
ಬೆಂಗಳೂರು: ರು.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟಿನ ಮೇಲೆ ನಿಷೇಧ ಹೇರಿರುವುದರಿಂದ ಜನಸಾಮಾನ್ಯರಿಗೆ ಎದುರಾಗಿರುವ ಸಮಸ್ಯೆಯನ್ನು ಪ್ರಸ್ತಾಪಿಸಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಪತ್ರವೊಂದನ್ನು ಬರೆದಿದ್ದಾರೆ.
ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರಿಂದಾಗಿ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ತೊಂದರೆ ಸಪ್ಪಿಸಲು ಕೂಡಲೇ ಸೂಕ್ತ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆಂದು ತಿಳಿದುಬಂದಿದೆ.
ನೋಟು ನಿಷೇಧದಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ. ನೋಟು ಬದಲಾವಣೆ, ಹಳೆಯ ನೋಟು ಬಳಕೆ, ಬ್ಯಾಂಕಿನಲ್ಲಿ ಹಣ ಪಡೆಯುವುದು, ಎಟಿಎಂ ಗಳಲ್ಲಿ ಹಣ ಪಡೆಯುವುದು ಎಲ್ಲೆಡೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಅತೀದೊಡ್ಡ ಕೆಲಸವನ್ನು ನೀಡಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುವಲ್ಲಿ ಬ್ಯಾಂಕ್ ಗಳು ಸಮಸ್ಯೆ ಎದುರಿಸುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಸೂಕ್ತ ರೀತಿಯ ಪ್ರಾಯೋಗಿಕಾತ್ಮಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಕ್ತ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಇನ್ನು ಸಮಸ್ಯೆ ಬಗೆಹರಿಕೆಗೆ ಸಿದ್ದರಾಮಯ್ಯ ಅವರು ಕೆಲ ಸಲಹೆಗಳನ್ನು ನೀಡಿದ್ದು, ಸಲಹೆಗಳು ಈ ಕೆಳಕಂಡಂತಿವೆ…
ಪ್ರಸ್ತುತ ಕೇಂದ್ರ ಸರ್ಕಾರ ರು.500 ಹಾಗೂ 1,000 ನೋಟುಗಳನ್ನು ಹಿಂಪಡೆದು 2,000 ನೋಟುಗಳನ್ನು ಪರಿಚಯಿಸಿದೆ. ಆದರೆ, 2,000ಗಳನ್ನು ಪರಿಚಯಿಸುವುದಕ್ಕೂ ಮೊದಲು ಸರ್ಕಾರ ರು.500 ನೋಟುಗಳನ್ನು ನೀಡಬೇಕಿತ್ತು. ಇದು ಸಾಮಾನ್ಯ ಜನರಿಗೆ ಕೊಂಚ ನಿರಾಳವನ್ನು ನೀಡುತ್ತಿತ್ತು.
ನೀರು, ವಿದ್ಯುತ್ ಮತ್ತು ಇತರೆ ಬಿಲ್ ಗಳ ಮೊತ್ತವನ್ನು ಹಳೆ ನೋಟುಗಳ ಮೂಲಕವೇ ಪಾವತಿ ಮಾಡಲು ಅವಕಾಶವನ್ನು ನೀಡಲಾಗಿದೆ. ವಾಣಿಜ್ಯ ಮಳಿಗೆಗಳು ಹಾಗೂ ಉದ್ದಿಮೆಗಳಿಗೂ ಈ ಸೌಲಭ್ಯವನ್ನು ವಿಸ್ತರಣೆ ಮಾಡಬೇಕಿದೆ. ಬಿಲ್ ಗಳನ್ನು ಹಳೇ ನೋಟುಗಳ ಮೂಲಕ ಮುಂಗವಾಗಿ ಪಾವತಿ ಮಾಡಲು ಅವಕಾಶವನ್ನು ಕಲ್ಪಿಸಿಕೊಡಬೇಕಿದೆ.
ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಔಷಧ ಮಳಿಗೆಗಳಲ್ಲಿ ಹಳೇ ನೋಟು ಪಾವತಿಗೆ ಅವಕಾಶವನ್ನು ನೀಡಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳು, ಲ್ಯಾಬ್ ಮತ್ತು ಬ್ಲಡ್ ಬ್ಯಾಂಕ್ ಗಳಿಗೆ ಈ ಅವಕಾಶವನ್ನು ನೀಡಿಲ್ಲ. ಹೀಗಾಗಿ ರೋಗಿಗಳಿಗೆ ತೊಂದರೆ ಎದುರಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿರುವ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸಬೇಕಿದೆ ಎಂದು ಹೇಳಿದ್ದಾರೆ.
Comments are closed.