಸ್ವಿಗೊಳಿಸಲು ರಾಜ್ಯ ಬಿಜೆಪಿ ನಾಯಕರು ಶ್ರಮ ವಹಿಸಿದ್ದು, ನಾಳೆ 11.30ಕ್ಕೆ ಈ ಸಮಾವೇಶವನ್ನು ಅಮಿತ್‌ಶಾ ನಗಾರಿ ಭಾರಿಸುವ ಮೂಲಕ ಉದ್ಘಾಟಿಸಲಿದ್ದಾರೆ.
ಈ ಸಮಾವೇಶಕ್ಕಾಗಿ ಸುಮಾರು 300 ಅಡಿ ಅಗಲ ಮತ್ತು 60 ಅಡಿ ಉದ್ದ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಮುಖ್ಯ ವೇದಿಕೆ 80-60 ನಿರ್ಮಿಸಲಾಗಿದ್ದು, ಸುಮಾರು 23 ಮಂದಿಗೆ ಮುಖ್ಯ ವೇದಿಕೆಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆಗೆ ಹೊಂದಿಕೊಂಡಂತೆ ಎರಡೂ ಕಡೆ 4×60 ವಿಸ್ತ್ರೀಣದಲ್ಲಿ ಸಣ್ಣ ವೇದಿಕೆಗಳನ್ನು ಸಿದ್ದಪಡಿಸಲಾಗಿದ್ದು, ಇಲ್ಲಿ ಪಕ್ಷದ ಶಾಸಕರು, ಸಂಸದರು, ಬಿಬಿಎಂಪಿ ಸದಸ್ಯರು ಹಾಗೂ ಪ್ರಮುಖ ಮುಖಂಡರುಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಈ ಸಮಾವೇಶಕ್ಕೆ ರಾಜ್ಯದ ವಿವಿಧೆಡೆಗಳಿಂದ 50 ಸಾವಿರ ಜನರು ಬರುವ ನಿರೀಕ್ಷೆಯಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯಲು ನೀರು, ಊಟ ಇವುಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಸಮಾವೇಶದ ಯಶಸ್ವಿಗಾಗಿಯೇ ಬಿಜೆಪಿ 33 ವಿಭಾಗಗಳನ್ನು ಮಾಡಿಕೊಂಡು ಅರಮನೆ ಮೈದಾನದಲ್ಲೆ ಸಮಾವೇಶಕ್ಕಾಗಿಯೇ ಪ್ರತ್ಯೇಕ ಕಚೇರಿಯನ್ನು ಆರಂಭಿಸಲಾಗಿದೆ.
ಸಮಾವೇಶದಲ್ಲಿ ಪಾಲ್ಗೊಳ್ಳುವ ಜನರಿಗಾಗಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, 140 ಧ್ವನಿವರ್ಧಕಗಳನ್ನು, 12 ಎಲ್.ಇ.ಡಿ. ಪದಕಗಳನ್ನು ಅಳವಡಿಸಲಾಗಿದೆ. ಊಟ, ನೀರು ಮತ್ತಿತರ ಅಗತ್ಯ ಸೌಲಭ್ಯಕ್ಕಾಗಿಯೇ 160 ಕೌಂಟರ್‌ಗಳನ್ನು ವ್ಯವಸ್ಥೆ ಮಾ‌ಡಲಾಗಿದೆ.
ಹಿಂದುಳಿದ ವರ್ಗಗಳ ಸಮಾವೇಶಕ್ಕೆ ನಡೆದಿರುವ ಸಿದ್ದತೆಗಳನ್ನು ನಿನ್ನೆ ಸಂಜೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಖುದ್ಧು ವೀಕ್ಷಿಸಿ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರ ವಾಹನಗಳಿಗೆ ಪ್ರತ್ಯೇಕ ನಿಲ್ದಾಣ ವ್ಯವಸ್ಥೆಯನ್ನು ಮಾಡಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಅರಮನೆ ಮೈದಾನದಲ್ಲಿ ನಡೆದಿರುವ ಬಿಜೆಪಿಯ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸುತ್ತಿರುವುದರಿಂದ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾವಿರಾರು ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

Comments are closed.