
ಬೆಂಗಳೂರು: ಒಂದು ಕಡೆ ಸಾರ್ವಜನಿಕರು ನೋಟು ಬದಲಾವಣೆಗಾಗಿ ಪರದಾಡುತ್ತಿದ್ದರೆ, ಕೆಲ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಳೆಯ ನೋಟುಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಪ್ಪು ಹಣವನ್ನು ಹೊಸ ನೋಟಿಗೆ ಪರಿವರ್ತಿಸಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಬ್ಯಾಂಗಲೋರ್ ಮಿರರ್ ಪತ್ರಿಕೆ ವರದಿ ಮಾಡಿದೆ.
ಬ್ಯಾಂಕ್‌ಗಳ ಮುಂದೆ ಹಣವಿಲ್ಲ ಎಂಬ ನಾಮಫಲಕವನ್ನು ನೇತುಹಾಕುವ ಬ್ಯಾಂಕ್ ಅಧಿಕಾರಿಗಳು ಹಿಂಬಾಗಿಲಿನಲ್ಲಿ ಲಕ್ಷಾಂತರ ರೂಪಾಯಿ ಹಳೆಯ ನೋಟುಗಳಲ್ಲಿರುವ ಕಪ್ಪು ಹಣವನ್ನು ಹೊಸನೋಟುಗಳನ್ನಾಗಿ ಪರಿವರ್ತಿಸುವ ಮೂಲಕ ಶೇ.25 ರಿಂದ 35ರಷ್ಟು ಕಮಿಷನ್ ಪಡೆಯುತ್ತಿದ್ದಾರೆಂದು ವರದಿ ಹೇಳಿದೆ.
ರಂಗೋಲಿ ಕೆಳಗೆ ತೂರುವವರು
ಸರ್ಕಾರ ಚಾಪೆ ಕೆಳೆಗೆ ತೂರಿದರೆ ಬ್ಯಾಂಕ್ ಅಧಿಕಾರಿಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ನೋಟುಗಳ ಪರಿವರ್ತನೆಗೆ ಬ್ಯಾಂಕ್ ಅಧಿಕಾರಿಗಳು ಚಾಲ್ತಿಯಲ್ಲಿ ಇಲ್ಲದ ಅಕೌಂಟ್‌ಗಳು ಮತ್ತು ಜಿರೋ ಅಕೌಂಟ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
₹500 ಮತ್ತು ₹1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಾಲ್ತಿಯಲ್ಲಿ ಇಲ್ಲದಿರುವ ಅಥವಾ ಹಣವೇ ಇಲ್ಲದಿರುವ ಅಕೌಂಟ್‌ಗಳಿಗೆ ಸುಮಾರು 1. 99 ಲಕ್ಷ ರೂಪಾಯಿವರೆಗೆ ಜಮೆ ಮಾಡುತ್ತಾರೆ. ನಂತರ ಡಿಡಿ ತೆಗೆಸುವ ಮೂಲಕ ಆ ಹಣವನ್ನು ವೈಟ್ ಮಾಡಿಕೊಡುತ್ತಾರೆ.
49 ಸಾವಿರ ರೂಪಾಯಿ ಡಿಡಿ ತೆಗೆಸಲು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲವಾದ್ದರಿಂದ ಬ್ಯಾಂಕ್ ಅಧಿಕಾರಿಗಳು ಈ ವಾಮಮಾರ್ಗದ ಮೂಲಕ ಕಪ್ಪು ಹಣವನ್ನು ಪರಿವರ್ತಿಸುತ್ತಿದ್ದಾರೆ.
ಈ ಕಮಿಷನ್ ದಂಧೆಯಲ್ಲಿ ಬಹುರಾಷ್ಟ್ರೀಯ ಖಾಸಗಿ ಬ್ಯಾಂಕ್‍ಗಳುಮತ್ತು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವುದು ವಿಶೇಷ.
Comments are closed.