ಕರ್ನಾಟಕ

ಹವಾಲಾ ಎಂದರೇನು? ಅದರ ನೆಟ್ವರ್ಕ್ ಹೇಗೆ ಕೆಲಸ ಮಾಡುತ್ತದೆ?

Pinterest LinkedIn Tumblr

hawala-money_760x400ಬೆಂಗಳೂರು: ಕಪ್ಪುಹಣದ ಜೊತೆಗೆ ಇತ್ತೀಚೆಗೆ ಅತೀಹೆಚ್ಚು ಕೇಳಿಬರುತ್ತಿರುವ ಮತ್ತೊಂದು ಹೆಸರೆಂದರೆ ಹವಾಲಾ ಜಾಲ. ದೊಡ್ಡ ಪ್ರಮಾಣದ ಕಪ್ಪು ಹಣ ಇದೇ ಹವಾಲಾ ನೆಟ್ವರ್ಕ್ ಮೂಲಕ ಹರಿದಾಡುತ್ತಿದೆ ಎಂಬ ಮಾತು ಸಾಕಷ್ಟು ದಿನಗಳಿಂದ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಭಯೋತ್ಪಾದಕರಿಗೆ, ಕೆಲ ಎನ್’ಜಿಓಗಳಿಗೆ ಇಂಥ ಹವಾಲ ಮೂಲಕ ಫೈನಾನ್ಸ್ ಆಗುತ್ತಿದೆ ಎಂಬ ಎಚ್ಚರಿಕೆಗಳೂ ಇವೆ. ಅಷ್ಟಕ್ಕೂ ಏನಿದು ಹವಾಲಾ?
ಹವಾಲಾವನ್ನು ಬಹಳ ಸರಳವಾಗಿ ಬಣ್ಣಿಸಬೇಕೆಂದರೆ ಅದು ಕಾನೂನುಬಾಹಿರ ಹಣದ ವಹಿವಾಟು. ಬ್ಯಾಂಕ್ ಮೊದಲಾದ ಕಾನೂನಾತ್ಮಕ ಮಾರ್ಗಗಳ ಬದಲು ವೈಯಕ್ತಿಕ ನೆಟ್ವರ್ಕ್ ಮೂಲಕ ಹಣದ ಕೈಬದಲಾವಣೆ ಈ ಹವಾಲಾದ ಮುಖ್ಯಾಂಶ.
ಉದಾಹರಣೆ:
ನಿಮ್ಮ ಮನೆಯಲ್ಲಿ ಮದುವೆಯ ಕಾರ್ಯ ನಡೆಯುತ್ತಿರುತ್ತದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಬೇಕಾಗುತ್ತದೆ. ಆಗ ದುಬೈನಲ್ಲೋ ಅಥವಾ ಇನ್ನೆಲ್ಲಾದರೂ ವಿದೇಶದಲ್ಲೋ ನಿಮ್ಮ ಪರಿಚಿತರು ಕೆಲಸ ಮಾಡುತ್ತಿರುತ್ತಾರೆ. ನೀವು ಅವರ ಬಳಿ ಹಣ ಕೇಳುತ್ತೀರಿ. ಆಗ ಅವರು ಅಲ್ಲಿಂದ ಬ್ಯಾಂಕ್ ಮೂಲಕ ಹಣ ಕಳುಹಿಸಬೇಕಾದರೆ ಒಂದಷ್ಟು ಟ್ರಾನ್ಸಾಕ್ಷನ್ ಶುಲ್ಕ, ಕಮಿಷನ್ ಇತ್ಯಾದಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಇದು ಶೇ.1ರಷ್ಟು ಶುಲ್ಕ ತಗಲುತ್ತದೆ. ಇಂಥ ಸಂದರ್ಭದಲ್ಲಿ ಹವಾಲಾ ನೆಟ್ವರ್ಕ್ ಇನ್ನೂ ಕಡಿಮೆ ವೆಚ್ಚದಲ್ಲಿ ವಹಿವಾಟು ಮಾಡುತ್ತದೆ.
ಹೇಗೆ?
ದುಬೈನಲ್ಲಿರುವ ಹವಾಲಾ ಏಜೆಂಟ್’ವೊಬ್ಬರ ಸಂಪರ್ಕ ಸಿಕ್ಕರೆ ಸಾಕು ಎಲ್ಲ ಕೆಲಸ ಆದಂತೆ. ನಿಮ್ಮ ಸಂಬಂಧಿಕನು ದುಬೈನಲ್ಲಿ ಆ ಹವಾಲಾ ಏಜೆಂಟನ್ನು ಸಂಪರ್ಕ ಮಾಡಿ ಆತನಿಗೆ 1 ಸಾವಿರ ದಿರಾಮ್ ಹಣವನ್ನು ನೀಡಿ ನಿಮ್ಮ ವಿಳಾಸಕ್ಕೆ ತಲುಪಿಸಲು ಕೋರುತ್ತಾನೆ. ಆಗ ದುಬೈನ ಆ ಏಜೆಂಟನ್ನು ಬೆಂಗಳೂರಿನಲ್ಲಿರುವ ತನ್ನ ನೆಟ್ವರ್ಕ್’ಗೆ ಸಂಪರ್ಕ ಮಾಡಿ 18 ಸಾವಿರ ರೂಪಾಯಿಯನ್ನು ನಿಮಗೆ ನೀಡಬೇಕೆಂದು ಸೂಚಿಸುತ್ತಾನೆ. ಆಗ ಬೆಂಗಳೂರಿನ ಏಜೆಂಟನ್ನು ನಿಮಗೆ ಕರೆ ಮಾಡಿ ತನ್ನ ಸ್ಥಳಕ್ಕೆ ಬರುವಂತೆ ತಿಳಿಸುತ್ತಾನೆ. ನೀವು ಹೋದರೆ ನಿಮಗೆ ಕ್ಯಾಷ್ ಅಮೌಂಟ್ ಸಿದ್ಧವಾಗಿರುತ್ತದೆ. ಅಲ್ಲಿಗೆ ವಿದೇಶೀ ಕರೆನ್ಸಿ ವಿನಿಮಯ ಹಾಗೂ ತೆರಿಗೆ ಇಲ್ಲದೇ ಹಣವು ಕೈಬದಲಾವಣೆಯಾದಂತಾಗುತ್ತದೆ.
ನೀವು ವಿದೇಶಕ್ಕೆ ಪ್ರವಾಸ ಹೋಗುತ್ತೀರಿ. ಅಲ್ಲಿ ನಿಮಗೆ ದುಡ್ಡು ಸಾಕಾಗುವುದಿಲ್ಲ. ಅಲ್ಲೇ ಇರುವ ಪರಿಚಿತರೊಬ್ಬರಿಂದ ಸಾಲ ಪಡೆಯುತ್ತೀರಿ. ಊರಿಗೆ ವಾಪಸ್ಸಾದ ಬಳಿಕ ಆ ಪರಿಚಿತರ ಮನೆಯವರಿಗೆ ಆ ಹಣ ತಲುಪಿಸುತ್ತೀರಿ. ಆ ಹಣ ಬದಲಾವಣೆ ಕೂಡ ಹವಾಲಾ ಎನ್ನುತ್ತಾರೆ ತಜ್ಞರು. ಯಾಕೆಂದರೆ ಅದು ಅಧಿಕೃತ ಮಾರ್ಗವಾದ ಕರೆನ್ಸಿ ಎಕ್ಸ್’ಚೇಂಜ್ ಹಾಗೂ ಬ್ಯಾಂಕ್ ಮೂಲಕ ವರ್ಗವಾಗಿರುವುದಿಲ್ಲ.
ಮೋದಿ ಕ್ರಮದಿಂದ ಹವಾಲಾಗೆ ಹೊಡೆತ?
ಕರೆನ್ಸಿ ರದ್ದು ಮಾಡುವ ಕ್ರಮದಿಂದ ಕೇಂದ್ರ ಸರಕಾರವು ಹವಾಲಾ ನೆಟ್ವರ್ಕ್ ಮೇಲೆ ಭಾರೀ ಪೆಟ್ಟುಕೊಟ್ಟಿದೆ ಎಂಬ ಮಾತು ಕೇಳಿಬರುತ್ತಿದೆ. ಎಲ್ಲವನ್ನೂ ಬ್ಯಾಂಕ್ ಖಾತೆ ಮೂಲಕವೇ ನೂಕುವುದು ಸರಕಾರದ ಯತ್ನ. ನಗದು ಪಡೆಯಲು ಮಿತಿ ಹಾಕಿದೆ. ಸರಕಾರದ ಕ್ರಮದಿಂದ ದೇಶದಲ್ಲಿ ಕ್ಯಾಷ್ ಮೊತ್ತ ಇದ್ದಕ್ಕಿದ್ದಂತೆ ಕುಸಿದುಬಿಡುತ್ತದೆ. ಕ್ಯಾಷ್ ಮೂಲಕವೇ ಹೆಚ್ಚಾಗಿ ವ್ಯವಹರಿಸುವ ಹವಾಲಾ ನೆಟ್ವರ್ಕ್’ಗೆ ಇದರಿಂದಾಗಿ ಘಾಸಿಯಾದಂತಾಗಿದೆ.

Comments are closed.