ಕರ್ನಾಟಕ

ನೋಟು ನಿಷೇಧದಿಂದ ಕೈಗಾರಿಕೆ, ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು: ಸೀತಾರಾಂ ಯಚೂರಿ

Pinterest LinkedIn Tumblr

sitaram-yechuryಬೆಂಗಳೂರು, ನ. ೨೬- ನರೇಂದ್ರ ಮೋದಿಯವರ ನೋಟು ನಿಷೇಧ ದೇಶದ ಕೈಗಾರಿಕೆ, ಕೃಷಿ ಕ್ಷೇತ್ರ ಸೇರಿದಂತೆ, ಬಡ ಕೂಲಿಕಾರರ ಹಾಗೂ ಮಧ್ಯಮ ವರ್ಗದ ಜನರ ಜೀವನದಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಸಿಪಿಐಎಂನ ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ್ ಯಚೂರಿ ಆರೋಪಿಸಿದರು.
ಅವರು ನಗರದ ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಮಾಧ್ಯಮಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪೂರ್ವ ಸಿದ್ಧತೆ ಇಲ್ಲದೆ, ನರೇಂದ್ರ ಮೋದಿ ಅವರು, 500 ಹಾಗೂ 1000 ರೂ. ನೋಟುಗಳನ್ನು ನಿಷೇಧ ಮಾಡಿದ್ದಾರೆ. ನೋಟು ನಿಷೇಧ ಶ್ರೀಮಂತರು ಹಾಗೂ ಉದ್ಯಮಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನೋಟು ನಿಷೇಧದ ಪರಿಣಾಮ ಸಂಪೂರ್ಣವಾಗಿ ಕೂಲಿಕಾರರು, ಮಧ್ಯಮ ವರ್ಗ ಹಾಗೂ ಬಡವರ್ಗದ ಜನರ ಮೇಲಾಗಿದೆ. ನರೇಂದ್ರ ಮೋದಿಯವರು ಇಂತಹ ಜನರನ್ನು ಗುರಿಯಾಗಿಸಿಕೊಂಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ನೋಟು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ. ಆದರೆ ಸೃಷ್ಟಿಸಿರುವ ಗೊಂದಲ ನಿವಾರಣೆ ಸಾಮರ್ಥ್ಯ ಸರ್ಕಾರಕ್ಕೆ ಇಲ್ಲ ಎಂದ ಅವರು, ನೋಟು ನಿಷೇಧದ ಕ್ರಮದಿಂದ ಕಪ್ಪು ಹಣದ ಮೇಲಿನ ನಿಯಂತ್ರಣ, ಭ್ರಷ್ಟಾಚಾರ ಹಾಗೂ ಉಗ್ರಗಾಮಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅಧಿಕಾರಕ್ಕೂ ಮೊದಲು ನರೇಂದ್ರ ಮೋದಿ ಅವರು ವಿದೇಶದಲ್ಲಿನ ಕಪ್ಪುಹಣ ವಾಪಸ್ ತರುವುದಾಗಿ ಭರವಸೆ ನೀಡಿದ್ದರು. ಅದು ಸಾಧ್ಯವಾಗದ ಹಿನ್ನಲೆ ದೇಶದಲ್ಲಿರುವ ಕಪ್ಪು ಹಣ ನಿಯಂತ್ರಣಕ್ಕೆ ನೋಟು ನಿಷೇಧ ಕ್ರಮವನ್ನು ಕೈಗೊಂಡಿರುವುದಾಗಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನರೇಂದ್ರ ಮೋದಿಯವರು ಸಂಸತ್ತಿನ ಅಧಿವೇಶನದಲ್ಲಿ ಹಿಂದಿನ ಯುಪಿಎ ಸರ್ಕಾರದ ಪ್ರಧಾನ ಮಂತ್ರಿ ಮೌನಿ ಪ್ರಧಾನ ಮಂತ್ರಿ ಮನ್ಮೋಹನ್ ಸಿಂಗ್ ಹಾದಿಯನ್ನು ಹಿಡಿದಿದ್ದಾರೆ.
ಅಧಿವೇಶನದಲ್ಲಿ ವಿರೋಧ ಪಕ್ಷಗಳು ಕೇಳುವ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ, ಮೋದಿ ಸಹ ಮೌನಿ ಮೋದಿಯಾಗಿದ್ದಾರೆಂದು ವ್ಯಂಗ್ಯವಾಡಿದ ಅವರು, ಸಂಸತ್ತಿನ ಹೊರಭಾಗದಲ್ಲಿ ಯೋಜನೆಗಳನ್ನು ಘೋಷಣೆ ಮಾಡುವ ನರೇಂದ್ರ ಮೋದಿಯವರು ಸಂಸತ್ತಿನ ಒಳಭಾಗದಲ್ಲಿ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸದೆ, ಸಂಸತ್ತಿನ ವ್ಯವಸ್ಥೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ದಿ. 28 ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ವಿವಿಧ ಸಂಘಟನೆಗಳು, ಸಾರ್ವಜನಿಕರು, ಹೆಚ್ಚಿನ ಸಂಖ್ಯೆಯಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಸಿಪಿಐಎಂನ ರಾಜ್ಯ ಮುಖಂಡ ಶ್ರೀರಾಮ ರೆಡ್ಡಿ ಉಪಸ್ಥಿತರಿದ್ದರು.

Comments are closed.