ಕರ್ನಾಟಕ

‘ಅಶ್ಲೀಲ ಚಿತ್ರ ನೋಡುತ್ತಿರಲಿಲ್ಲ, ಸ್ಕ್ರೋಲ್ ಮಾಡುತ್ತಿದ್ದರು’: ಸಿದ್ದರಾಮಯ್ಯ

Pinterest LinkedIn Tumblr

siddu-n.jpgaaaaaaaaಹುಬ್ಬಳ್ಳಿ: ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರು ತಮ್ಮ ಮೊಬೈಲ್‌ಗೆ ಯಾರೊ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ್ದ ಚಿತ್ರವನ್ನು ಸ್ಕ್ರೋಲ್‌ ಮಾಡುತ್ತಿದ್ದಾಗ ಟಿ.ವಿಯವರು ಅದನ್ನು ತೆಗೆದಿದ್ದಾರೆ. ಇದಕ್ಕೂ ಬಿಜೆಪಿಯ ಸಚಿವರು ವಿಧಾನಸಭೆಯಲ್ಲಿ ಕುಳಿತು ಅಶ್ಲೀಲ ಚಿತ್ರ ನೋಡಿದ್ದಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗದಗ ಜಿಲ್ಲೆಯಲ್ಲಿನ ಬರ ವೀಕ್ಷಣೆಗೆ ತೆರಳುವ ಮುನ್ನ ಇಲ್ಲಿನ ಸರ್ಕಿಟ್‌ ಹೌಸ್‌ನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿಯ ಉತ್ತರ ನೀಡಿದರು.

‘ತಪ್ಪು ಯಾರೇ ಮಾಡಿದ್ದರೂ ತಪ್ಪೇ. ಇದರಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಎನ್ನುವ ಬೇಧಭಾವ ಇಲ್ಲ. ತನ್ವೀರ್ ಸೇಠ್‌ ತಪ್ಪು ಮಾಡಿದ್ದರೂ ತಪ್ಪೇ. ಆದರೆ, ಅವರು ಅಶ್ಲೀಲ ಚಿತ್ರವನ್ನು ನೋಡುತ್ತಿರಲಿಲ್ಲ. ಬದಲಿಗೆ, ಅವರು ಮೊಬೈಲ್‌ಗೆ ಬಂದಿದ್ದ ಸಂದೇಶಗಳನ್ನು ಸ್ಕ್ರೋಲ್‌ ಮಾಡಿ ನೋಡುತ್ತಿದ್ದಾಗ ಟಿ.ವಿಯವರು ಅದನ್ನು ತೆಗೆದಿದ್ದಾರೆ. ಇದು ಹೇಗೆ ತಪ್ಪಾಗುತ್ತದೆ’ ಎಂದು ಸುದ್ದಿಗಾರರನ್ನೇ ಪ್ರಶ್ನೆ ಮಾಡಿದರು.

‘ಬಿಜೆಪಿಯ ಸಚಿವರು ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ನೋಡಿದಾಗ ನಾನೂ ಅಲ್ಲಿದ್ದೆ. ಆಗ ವಿರೋಧ ಪಕ್ಷದ ನಾಯಕನಾಗಿದ್ದೆ. ಅಂದು ಅವರು ತಪ್ಪು ಮಾಡಿದ್ದರು. ಹೀಗಾಗಿ ಹೋರಾಟವೂ ಮಾಡಿದ್ದೆ’ ಎಂದು ಅವರು ವಿವರಿಸಿದರು.

ವರದಿ ತರಿಸಿ, ಕ್ರಮ: ‘ಇಷ್ಟಾದರೂ ಈ ಪ್ರಕರಣ ಕುರಿತು ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು. ಯಾರಿಂದ ವರದಿ ತರಿಸಿಕೊಳ್ಳುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ತನ್ವೀರ್‌ ಸೇಠ್‌ ಅವರಿಂದಲೇ ವರದಿ ತರಿಸಿಕೊಳ್ಳುತ್ತೇನೆ’ ಎಂದು ಉತ್ತರಿಸಿದರು.

ಅದ್ಹೇಗೆ ಸಾರ್‌, ಆರೋಪಿಯಿಂದಲೇ ವರದಿ ತರಿಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ‘ಸಚಿವರು ಕೊಟ್ಟ ವರದಿಯೊಂದನ್ನ ಆಧರಿಸಿ ಕ್ರಮ ಜರುಗಿಸುವುದಿಲ್ಲ. ಬದಲಿಗೆ, ಅದನ್ನು ವಿಚಾರಣೆಗೆ ಒಳಪಡಿಸುತ್ತೇನೆ. ಬಳಿಕ ಕ್ರಮ ಜರುಗಿಸಲಾಗುವುದು. ಆದರೆ, ಒಂದಂತೂ ಸತ್ಯ ನಿರಪರಾಧಿಗಳಿಗೆ ಶಿಕ್ಷೆ ಆಗಲು ಬಿಡುವುದಿಲ್ಲ’ ಎಂದು ಸಮರ್ಥಿಸಿಕೊಂಡರು.

Comments are closed.