ಕರ್ನಾಟಕ

ರವಿವಾರವೂ ಹಳೆ ನೋಟು ಬದಲಾವಣೆಗೆ ನೂಕು ನುಗ್ಗಲು

Pinterest LinkedIn Tumblr

note-2000ಬೆಂಗಳೂರು, ನ. ೧೩ – 500 ಮತ್ತು 1000 ರೂ. ನೋಟುಗಳ ಚಲಾವಣೆ ರದ್ದಾಗಿ 5 ದಿನ ಕಳೆದರೂ, ಹಳೇ ನೋಟುಗಳ ಬದಲಾವಣೆಗಾಗಿ ಬ್ಯಾಂಕ್‌ಗಳ ಮುಂದೆ ಜನರು ಸಾಲು ಗಟ್ಟಿ ನಿಂತು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿಗೆ ಇನ್ನೂ ಮುಕ್ತಿ ದೊರಕಿಲ್ಲ.
ರಜಾ ದಿನದಂದೂ ಬ್ಯಾಂಕ್ ಮತ್ತು ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜನರು ಇಂದು ಮುಂಜಾನೆಯೇ ನೋಟು ಬದಲಾವಣೆ ಮತ್ತು ಹಣ ಡ್ರಾ ಮಾಡಲು ಮುಗಿಬಿದ್ದಿದ್ದರು.
ಹಳೇ ನೋಟುಗಳನ್ನು ಜನರು ತಮ್ಮ ಖಾತೆಗಳಿಗೆ ಜಮೆ ಮಾಡಲು ಯಾವುದೇ ಸಮಸ್ಯೆ ಎದುರಾಗಿಲ್ಲ. ಹಣದ ಜತೆ ಬರುವ ಜನರು ನೇರವಾಗಿ ಕೌಂಟರ್‌ಗಳಿಗೆ ತೆರಳಿ, ಖಾತೆಗೆ ಜಮೆ ಮಾಡಿ ಹೋಗಲು ಬ್ಯಾಂಕ್‌ಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಸಮಸ್ಯೆ ಎದುರಾಗುವುದು, ನೋಟುಗಳ ಬದಲಾವಣೆಗೆ ನಿಂತಾಗ. ಬಹುತೇಕ ಬ್ಯಾಂಕ್ ಶಾಖೆಗಳ ಮುಂದೆ ಮುಂಜಾನೆಯಿಂದಲೇ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಬೆಂಗಳೂರಿನ ಹಲವು ಬ‌ಡಾವಣೆಗಳಲ್ಲಿ ಕಂಡುಬಂತು.
ವೀಕೆಂಡ್ ಎಂಜಾಯ್ ಮಾಡಲಿಕ್ಕೂ ಕಿಸೆಯಲ್ಲಿ ಸಾಕಷ್ಟು ಹಣ ಇಲ್ಲದವರು, ಮುಂಜಾನೆದ್ದು ಬ್ಯಾಂಕ್‌ಗಳ ಮುಂದೆ ಜಮಾಯಿಸಿದ್ದರು. ಮಹಿಳೆಯರು, ಪುರುಷರು, ವೃದ್ಧರಾದಿಯಾಗಿ ಬ್ಯಾಂಕ್‌ಗಳ ಮುಂದೆ ನಿಂತಿದ್ದಾರೆ.
ಇನ್ನು ಎಟಿಎಂಗಳದ್ದು ಬೇರೆ ರೀತಿಯ ಸಮಸ್ಯೆಯಾಗಿದೆ. ಎಟಿಎಂಗಳಿಂದ ಹಣ ತೆಗೆಯಲು ಜನರು ಸಾಲುಗಟ್ಟಿ ನಿಂತಿದ್ದರಾದರೂ ಅವುಗಳಲ್ಲಿ ತುಂಬಿದ ಹಣ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ. ಎಟಿಎಂಗಳಿಂದ ನೂರು ರೂ. ಮುಖಬೆಲೆಯ ನೋಟುಗಳು ಮಾತ್ರವೇ ಲಭ್ಯವಾಗುತ್ತಿದೆ.
ಎಟಿಎಂಗಳಿಂದ ಹೊಸ ವಿನ್ಯಾಸದ 500 ಮತ್ತು 2,000 ರೂ. ನೋಟುಗಳು ತೆಗೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ಹೊಸ ನೋಟುಗಳ ಗಾತ್ರಕ್ಕೆ ಅನುಗುಣವಾಗಿ ಮಾಪನಾಂಕ ಮರು ಹೊಂದಾಣಿಕೆ (ರೀಕ್ಯಾಲಿಬರೇಷನ್) ಮಾ‌ಡುವ ಪ್ರಕ್ರಿಯೆ ಮುಂದುವರೆದಿದೆ. ಪೂರ್ಣಗೊಳ್ಳಲು 2 ರಿಂದ 3 ವಾರಗಳಾಗಬಹುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನಿನ್ನೆ ತಡರಾತ್ರಿವರೆಗೂ ಜನರು ಎಟಿಎಂಗಳಿಗೆ ಎಡತಾಕುತ್ತಿದ್ದರು. ಎಟಿಂಗಳಲ್ಲಿ ಹಣ ಇಲ್ಲ, ಔಟ್ ಆಫ್ ಆರ್ಡರ್ ಫಲಕ ನೋಡಿ ನಿರಾಸೆಯಿಂದ ವಾಪಸ್ಸಾಗುತ್ತಿದ್ದರು.
ಎಟಿಂಗಳಲ್ಲಿ ಹಣ ಖಾಲಿಯಾದಾಗ, ಮತ್ತೆ ಹಣ ತುಂಬಲಾಗಿದೆಯೇ ಎಂದು ಜನರು ಭದ್ರತಾ ಸಿಬ್ಬಂದಿಗಳನ್ನು ವಿಚಾರಿಸುತ್ತಿದ್ದ ಪ್ರಸಂಗಗಳೂ ನಡೆಯುತ್ತಿದೆ.
ಒಟ್ಟಾರೆ ರಜಾ ದಿನಗಳ ಮೋಜು-ಮಸ್ತಿಗಾಗಿ ಜನರು ಹಣಕ್ಕಾಗಿ ಪರದಾಡುತ್ತಿದ್ದುದು ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಕಂಡುಬಂದಿದೆ.
ದೇಶದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬ್ಯಾಂಕ್ ಹಾಗೂ ಎಟಿಎಂಗಳಿಂದ ಹಣ ಪಡೆಯಲು ತಾಳ್ಮೆಯಿಂದ ವರ್ತಿಸುತ್ತಿದ್ದರೂ ನಿತ್ಯದ ಬೇಡಿಕೆಗಳ ಈಡೇರಿಕೆಗೆ ಹಣವಿಲ್ಲದೆ ಪರಿತಪಿಸುತ್ತಿದ್ದಾರೆ.

Comments are closed.