ರಾಷ್ಟ್ರೀಯ

ವಿದೇಶಕ್ಕೆ ಪರಾರಿಯಾಗಿರುವ ಅಪರಾಧಿಗಳನ್ನು ಹಿಡಿದು ತಂದು ಕಟಕಟೆಗೆ ನಿಲ್ಲಿಸಿ: ಸುಪ್ರೀಂ

Pinterest LinkedIn Tumblr

suprimನವದೆಹಲಿ,ನ.26-ಕಾನೂನು ಜಾರಿ ಸಂಸ್ಥೆಗಳ ಹಿಡಿತದಿಂದ ಪಾರಾಗಲು ನೂರಕ್ಕೂ ಹೆಚ್ಚು ಅಪರಾಧಿಗಳು ಅಥವಾ ಆರೋಪಿಗಳು ದೇಶದಿಂದ ಪರಾರಿಯಾಗಿ ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಂತಹವರನ್ನು ಕೇಂದ್ರ ಸರ್ಕಾರ ಹಿಡಿದು ತಂದು ವಿಚಾರಣೆಯ ಕಟಕಟೆಯಲ್ಲಿ ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಎಸ್.ಖೇಹರ್ ಮತ್ತು ಅರುಣ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು `ಅಪರಾಧಿಗಳು ಸುಲಭವಾಗಿ ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಅಂತಹವರನ್ನು ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸಬೇಕು’ ಎಂದಿದೆ.

ಮದ್ಯದ ದೊರೆ ವಿಜಯಮಲ್ಯ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ `ಇತ್ತೀಚೆಗೆ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ವಿದೇಶಗಳಿಗೆ ಪರಾರಿಯಾಗುತ್ತಿದ್ದಾರೆ’ ಎಂದು ನ್ಯಾಯ ಪೀಠ ಹೇಳಿದೆ.

ಸಾಲ ಮರುಪಾವತಿ ಮಾಡದ ಮಲ್ಯ ವಿರುದ್ಧ ನ್ಯಾಯಾಲಯಗಳು ಅವರು ಲಂಡನ್‍ಗೆ ಪರಾರಿಯಾದ ಬಳಿಕ ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಿವೆ.

ಇಂತಹವರನ್ನು ಕಾನೂನು ಹೇಗೆ ಹಿಡಿಯಬಲ್ಲದು ಎಂಬುದನ್ನು ಉದಾಹರಣೆಯಾಗಿಸಲು ಅವರನ್ನು ಹಿಡಿದು ತರಬೇಕು ಎಂದು ನ್ಯಾಯಾಲಯ ಹೇಳಿದೆ.

ಕ್ರಿಮಿನಲ್ ಮೊಕದ್ದಮೆಯೊಂದರಲ್ಲಿ ವಿಚಾರಣೆ ಎದುರಿಸಲು ನಿರಾಕರಿಸಿ ಲಂಡನ್‍ನಲ್ಲಿ ನೆಲೆಸಿರುವ ಮಹಿಳಾ ವಾಣಿಜ್ಯೋದ್ಯಮಿ ರಿತಿಕಾ ಅವಸ್ತಿ ಎಂಬಾಕೆಯನ್ನು ಭಾರತಕ್ಕೆ ಕರೆತರಲು ಅವಶ್ಯಕವಿರುವ ಎಲ್ಲಾ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.

ರೋಗಗ್ರಸ್ಥ ಪತಿಯನ್ನು ಭೇಟಿ ಮಾಡಬೇಕೆಂದು ವಿದೇಶಕ್ಕೆ ತೆರಳಲು ರಿತಿಕಾ ನ್ಯಾಯಾಲಯದ ಅನುಮತಿ ಕೋರಿದಾಗ ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ನಂತರ ಆಕೆ ಹಿಂತಿರುಗಲೇ ಇಲ್ಲ. ರಿತಿಕಾರ ಪಾಸ್‍ಪೋರ್ಟ್ ಮುಟ್ಟುಗೋಲು ಹಾಕಿಕೊಂಡು ಆಕೆಯನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಆರಂಭಿಸಲು ಲಂಡನ್ನಿನ ಭಾರತೀಯ ಹೈಕಮಿಷನ್‍ಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.

ಈ ದಿಸೆಯಲ್ಲಿ ಕೇಂದ್ರ ಸರ್ಕಾರದ ಅಸಹಾಯಕತೆಯನ್ನು ಸಾಲಿಟರ್ ಜನರಲ್ ರಂಜಿತ್ ಕುಮಾರ್ ನ್ಯಾಯಾಲಯಕ್ಕೆ ವಿವರಿಸಿ ಆಕೆಯ ಪಾಸ್‍ಪೋರ್ಟ್ ವಿವರಗಳು ಸರ್ಕಾರದ ಬಳಿ ಇಲ್ಲ. ಒಮ್ಮೆ ವಿವರಗಳು ಸಿಗುತ್ತಿದ್ದಂತೆ ರಿತಿಕಾರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬಹುದು ಎಂದರು.

ಆಕೆಗೆ ಪಾಸ್‍ಪೋರ್ಟ್ ನೀಡಿರುವುದು ಕೇಂದ್ರ ಸರ್ಕಾರವೇ ಆದ್ದರಿಂದ ಅದರ ವಿವರಗಳನ್ನು ಸರ್ಕಾರ ಸುಲಭವಾಗಿ ಪಡೆಯಬಹುದು. ಆಕೆಯನ್ನು ವಾಪಸ್ ಕರೆತಂದು ನ್ಯಾಯಾಲಯದಲ್ಲಿ ನಿಲ್ಲಿಸುವುದು ನಿಮ್ಮ ಕೆಲಸ. ನೀವು ಅದನ್ನು ಯಾವಾಗ ಮತ್ತು ಹೇಗೆ ಮಾಡುವಿರಿ ಎಂಬುದನ್ನು ನಮಗೆ ನೀವೇ ಹೇಳಿ. ಪಾಸ್‍ಪೋರ್ಟ್ ಮತ್ತು ವಲಸೆ ಇಲಾಖೆಗಳು ನಿಮ್ಮ ಅಧೀನದಲ್ಲೇ ಇದೆ, ಆಕೆಯನ್ನು ಹಿಂದಕ್ಕೆ ಕರೆತರಲು ಎಲ್ಲೋ ಒಂದು ಕಡೆ ನಿಮಗೇ ಆಸಕ್ತಿ ಇಲ್ಲ ಎನಿಸುತ್ತಿದೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

Comments are closed.