ಕರ್ನಾಟಕ

ಆದಾಯ ತೆರಿಗೆ ಇಲಾಖೆ ದಾಳಿ: 35.63 ಕೋಟಿ ಅಕ್ರಮ ಹಣ ಪತ್ತೆ

Pinterest LinkedIn Tumblr

noteಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಿದ ನಂತರ ಎಲ್ಲ ವ್ಯವಹಾರಗಳ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇರಿಸಿದ್ದು, ರಾಜ್ಯದಲ್ಲಿ ನಡೆದ ಐಟಿ ದಾಳಿಯಲ್ಲಿ ಒಟ್ಟು ₹35,63,30,000 ಅಕ್ರಮ ಹಣ ಪತ್ತೆಯಾಗಿದೆ.

ಬೆಂಗಳೂರಿನ ಯಲಹಂಕದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಹಣಕಾಸು ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರಿಂದ ₹16 ಕೋಟಿ ಹಣ ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನವೆಂಬರ್ 10 ರಂದು ನಗರದ ಪ್ರಮುಖ ಜ್ಯುವೆಲ್ಲರಿಯೊಂದರ ಮೂರು ಶಾಖೆಗಳಲ್ಲಿ ನಡೆದ ದಾಳಿಯಲ್ಲಿ ₹11 ಕೋಟಿ ವಶ ಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಅದೇ ವೇಳೆ ನವೆಂಬರ್ 12ನೇ ತಾರೀಖಿನಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್‍ನಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರಿಂದ ₹13, 30,000 ನಗದು ಮತ್ತು 200 ಗ್ರಾಂ ಚಿನ್ನದ ಬಿಸ್ಕೆಟ್ ವಶಪಡಿಸಲಾಗಿತ್ತು.

ಇದೇ ತಿಂಗಳ 14ನೇ ತಾರೀಖಿನಂದು ಭುವನೇಶ್ವರದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಯೊಬ್ಬರಿಂದ ಚಲಾವಣೆ ರದ್ದು ಆಗಿರುವ 1000 ಮುಖಬೆಲೆಯ ನೋಟುಗಳ ಕಂತೆ ಪತ್ತೆಯಾಗಿದ್ದು, ₹50,00,000 ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನಲ್ಲಿ ಪ್ರತಿಷ್ಠಿತ ಸಹಕಾರ ಸೊಸೈಟಿಯ ವಿವಿಧ ಶಾಖೆಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ₹8 ಕೋಟಿ ಹಣ ಪತ್ತೆಯಾಗಿದೆ. ಸೊಸೈಟಿ ಖಾತೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಜಮಾ ಮಾಡಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಗೋವಾದಲ್ಲಿ ₹96.45 ಲಕ್ಷ ವಶಕ್ಕೆ
ಗೋವಾದ ಪಣಜಿಯಲ್ಲಿರುವ ಹೋಟೆಲ್‍ವೊಂದರಿಂದ ₹96. 45 ಲಕ್ಷ ಮತ್ತು ಚಿನ್ನ, ವಜ್ರದ ಆಭರಣಗಳನ್ನು ವಶ ಪಡಿಸಲಾಗಿದೆ. ಇದರ ಬೆನ್ನಲ್ಲೇ ಅಲ್ಲಿನ ವೈದ್ಯರೊಬ್ಬರ ಮನೆ ಮೇಲೆ ನಡೆಸಿದ ದಾಳಿಯಲ್ಲಿ ₹31.79 ಲಕ್ಷ ಮತ್ತು ₹1.60 ಕೋಟಿ ಬೆಲೆಬಾಳುವ ಆಭರಣಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿದ್ದಾರೆ.

Comments are closed.