ಕರ್ನಾಟಕ

‘ನಿನ್ನ ಅರ್ಧ ಊಟ ನಿನ್ನನ್ನು ಬದುಕಿಸಿದರೆ, ಇನ್ನರ್ಧ ಊಟ ವೈದ್ಯನ ಬದುಕಿಗೆ.’ ಇದು ಲಿಖಿತ ನಿಜವೇ ….

Pinterest LinkedIn Tumblr

food-25

ಮಂಗಳೂರು: ನಮ್ಮ ಆರೋಗ್ಯ ನಾವು ತಿನ್ನುವ ಆಹಾರವನ್ನೇ ಅವಲಂಬಿಸಿದೆ. ಎಂಥ ಆಹಾರ ಸೇವಿಸಬೇಕು ಎನ್ನುವ ಪ್ರಶ್ನೆಯ ಜೊತೆಗೆ, ಎಲ್ಲರಿಗೂ ಅಂಥ ಆಹಾರ ಸಿಗುತ್ತಿದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಪೌಷ್ಟಿಕ ಆಹಾರದ ಸೇವನೆ ನಮ್ಮ ಆರೋಗ್ಯ ಜೀವನಕ್ಕೆ ಮುಖ್ಯ ಅಷ್ಟೇ ಅಲ್ಲ, ಅದು ನಮ್ಮ ಹಕ್ಕು ಕೂಡ ಎಂಬ ಮಾತುಗಳೂ ಕೂಡ ಕೇಳಿಬರುತ್ತಿರುತ್ತವೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ’ದ ಮಹತ್ವವನ್ನು ಕುರಿತು ಆಹಾರ ತಜ್ಞ ಕೆ. ಸಿ. ರಘು ಹಂಚಿಕೊಂಡ ವಿವರಗಳು ಇಲ್ಲಿವೆ…

ಸೆಪ್ಟೆಂಬರ್ ಮೊದಲ ವಾರ ‘ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ’ ಎಂದು 1973ರಲ್ಲಿ ಅಮೆರಿಕದ ಅಧ್ಯಕ್ಷರ ಘೋಷಣೆಯೊಂದಿಗೆ ಶುರುವಾದದ್ದು. ನಮ್ಮ ದೇಶದಲ್ಲಿ 1982ರಿಂದ ಈಚೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಹಾರ ಮತ್ತು ಪೌಷ್ಟಿಕಾಂಶ ಬೋರ್ಡ್ ಮೂಲಕ, ಪ್ರತಿ ಸೆಪ್ಟೆಂಬರ್ ಮೊದಲ ವಾರವನ್ನು ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವೆಂದು ಪರಿಗಣಿಸಿ, ದೇಶದ ಉದ್ದಗಲಕ್ಕೂ ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಉತ್ತಮ ಆಹಾರ, ಪೌಷ್ಟಿಕಾಂಶ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ.

ಪೌಷ್ಟಿಕಾಂಶ ಕೊರತೆ ಮತ್ತು ಅದರಿಂದ ಉಂಟಾಗುವ ಅನಾರೋಗ್ಯವು ಜೀವನದ ವಿವಿಧ ಹಂತಗಳಲ್ಲಿ ವಿವಿಧ ರೀತಿಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಅದರಲ್ಲಿ ಪ್ರಮುಖ ಹಂತ ಭ್ರೂಣಾವಸ್ಥೆ, ತಾಯಿಯ ಎದೆಹಾಲ ಪೋಷಣೆ ಮತ್ತು ಆರು ತಿಂಗಳಿನ ನಂತರ ಪೂರಕ ಘನ ಆಹಾರ ಪೋಷಣೆಯಾಗಿರುತ್ತದೆ.

ಇದನ್ನು ಮಗುವಿನ ಮೊದಲ ನಿರ್ಣಾಯಕ ಸಾವಿರ ದಿನ ಎಂದು ಕೂಡ ಪರಿಗಣಿಸಲಾಗಿದೆ. ಭ್ರೂಣದಲ್ಲಿರುವಾಗ ತಾಯಿಯ ಪೋಷಣೆಯ ಆಧಾರದ ಮೇಲೆ ಮಗುವಿನ ಪಚನಕ್ರಿಯೆ ನಿರ್ಧರಿಸಲ್ಪಡುತ್ತದೆ.

ತಾಯಿಯೇ ಅಪೌಷ್ಟಿಕತೆಯಿಂದ ನರಳುತ್ತಿದ್ದರೆ, ಮಗು ಇಷ್ಟರಲ್ಲೇ ನನ್ನ ಬದುಕು ಸಾಗಿಸಬೇಕೆಂದು ಗುಣಾಣುಗಳ ಕಾರ್ಯ ವೈಖರಿಯನ್ನು ಬದಲಿಸಿಕೊಳ್ಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಪೋಷಣೆಯಾದಲ್ಲಿ ಸುಲಭವಾಗಿ ಮಗು ಕಾಯಿಲೆಗೆ ತುತ್ತಾಗಬಹುದು ಎನ್ನುತ್ತಾರೆ. ಇದನ್ನು ‘ತ್ರಿಫ್‌ಟಿ ಜೀನ್ ಸಿಂಡ್ರೋಮ್’ ಎನ್ನಲಾಗುತ್ತದೆ. ವೈದ್ಯಕೀಯವಾಗಿ fetus is the father of man ಎಂದು ಎನ್ನುವುದುಂಟು.

ನಮ್ಮಲ್ಲಿ ಶೇ. 35ರಷ್ಟು ಮಕ್ಕಳು ಹುಟ್ಟುವಾಗ ವಿಶ್ವ ಆರೋಗ್ಯ ಸಂಸ್ಥೆಯ ಕನಿಷ್ಠಮಾಪನ 2.5 ಕೆ.ಜಿ.ಗೂ ಕಡಿಮೆ ಇರುವಂಥದ್ದು ದುರಂತದ ಸಂಗತಿ. ಹುಟ್ಟಿದ ಮಗುವಿಗೆ ಅರ್ಧ ಗಂಟೆಯಲ್ಲಿ ತಾಯಿಯ ಹಾಲನ್ನು ಉಣಿಸುವುದು ಮಗುವಿನ ಬದುಕಿನಲ್ಲಿ ಪ್ರಮುಖ ಘಟ್ಟ.

ಇತ್ತೀಚಿನ ರಾಷ್ಟ್ರೀಯ ಆರೋಗ್ಯ ಸಮೀಕ್ಷ ವರದಿ 4ರ ಪ್ರಕಾರ ಹುಟ್ಟಿದ ಮಗುವಿಗೆ ಒಂದು ಗಂಟೆಯೊಳಗಾಗಿ ಹಾಲು ಕೊಡುವವರ ಸಂಖ್ಯೆ ಶೇ. 56ರಷ್ಟು ಮಾತ್ರ ಎನ್ನುವುದು ಕಳವಳಕಾರಿಯಾದ ಅಂಶವಾಗಿದೆ. ಅಂದರೆ ಇಡೀ ಜೀವನಕ್ಕೆ ಅವಶ್ಯಕವಾದ ಅಮೃತದಿಂದ ನೂರು ಮಕ್ಕಳಲ್ಲಿ ಸುಮಾರು ಐವತ್ತು ಮಕ್ಕಳನ್ನು ವಂಚಿತರನ್ನಾಗಿ ಮಾಡಲಾಗಿದೆ. ಅನಂತರ ಆರು ತಿಂಗಳಿನವರೆಗೆ ತಾಯಿಯ ಹಾಲನ್ನಲ್ಲದೆ ಬೇರೆ ಏನನ್ನೂ ಕೊಡುವಂತಿಲ್ಲ. ಕರ್ನಾಟಕದಲ್ಲಿ ಈ ರೀತಿ ಪೋಷಣೆಯಾಗುತ್ತಿರುವ ಮಕ್ಕಳು ಶೇ. 54ರಷ್ಟು ಮಾತ್ರ.

ಆರು ತಿಂಗಳಿನ ನಂತರ ತಾಯಿಯ ಹಾಲಿಗೆ ಪೂರಕವಾಗಿ ಘನ ಆಹಾರ ಕೊಡತಕ್ಕದ್ದು. ಈ ವಿಷಯದಲ್ಲಿಯೂ ಸಹ ಕೇವಲ ಶೇ. 46ರಷ್ಟು ಶಿಶುಗಳು ಮಾತ್ರ ಸಮಯಕ್ಕೆ ಸರಿಯಾಗಿ ಪೂರಕ ಘನ ಆಹಾರ ಪಡೆಯುತ್ತಿದ್ದಾರೆ. ನಾವು ಇಂದು ಗಂಭೀರವಾಗಿ ಪರಿಗಣಿಸಬೇಕಾಗಿರುವುದು ಅಪೌಷ್ಟಿಕತೆ ಕಡಿಮೆ ಆಗುತ್ತಿರುವ ವೇಗದಲ್ಲಿಯೇ ಬೊಜ್ಜುರೋಗವೂ ಬೆಳೆಯುತ್ತಿರುವುದು.

ನದಿ ಮೂಲದಲ್ಲೇ ಕೆಟ್ಟರೆ, ಮುಂದಿನ ಅದರ ಹರಿವಿನ ಹಾದಿ ಸುಗಮವಾಗಿರದು. ಆಹಾರ ಮತ್ತು ಪೌಷ್ಟಿಕಾಂಶ ವಿಷಯದಲ್ಲಿ ಸಾಕಷ್ಟು ಜ್ಞಾನ ಮತ್ತು ಮಾಹಿತಿ ನಮಗೆ ದಕ್ಕಿದೆ. 200 ವರ್ಷಗಳ ಕಾಲ ಸಮುದ್ರಯಾನದಲ್ಲಿ ಇರುವವರು ಮೂಳೆಯ ಕೊರೆತದಿಂದ ನರಳಬೇಕಾಗುತ್ತಿತ್ತು ಮತ್ತು ಅಂಥವರ ದವಡೆಯೇ ಜಾರಿ ಹೋಗುವ ಸಂದರ್ಭವಿತ್ತು.

ಲೀನಸ್ ಪಾಲಿಂಗ್ ಎಂಬ ವಿಜ್ಞಾನಿ ನಿಂಬೆಹುಳಿ ಹಿಂಡಿದರೆ ಇದನ್ನು ಗುಣಪಡಿಸುತ್ತದೆ ಎಂದು ತೋರಿಸಿದ. ಗಳಗಂಡರೋಗಕ್ಕೆ ಚಿಟಕೆಯಷ್ಟು ಅಯೋಡಿನ್ ಸಾಕು ಎನ್ನುವುದರಿಂದ ಹಿಡಿದು, ಅಂಧತ್ವ ನಿವಾರಣೆಗೆ ವಿಟಮಿನ್ ಎ ನ ಅವಶ್ಯಕತೆ, ರಕ್ತಹೀನತೆಗೆ ಕಬ್ಬಿಣದ ಕೊರತೆ, ಹೃದಯ ರೋಗಕ್ಕೆ ವಿಟಮಿನ್ ಬಿ 12ನ ಕೊರತೆ ಹೀಗೆ ಹತ್ತು ಹಲವು ಕಾರ್ಯಕಾರಣ ಸಂಬಂಧಗಳನ್ನು ನಿಖರವಾಗಿ ಇಂದಿನ ವಿಜ್ಞಾನದಲ್ಲಿ ಗುರುತಿಸಲಾಗಿದೆ, ಪೌಷ್ಟಿಕಾಂಶಗಳ ನಿತ್ಯಬಳಕೆ ಎಷ್ಟು ಹೇಗೆ, ಹಾಗೆಯೇ ಹಾನಿಕಾರಕ ಅಂಶಗಳ ಬಗ್ಗೆಯೂ ಬಹಳಷ್ಟು ಮಾಹಿತಿಯೂ ಇಂದು ಲಭ್ಯವಿದೆ.

ಮೂಲಭೂತವಾಗಿ ಸ್ವಚ್ಛತೆ ಮತ್ತು ಶುದ್ಧ ನೀರು ಇಲ್ಲದಿದ್ದಲ್ಲಿ ಪೋಷಕಾಂಶಗಳು ಒಡೆದ ಮಡಕೆಗೆ ನೀರು ಹಾಕಿದಂತಷ್ಟೇ ಎನ್ನುವುದನ್ನು ಗಮನದಲ್ಲಿಡುವುದು ಅವಶ್ಯಕವಾಗಿದೆ. ಇಂದು ನಮ್ಮ ಮುಂದಿರುವ ಸವಾಲು ಸಕ್ಕರೆ, ಕೊಬ್ಬು ಮತ್ತು ಉಪ್ಪಿನಂತಹ ಶುದ್ಧೀಕರಿಸಿದ ಪೋಷಕಾಂಶಗಳೇ ನಮ್ಮ ಆರೋಗ್ಯಕ್ಕೆ ಮಾರಕವಾಗಿರುವಂಥದ್ದು ಎನ್ನುವುದು.

ಇದಕ್ಕೆ ವಿಶ್ವ ಸಂಸ್ಥೆ ‘ಆಹಾರದಿಂದ ಪೌಷ್ಟಿಕಾಂಶವನ್ನು ಹುಡುಕಿಕೊಳ್ಳಿ, ಪೌಷ್ಟಿಕಾಂಶದಿಂದ ಆಹಾರದತ್ತ ಹೋಗದಿರಿ’ ಎಂದು ಹೇಳಿರುವುದು. ಹಾಗಾಗಿ ನ್ಯೂಟ್ರೀಷನಿಸಮ್ ಎನ್ನುವುದು ಇನ್ನೊಂದು ವ್ಯಸನವಾಗುತ್ತಿರುವುದು ವಿಪರ್ಯಾಸವೇ ಸರಿ.

ನಮ್ಮಲ್ಲಿ ಶೇ. 90ರಷ್ಟು ಕಾಯಿಲೆಗಳು ಆಹಾರ ಮತ್ತು ಪರಿಸರದಿಂದ ತಡೆಗಟ್ಟಬಹುದಾದ ಕಾಯಿಲೆಗಳೇ ಆಗಿವೆ. ಕಾಯಿಲೆ ಬಂದ ಮೇಲೆ ವೈದ್ಯಕೀಯರಂಗ ಹೆಚ್ಚೇನು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ.

ಕ್ರಿಸ್ತಪೂರ್ವ 3500ವರ್ಷದ ಹಿಂದೆ ಈಜಿಪ್ಟಿನ ಘೋರಿಯೊಂದರ ಮೇಲೆ ಬರೆದಿರುವುದು ಹೀಗೆ: ‘ನಿನ್ನ ಅರ್ಧ ಊಟ ನಿನ್ನನ್ನು ಬದುಕಿಸಿದರೆ, ಇನ್ನರ್ಧ ಊಟ ವೈದ್ಯನ ಬದುಕಿಗೆ.’

Comments are closed.