ಕರ್ನಾಟಕ

ಮುಖ್ಯಮಂತ್ರಿಗೆ ವಿವರಣೆ ನೀಡಿದ ತನ್ವೀರ್ ಸೇಠ್

Pinterest LinkedIn Tumblr

tanveer-saitಬೆಂಗಳೂರು, ನ. ೧೩ – ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ವಿವಾದದಿಂದ ಸಚಿವ ಸ್ಥಾನದ ತಲೆದಂಡದ ತೂಗು ಕತ್ತಿಗೆ ಸಿಲುಕಿರುವ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ವಿವರ ನೀಡಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಇಂದು ಬೆಳಿಗ್ಗೆ ಆಗಮಿಸಿದ ಸಚಿವ ತನ್ವೀರ್ ಸೇಠ್, ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಅವರಿಗೆ ಸಂಪೂರ್ಣ ವಿವರಗಳನ್ನು ನೀಡಿದರು.
ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ಸಮಾರಂಭದಲ್ಲಿ ತಾವು ಅಶ್ಲೀಲ ಚಿತ್ರ ವೀಕ್ಷಿಸಿಲ್ಲ, ಮೊಬೈಲ್‌ನ ವಾಟ್ಸಪ್‌ನಲ್ಲಿ ಬಂದಿದ್ದ ಸಂದೇಶಗಳನ್ನು ನೋಡುತ್ತಿದ್ದೆ ಎಂದು ಮೊಬೈಲ್‌ನಲ್ಲಿ ಇದ್ದ ಸಂದೇಶಗಳ ಚಿತ್ರಗಳನ್ನು ಮುಖ್ಯಮಂತ್ರಿಗಳಿಗೆ ತೋರಿಸಿ ತನ್ವೀರ್ ಸೇಠ್ ತಮ್ಮದೇ ಆದ ವಿವರಣೆ ನೀಡಿದರು ಎಂದು ಮೂಲಗಳು ಹೇಳಿವೆ.
ತಾವು ಯಾವುದೇ ತಪ್ಪು ಮಾಡಿಲ್ಲ, ಮಾಧ್ಯಮಗಳು ಈ ವಿಚಾರವನ್ನು ದೊಡ್ಡದು ಮಾಡಿವೆ ಎಂದು ಸಚಿವ ತನ್ವೀರ್ ಸೇಠ್ ಮುಖ್ಯಮಂತ್ರಿಗಳ ಬಳಿ ಅಲವತ್ತುಕೊಂಡರು ಎನ್ನಲಾಗಿದೆ.
ಸಚಿವ ತನ್ವೀರ್ ಸೇಠ್ ಅವರ ವಿವರಣೆಯನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲವನ್ನೂ ಹೈಕಮಾಂಡ್‌ನ ಗಮನಕ್ಕೆ ತರುತ್ತೇನೆ, ಪಕ್ಷದ ವರಿಷ್ಠರ ಆದೇಶದಂತೆ ನಡೆದುಕೊಳ್ಳೋಣ ಎಂಬ ಕಿವಿಮಾತು ಹೇಳಿದರು ಎನ್ನಲಾಗಿದೆ.
ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ತನ್ವೀರ್ ಸೇಠ್‌ರವರನ್ನು ಸಂಪರ್ಕಿಸಿ ತಮ್ಮನ್ನು ಭೇಟಿ ಮಾಡಿ ವಿವರ ನೀಡುವಂತೆ ಸೂಚಿಸಿದ್ದರು. ಅದರಂತೆ ರಾಯಚೂರಿನಲ್ಲಿದ್ದ ಸಚಿವ ತನ್ವೀರ್ ಸೇಠ್ ಇಂದು ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ ಪ್ರಕರಣದ ಮಾಹಿತಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು ಎಂದು ಗೊತ್ತಾಗಿದೆ.
ತಲೆದಂಡ
ಸಚಿವ ತನ್ವೀರ್ ಸೇಠ್‌ರವರ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಇರಿಸು – ಮುರಿಸು ತಂದಿದ್ದು, ತನ್ವೀರ್ ಸೇಠ್‌ರವರ ಸಚಿವ ಸ್ಥಾನದ ತಲೆದಂಡಕ್ಕೆ ಪಕ್ಷದಲ್ಲಿ ಒತ್ತಡಗಳು ಹೆಚ್ಚಿದೆ.
ಈ ಪ್ರಕರಣದ ಬಗ್ಗೆ ಪಕ್ಷದ ಹೈಕಮಾಂಡ್ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ರವರಿಂದ ವರದಿ ಕೇಳಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಈ ತಿಂಗಳ 21 ರಂದು ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷವಾದ ಬಿಜೆಪಿ ಈ ಪ್ರಕರಣವನ್ನು ಮುಂದಿಟ್ಟು ಇಂತ ಸದನದಲ್ಲಿ ಹೋರಾಟ ನಡೆಸಲಿರುವುದರಿಂದ ಅಧಿವೇಶನದಲ್ಲಿ ಅನಗತ್ಯ ಮುಜುಗರಕ್ಕೆ ಒಳಗಾಗುವ ಬದಲು ತನ್ವೀರ್ ಸೇಠ್ ರಾಜೀನಾಮೆ ಪ‌ಡೆದು, ಪ್ರಕರಣದ ತನಿಖೆ ಆದೇಶ, ತನಿಖೆ ನಂತರ ತನ್ವೀರ್ ಸೇಠ್ ನಿರ್ದೋಷಿ ಎಂಬುದು ಸಾಬೀತಾದ ನಂತರ ಮತ್ತೆ ಸಂಪುಟಕ್ಕೆ ತನ್ವೀರ್ ಸೇಠ್‌ರವರನ್ನು ಸೇರಿಸಿಕೊಳ್ಳುವುದು ಸೂಕ್ತ ಎಂಬ ಸಲಹೆಗಳು ಕಾಂಗ್ರೆಸ್ ಮುಖಂಡರಿಂದ ಬಂದಿದೆ ಎನ್ನಲಾಗಿದೆ.
ಅಂತಿಮವಾಗಿ ಹೈಕಮಾಂಡ್ ಜತೆ 2-3 ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ವೀರ್‌ಸೇಠ್‌ರವರ ಸಚಿವ ಸ್ಥಾನ ತಲೆದಂಡದ ಬಗ್ಗೆ ಒಂದು ಖಚಿತ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಮೂಲಗಳು ಹೇಳಿವೆ.

Comments are closed.