ರಾಷ್ಟ್ರೀಯ

ನೋಟು ಹಿಂತೆಗೆತ: ಇದೊಂದು ದೊಡ್ಡ ಸ್ಕ್ಯಾಮ್ ಎಂದು ಆರೋಪಿಸಿದ ಅರವಿಂದ್ ಕೇಜ್ರಿವಾಲ್

Pinterest LinkedIn Tumblr

8kejrivalನವದೆಹಲಿ(ನ. 12): ಐನೂರು ಮತ್ತು ಸಾವಿರ ಮುಖಬೆಲೆಯ ಹಳೆಯ ನೋಟುಗಳ ಮಾನ್ಯತೆ ರದ್ದು ಮಾಡಿದ ಕೇಂದ್ರದ ಕ್ರಮವನ್ನು ಒಂದು ದೊಡ್ಡ ಹಗರಣ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಣ್ಣಿಸಿದ್ದಾರೆ. ಸರಕಾರದ ಕ್ರಮ ಘೋಷಣೆಯಾದ ಬಳಿಕ ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಕಪ್ಪು ಹಣ ಹೊಂದಿದ ತಮ್ಮ ಬೆಂಬಲಿಗರನ್ನು ರಕ್ಷಿಸಲು ಸರಕಾರ ಇಂಥದ್ದೊಂದು ಯೋಜನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಹೇಳಿದ ಮುಖ್ಯಾಂಶಗಳು ಇಲ್ಲಿವೆ…
* ಡೀಮಾನಿಟೈಸೇಶನ್(ನೋಟು ಹಿಂತೆಗೆತ) ಹೆಸರಿನಲ್ಲಿ ಸರಕಾರ ದೊಡ್ಡ ಹಗರಣ ಸೃಷ್ಟಿಸಿದೆ.
* ತನ್ನ ಈ ಯೋಜನೆಯನ್ನು ಕೆಲ ನಿರ್ದಿಷ್ಟ ವ್ಯಕ್ತಿಗಳಿಗೆ ಮೊದಲೇ ತಿಳಿಸಲಾಗಿದೆ.
* ಕಳೆದ ಮೂರು ತಿಂಗಳಲ್ಲಿ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಅದಕ್ಕೂ ಹಿಂದಿನ ಮೂರು ತಿಂಗಳಲ್ಲಿ ಠೇವಣಿ ಪ್ರಮಾಣ ಇಳಿದೇ ಹೋಗಿತ್ತು. ಆದರೆ, ಈ ಮೂರು ತಿಂಗಳಲ್ಲಿ ದೊಡ್ಡ ಪ್ರಮಾಣದ ಹಣ ಡೆಪಾಸಿಟ್ ಆಗಿದ್ದು ಅನುಮಾನ ಮೂಡಿಸುತ್ತಿದೆ.
* ಪ್ರಧಾನಿಗಳು ಈ ಯೋಜನೆಯನ್ನು ಬಹಿರಂಗಪಡಿಸುವ ಮುನ್ನ ಬಿಜೆಪಿ ಮುಖಂಡರು ಮತ್ತವರ ಬಳಗಕ್ಕೆ ಮಾಹಿತಿ ನೀಡಲಾಗಿತ್ತು. ಅವರೆಲ್ಲರೂ ತಮ್ಮ ನಗದು ಹಣವನ್ನು ಬ್ಯಾಂಕುಗಳಲ್ಲಿ ಡೆಪಾಸಿಟ್ ಮಾಡಲು ಅನುವು ಮಾಡಿಕೊಡಲಾಗಿತ್ತು. ಈ ಅವಧಿಯಲ್ಲಿ ಇರಿಸಲಾದ ಠೇವಣಿಗಳಿಗೆ ಆದಾಯ ತೆರಿಗೆಯ ಹೊಸ ನಿಯಮಗಳು ಅನ್ವಯವಾಗುವುದಿಲ್ಲ. ಇದು ಸರಕಾರದ ದುರುದ್ದೇಶವನ್ನು ತೋರಿಸುತ್ತದೆ.
* ಪ್ರಧಾನಿಯಿಂದ ಘೋಷಣೆಯಾಗುವ ಎರಡು ದಿನ ಮೊದಲ ಪಂಜಾಬ್’ನ ಬಿಜೆಪಿ ನಾಯಕರೊಬ್ಬರು 2 ಸಾವಿರ ರೂಪಾಯಿ ನೋಟಿನ ಕಂತೆಗಳಿರುವ ಫೋಟೋವನ್ನು ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದ್ದು ಹೇಗೆ?
* ನಗದು ಅಪಮೌಲ್ಯೀಕರಣದಿಂದ ಕಪ್ಪುಹಣ ನಿವಾರಣೆಯಾಗುತ್ತದೆ ಎಂಬ ಭ್ರಮೆ ಸೃಷ್ಟಿಸಲಾಗುತ್ತಿದೆ. ಆದರೆ, ಇರುವ ಕಪ್ಪುಹಣವು ಮರುಹಂಚಿಕೆಯಾಗುತ್ತದೆ.. ಮನೆಗಳ ನಡುವೆ ಬದಲಾವಣೆಯಾಗುತ್ತದೆಯಷ್ಟೇ.
* ಕಪ್ಪುಹಣ ಮಾಲೀಕರು ಸರಕಾರಕ್ಕೆ ನೀಡಬೇಕಾದ ತೆರಿಗೆ ಹಣವನ್ನು ವಾಪಸ್ ಮಾಡಲು ರೂಪಿಸಲಾದ ತೆರಿಗೆ ಯೋಜನೆ ಸಮರ್ಪಕವಾಗಿಲ್ಲ. ಕಪ್ಪು ಹಣ ಮಾಲೀಕರು ಕಾನೂನು ಉಲ್ಲಂಘಿಸಿ ಡಾಲರ್ ಹಾಗೂ ಚಿನ್ನವನ್ನು ಖರೀದಿಸುತ್ತಿದ್ದಾರೆ.
* ಏಜೆಂಟ್’ಗಳು ಕಮಿಷನ್ ತೆಗೆದುಕೊಂಡು ಕಪ್ಪುಹಣವನ್ನು ಬಿಳಿ ಮಾಡುವುದಾಗಿ ಹೇಳಿ ಬ್ಯಾಂಕುಗಳ ಸುತ್ತಮುತ್ತ ಸುಳಿದಾಡುತ್ತಿದ್ದಾರೆ. ಆದರೆ, ಬ್ಯಾಂಕುಗಳು ಹಾಗೂ ಎಟಿಎಂಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಚಿಲ್ಲರೆ ಹಣಕ್ಕಾಗಿ ಒದ್ದಾಡುತ್ತಿರುವುದು ಜನಸಾಮಾನ್ಯರು ಮಾತ್ರವೇ.
* 500 ಮತ್ತು 2000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವುದರ ಉದ್ದೇಶ ಸ್ಪಷ್ಟವಾಗಿದೆ. ಈ ಹೊಸ ನೋಟು ನೀಡಬಲ್ಲ ಎಟಿಎಂಗಳನ್ನು ರಾತ್ರೋರಾತ್ರಿ ಬದಲಾಯಿಸಲು ಸಾಧ್ಯವಿಲ್ಲ. ಅವುಗಳು ಸಿದ್ಧವಾಗುವಷ್ಟರಲ್ಲಿ ಏಜೆಂಟ್’ಗಳಿಗೆ ಹಣ ಕೊಳ್ಳೆಹೊಡೆಯಲು ಸಹಾಯ ಮಾಡಲಾಗಿರುವ ಮಾಸ್ಟರ್’ಪ್ಲಾನ್ ಇದು.
* ಮೋದಿಜೀ, ಅಮಿತ್ ಶಾ ಮತ್ತು ಬಿಜೆಪಿಗೆ ನನ್ನ ಪ್ರಶ್ನೆ ಇಷ್ಟೇ. ಯಾರ ಬಳಿ ಬ್ಲ್ಯಾಕ್ ಮನಿ ಇದೆ? ಅದಾನಿ, ಅಂಬಾನಿ, ಸುಭಾಷ್ ಚಂದ್ರ ಮತ್ತು ಬಾದಲ್ ಬಳಿ ಇದೆಯೋ? ಅಥವಾ ಜನಸಾಮಾನ್ಯನ ಬಳಿ ಇದೆಯೋ?

Comments are closed.