ಬೆಂಗಳೂರು: ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ ಚಿನ್ನದ ವ್ಯಾಪಾರಿಗಳಿಗೆ ಭಾರೀ ಹೊಡೆತ ಬಿದ್ದಿದೆ.
ಮಂಗಳವಾರ ರಾತ್ರಿ 12 ಗಂಟೆವರೆಗೂ ವ್ಯಾಪಾರ ಮಾಡಿದ್ದೇವೆ. ಇಂದು ಜನ 500 ಮತ್ತು 1000 ರೂ.ಗಳನ್ನು ತಂದರೆ ನಾವು ತೆಗೆದುಕೊಳ್ಳುತ್ತಿಲ್ಲ. ಆದರಿಂದ ಹೆಚ್ಚು ಜನ ಚಿನ್ನ ಖರೀದಿಗೆ ಮುಂದಾಗಿಲ್ಲ. ಹೀಗಾಗಿ ಚಿನ್ನಾಭರಣ ಖರೀದಿಯಲ್ಲಿ ಶೇ.50ರಷ್ಟು ಕಡಿಮೆಯಾಗಿದೆ ಎಂದು ಸಾಯಿಗೋಲ್ಡ್ ಪ್ಯಾಲೇಸ್ ಮಾಲೀಕ ಶರವಣ ಮಾಧ್ಯಮಗಳಿಗೆ ಹೇಳಿದ್ದಾರೆ.
ದೇಶದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಒಂದು ವಾರ ಕಾಲಾವಕಾಶ ಕೊಟ್ಟಿದ್ದರೆ ಉತ್ತಮವಾಗಿರುತ್ತಿತ್ತು. ಆದರೂ 500 ಮತ್ತು 1000 ರೂ.ಗಳ ನಿಷೇಧ ಹೇರಿರುವುದು ಒಳ್ಳೆಯ ನಿರ್ಧಾರವಾಗಿದೆ. ಚಿನ್ನದ ಖರೀದಿಯಲ್ಲಿ ಇಳಿಕೆ ಆಗುತ್ತಿದ್ದರೂ, ಇಂದು ಚಿನ್ನ, ಬೆಳ್ಳಿ ಬೆಲೆ ಏರಿಕೆ ಆಗಿದೆ ಎಂದು ತಿಳಿಸಿದರು.
ಚಿನ್ನ ಗ್ರಾಂಗೆ 200 ರೂ.ಗಳಷ್ಟು ಹೆಚ್ಚಳವಾದರೆ, ಬೆಳ್ಳಿ ಕೆಜಿಗೆ 2000 ದಿಂದ 2500 ರೂ.ಗೆ ಹೆಚ್ಚಳವಾಗಿದೆ. ನೋಟ್ ಬ್ಯಾನ್ ಮಾಡಿದರ ಪರಿಣಾಮವಾಗಿ ಬೆಲೆಯಲ್ಲಿ ಏರಿಕೆ ಆಗಿಲ್ಲ. ಅಮೆರಿಕ ಅಧ್ಯಕ್ಷ ಚುನಾವಣೆಯ ಹಿನ್ನಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಸಂಜೆ ನಂತರ ಇನ್ನೂ ಬೆಲೆ ಹೆಚ್ಚಳವಾಗಲಿದೆ ಎಂದು ಸಾಯಿಗೋಲ್ಡ್ ಪ್ಯಾಲೇಸ್ ಮಾಲೀಕ ಶರವಣ ಹೇಳಿದ್ದಾರೆ.