ಕರ್ನಾಟಕ

ಸದ್ದಿಲ್ಲದೆ ಮೈಸೂರಲ್ಲಿ 2000 ರೂ.ನ ಹೊಸ ನೋಟುಗಳ ಮುದ್ರಣ

Pinterest LinkedIn Tumblr

noteಬೆಂಗಳೂರು, ನ. ೧೨- ಮೈಸೂರಿನಲ್ಲಿರುವ ನೋಟುಗಳ ಮುದ್ರಣಾಲಯದಿಂದ ಕಳೆದ ಆರು ವರ್ಷಗಳಿಂದ ಹೊಸ ನಮೂನೆಯ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ನವದೆಹಲಿಯಲ್ಲಿರುವ ಆರ್‌‌ಬಿಐನ ಕೇಂದ್ರ ಕಚೇರಿಗೆ ರವಾನಿಸುವ ಕೆಲಸ ಸದ್ದಿಲ್ಲದೆ ಸಾಗಿದೆ.
ಮೈಸೂರಿನ ಮಂಡ‌ಕಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಹೂಡಿರುವ ಬಂಡವಾಳ ನಿರರ್ಥಕವಾಗಿಲ್ಲ. ಈ ನಿಲ್ದಾಣದ ಮೂಲಕ ನೋಟುಗಳ ಸಾಗಾಣಿಕೆಯಾಗಿದೆ.
ಪ್ರಧಾನಮಂತ್ರಿ ನರೇಂದ್ರಮೋದಿಯವರು ಕಳೆದ ಮಂಗಳವಾರ ಕೈಗೊಂಡಂತಹ 500 ಮತ್ತು 1000 ನೋಟುಗಳ ಚಲಾವಣೆ ರದ್ದು ಮಾಡುವಂತಹ ಘೋಷಣೆಯಾಗುವ ಮುನ್ನವೇ 2000 ರೂ. ಮುಖಬೆಲೆಯ ನೋಟುಗಳ ಮುದ್ರಣ ಮೈಸೂರಿನಲ್ಲಿ ನಿರಂತರವಾಗಿ ಸಾಗಿದೆ.
ನೋಟುಗಳ ಮುದ್ರಣ ಹಾಗೂ ಸಾಗಾಣಿಕೆ ವೆಚ್ಚವನ್ನು ಕಳೆದ ಆರು ತಿಂಗಳಿನಿಂದ ಅತ್ಯಂತ ಗೌಪ್ಯವಾಗಿಡಲಾಗಿತ್ತು. ಖಾಸಗಿ ವಿಮಾನದ ಮೂಲಕ ನೋಟುಗಳನ್ನು ಸಾಗಿಸಲಾಗಿದೆ. ನೋಟುಗಳ ಕಂತೆಯನ್ನು ಸಾಗಿಸಲು ಅಧಿಕಾರಿಗಳ ವಿಶೇಷ ತಂ‌ಡವೊಂದನ್ನು ನೇಮಕ ಮಾಡಲಾಗಿತ್ತು.
ಮೈಸೂರಿನಿಂದ ಸಾಗಾಣೆ ಮಾಡಿದ ನೋಟುಗಳನ್ನು ದೇಶದ ಇತರೆ ನಗರಗಳಲ್ಲಿರುವ ವಿವಿಧ ಆರ್‌ಬಿಐ ಶಾಖೆಗಳಿಗೆ ತಲುಪಿಸಲಾಗಿತ್ತು. 500 ಮತ್ತು 1000 ರೂ. ನೋಟುಗಳ ರದ್ದು ಮಾಡುವ ಮುನ್ನ ಹೊಸ ನೋಟುಗಳ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಒಮ್ಮೆಲೆ ಹೊಸ ನೋಟುಗಳ ಲಭ್ಯತೆ ಇರುವಂತೆ ಮಾಡಿಕೊಳ್ಳುವ ಉದ್ದೇಶದಿಂದ ಆರ್‌ಬಿಐ ಶಾಖೆಗಳು ಪೂರ್ವ ಸಿದ್ಧತೆ ಮಾಡಿಕೊಂಡಿದ್ದವು. ಮೈಸೂರಿನ ಅಧಿಕ ಭದ್ರತಾ ವಲಯದಲ್ಲಿರುವ ನೋಟುಗಳ ಮುದ್ರಣಾಲಯ `ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಣ ನಿಯಮಿತ’ಕ್ಕೆ ವಿಶೇಷ ರೈಲು ಮಾರ್ಗ ಸಂಪರ್ಕ ಮತ್ತು ಅದಕ್ಕೇ ಮೀಸಲಾದ ನೀರು ಪೂರೈಕೆ ಪೈಪ್ ಲೈನ್ ಮಾರ್ಗವನ್ನು ಅಳವಡಿಸಲಾಗಿದೆ.
ಎರಡು ದಶಕಗಳ ಹಳೆಯದಾದ ಈ ಮುದ್ರಣಾಲಯ ವಿಶ್ವದಲ್ಲೇ ಅತ್ಯಂತ ಗುಣಮಟ್ಟದ ಮುದ್ರಣಾಲಯ ಎಂಬ ಖ್ಯಾತಿ ಗಳಿಸಿದೆ. ಮುದ್ರಣಾಲಯದ ಆವರಣದಲ್ಲಿ ತನ್ನದೇ ಆದ ನೋಟು ಕಾಗದ ಉತ್ಪಾದಿಸುವ ಘಟಕ ಹೊಂದಿದ್ದು, 1 ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಇಲ್ಲಿ ಮುದ್ರಿಸಲಾಗಿದೆ.
ವಿಶೇಷ ಭದ್ರತೆಯಲ್ಲಿ ಕಾಗದ ಉತ್ಪಾದನೆಯಾಗುತ್ತಿದೆ. 2 ಸಾವಿರ ರೂ. ಮುಖಬೆಲೆಯ ನೋಟುಗಳ ಮುದ್ರಣ ಕಳೆದ 6 ತಿಂಗಳ ಹಿಂದೆ ಆರಂಭವಾಗಿದ್ದರೂ ಯಾರೊಬ್ಬರಿಗೂ ಇದರ ಸುಳಿವು ದೊರೆತಿಲ್ಲ. ಇಲ್ಲಿಂದಲೇ ದೇಶದ ವಿವಿಧ ಬ್ಯಾಂಕ್‌ಗಳಿಗೆ ಹೊಸ ನೋಟುಗಳ ಪೂರೈಕೆಯಾಗಿದೆ.
ಒಂದೊಂದು ಬ್ಯಾಂಕ್ ಶಾಖೆಗೆ 20 ಲಕ್ಷ ರೂ.ಗಳಿಂದ 2 ಕೋಟಿವರೆಗೆ ಪೂರೈಕೆಯಾಗಿದೆ. ಕೇಂದ್ರ ಸರ್ಕಾರ ಖಾಸಗಿ ವಿಮಾನವನ್ನು ಬಾ‌ಡಿಗೆಗೆ ಪಡೆದು ಮೈಸೂರಿನಿಂದ ನೋಟುಗಳನ್ನು ಸಾಗಿಸುವ ವ್ಯವಸ್ಥೆ ಮಾಡಿತ್ತು.
ಈ ವಿಮಾನಕ್ಕೆ ಕೇಂದ್ರ ಸರ್ಕಾರ ಸುಮಾರು 73 ಲಕ್ಷ 42 ಸಾವಿರ ರೂ. ಬಾಡಿಗೆ ನೀಡಲಾಗಿದೆ.

Comments are closed.