ಕರ್ನಾಟಕ

ಐಟಿ ಅಧಿಕಾರಿಗಳ ಸೋಗಿನಲ್ಲಿ ವ್ಯಾಪಾರಿಯ 1 ಕೋಟಿ ಲೂಟಿ

Pinterest LinkedIn Tumblr

noteಬೆಂಗಳೂರು, ನ. ೨೫ – ಆಹಾರ ಉತ್ಪನ್ನಗಳ ಖರೀದಿಗಾಗಿ ಪೀಣ್ಯಕ್ಕೆ ಬರುತ್ತಿದ್ದ ತಮಿಳುನಾಡು ಮೂಲದ ವ್ಯಾಪಾರಿಯೊಬ್ಬರ 1 ಕೋಟಿ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಮೂವರು ದುಷ್ಕರ್ಮಿಗಳ ದೋಚಿ ತಲಘಟ್ಟಪುರದಿಂದ ಪರಾರಿಯಾಗಿದ್ದರೆ, ಜೆಪಿನಗರದಲ್ಲಿ ಸಿಸಿಬಿ ಪೊಲೀಸರ ಸೋಗಿನಲ್ಲಿ ನೋಟು ವಿನಿಮಯಕ್ಕಾಗಿ ತಂದಿದ್ದ 80 ಲಕ್ಷವನ್ನು ದುಷ್ಕರ್ಮಿಗಳು ದೋಚಿದ್ದಾರೆ.

ತಮಿಳುನಾಡಿನ ತಿರುಚಿಯ ವ್ಯಾಪಾರಿ ಆರೋಗ್ಯರಾಜು ಅವರು ಆಹಾರ ಉತ್ಪನ್ನಗಳ ಖರೀದಿಗಾಗಿ 1 ಕೋಟಿ ಹಣವನ್ನು ಕಳೆದ ನ. 22 ರಂದು ಕ್ಯಾಂಟರ್‌ನಲ್ಲಿ ಮೂವರು ಉದ್ಯೋಗಿಗಳ ಜತೆ ಕಳುಹಿಸಿದ್ದರು.

ತಲಘಟ್ಟಪುರದ ನೈಸ್ ರಸ್ತೆಯಲ್ಲಿ ಕ್ಯಾಂಟರ್ ಬರುವ ಸುಳಿವು ತಿಳಿದುಕೊಂಡು ಸಂಚು ನಡೆಸಿದ ಮೂವರು ದುಷ್ಕರ್ಮಿಗಳು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕ್ಯಾಂಟರನ್ನು ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ತಪಾಸಣೆ ನಡೆಸಿದ್ದಾರೆ.

ಕ್ಯಾಂಟರ್‌ನಲ್ಲಿದ್ದ 1 ಕೋಟಿ ರೂ. ಹೊಸ ಹಾಗೂ ಹಳೆದ ನೋಟುಗಳಿದ್ದ ಹಣದ ಬ್ಯಾಗನ್ನು ತೆಗೆದು ಕಾರಿನಲ್ಲಿಟ್ಟುಕೊಂಡು ಪರಿಶೀಲನೆಗಾಗಿ ಇಲಾಖೆಯ ಕಚೇರಿಗೆ ಹೋಗಬೇಕಾಗಿದ್ದು, ನಮ್ಮನ್ನು ಹಿಂಬಾಲಿಸುವಂತೆ ಕ್ಯಾಂಟರ್ ಚಾಲಕನಿಗೆ ಸೂಚಿಸಿದ್ದಾರೆ.

ಸ್ವಲ್ಪ ದೂರ ಹೋದ ನಂತರ ಹಣದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಷ್ಟೊಂದು ಪ್ರಮಾಣದ ಹಣವನ್ನು ವ್ಯಾಪಾರಕ್ಕಾಗಿ ಸಾಗಿಸಲಾಗುತ್ತಿತ್ತೆ ಅಥವಾ ಇನ್ಯಾವುದೇ ಕಾರಣಕ್ಕಾಗಿ ಸಾಗಿಸಲಾಗುತ್ತಿತ್ತೆ ಎನ್ನುವ ಸಂಶಯ ಮೂಡಿದೆ. ದುಷ್ಕರ್ಮಿಗಳು ಹಣ ದೋಚಿದ್ದ ಎರಡು ದಿನಗಳ ನಂತರ ಆರೋಗ್ಯ ರಾಜ್ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ತಲಘಟ್ಟಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.

ವಿನಿಮಯ ಲೂಟಿ

ಜೆಪಿನಗರದ 23ನೇ ಹಂತದಲ್ಲಿ ನೋಟು ವಿನಿಮಯಕ್ಕಾಗಿ ತಂದಿದ್ದ 80 ಲಕ್ಷ ರೂ.ಗಳನ್ನು ಸಿಸಿಬಿ ಪೊಲೀಸರ ನೆಪದಲ್ಲಿ ಆರು ಮಂದಿ ದುಷ್ಕರ್ಮಿಗಳು ನಿನ್ನೆ ರಾತ್ರಿ ದೋಚಿ ಪರಾರಿಯಾಗಿದ್ದಾರೆ.

ಜೆಪಿನಗರದ ರಿಯಲ್ ಎಸ್ಟೇಟ್ ಏಜೆಂಟ್‌ಗಳಾದ ಶಿವರಾಮ್, ಸತೀಶ್ ಸೇರಿ 8 ಮಂದಿ ತಮ್ಮಲ್ಲಿನ 80 ಲಕ್ಷ ಹಳೆಯ ನೋಟುಗಳನ್ನು ಶೇ. 20ರ ಆಧಾರದಲ್ಲಿ ಹೊಸ ನೋಟುಗಳ ವಿನಿಮಯಕ್ಕೆ ಅಕ್ಷಯ್ ಸೇರಿ ಇಬ್ಬರ ಜತೆ ಮಾತುಕತೆ ನಡೆಸಿದ್ದರು.

ಹಣವನ್ನು ತೆಗೆದುಕೊಂ‌ಡು ಹೋಗಲು ಅಕ್ಷಯ್ ಸೇರಿ ಆರು ಮಂದಿ ದುಷ್ಕರ್ಮಿಗಳು ಬೈಕ್ ಹಾಗೂ ಕಾರಿನಲ್ಲಿ ರಾತ್ರಿ ಸತೀಶ್ ಅವರ ಮನೆಗೆ ಬಂದಿದ್ದು, ಅಲ್ಲಿಂದ ಹೊಸ ನೋಟುಗಳನ್ನು ಕೊಡುವುದಾಗಿ 80 ಲಕ್ಷ ಹಳೆಯ ನೋಟುಗಳನ್ನು ತೆಗೆದುಕೊಂಡು ಶಿವರಾಮ್ ಸೇರಿ ಮೂವರನ್ನು ಕರೆದುಕೊಂಡು ಹೋಗಿದ್ದಾರೆ.

ಸ್ವಲ್ಪ ದೂರ ಹೋದ ನಂತರ ಸಿಸಿಬಿ ಪೊಲೀಸರೆಂದು ಬೆದರಿಸಿ ಹಣವನ್ನು ವಶಪ‌ಡಿಸುವುದಾಗಿ ಹೇಳಿ ಶಿವರಾಮ್ ಇತರ ಮೂವರನ್ನು ಕಾರಿನಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಜೆಪಿನಗರ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ ಎಂದು ಶರಣಪ್ಪ ತಿಳಿಸಿದ್ದಾರೆ.

Comments are closed.