
ಬೆಂಗಳೂರು: ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪಕ್ಕೆ ಗುರಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಕಂಟಕ ಎದುರಾದಂತಾಗಿದೆ.
ರಾಯಚೂರಿನಲ್ಲಿ ನಿನ್ನೆ ನಡೆದ ಟಿಪ್ಪುಜಯಂತಿ ಸಮಾರಂಭದಲ್ಲಿ ತನ್ವೀರ್ ಸೇಠ್ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ದೃಶ್ಯಾವಳಿಗಳು ಎಲ್ಲ ಟಿವಿ ಚಾನಲ್‌ಗಳಲ್ಲಿ ಬಿತ್ತರಗೊಂಡಿದ್ದು, ಇದು ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಬಿಜೆಪಿ ಆಡಳಿತ ಇದ್ದ ಸಂದರ್ಭದಲ್ಲಿ ವಿಧಾನಸಭೆ ಅಧಿವೇಶನ ಕಲಾಪ ನಡೆಯುತ್ತಿರುವಾಗಲೇ ನೀಲಿಚಿತ್ರ ವೀಕ್ಷಿಸಿದ ಆರೋಪಕ್ಕೆ ಗುರಿಯಾಗಿದ್ದ ಸಚಿವರಾದ ಲಕ್ಷ್ಮಣ್ ಸವದಿ, ಕೃಷ್ಣಪಾಲೇಮಾರ್ ಮತ್ತು ಸಿಸಿ ಪಾಟೀಲ್ ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದು ಹೋರಾಟ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ ಈಗ ತಮ್ಮ ಸಂಪುಟದ ಸಚಿವರೊಬ್ಬರು ಇದೇ ರೀತಿಯ ಆರೋಪಕ್ಕೆ ಗುರಿಯಾಗಿರುವುದರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.
ಸಚಿವ ತನ್ವೀರ್ ಸೇಠ್ ರಾಜೀನಾಮೆ ನೀಡಬೇಕೆಂಬ ಒತ್ತಾಯ ಪ್ರತಿಪಕ್ಷಗಳೂ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಂಪುಟದ ವಿಕೆಟ್ ಒಂದು ಪಥನವಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಹೆಚ್. ವಿಶ್ವನಾಥ್ ಅವರೂ ಸೇಠ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸೇಠ್ ಅವರ ಧೋರಣೆಯನ್ನು ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಯಾವುದೇ ಸಚಿವರು ಸಮರ್ಥನೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ.
ಬಿಜೆಪಿ ಸರ್ಕಾರದಲ್ಲಿ ಸಚಿವರು ರಾಜೀನಾಮೆಗೆ ತಾವೇ ಒತ್ತಾಯ ಮಾಡಿದ್ದರಿಂದ ಮೂವರು ಸಚಿವ ಸ್ಥಾನ ಕಳೆದುಕೊಂಡ ವಿದ್ಯಮಾನ ಇನ್ನೂ ಮಾಸದಿರುವ ಸಂದರ್ಭದಲ್ಲಿ ಸೇಠ್ ಅವರು ಅಶ್ಲೀಲಚಿತ್ರ ನೋಡಿರುವುದನ್ನು ಸಮರ್ಥಿಸಿಕೊಳ್ಳವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇಲ್ಲ.
ವಿವಾದ ದೊಡ್ಡದಾಗುವ ಮೊದಲೇ ಸಚಿವರ ರಾಜೀನಾಮೆ ಪಡೆದರೆ ಸರ್ಕಾರ ಮುಜುಗರಕ್ಕೊಳಗಾಗುವುದು ತಪ್ಪಲಿದೆ. ಇಲ್ಲದಿದ್ದಲ್ಲಿ ಒಂದರ ಮೇಲೊಂದು ಆರೋಪಗಳಿಗೆ ತುತ್ತಾಗುತ್ತಿರುವ ಸರ್ಕಾರ ಮತ್ತೊಂದು ವಿವಾದದ ಸುಳಿಗೆ ಸಿಲುಕುವುದು ನಿಶ್ಚಿತ.
ಶಿಕ್ಷಣ ಖಾತೆಯಂತಹ ಜವಾಬ್ದಾರಿ ಖಾತೆಯನ್ನು ನಿರ್ವಹಿಸುತ್ತಿರುವ ತನ್ವೀರ್ ಸೇಠ್ ತಾವಾಗಿಯೇ ರಾಜೀನಾಮೆ ನೀಡಿ ಸರ್ಕಾರಕ್ಕೆ ಒದಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ.
ಈ ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಸೂಚನೆ ನೀಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
Comments are closed.