ಕರ್ನಾಟಕ

ಎಂಇಎಸ್‍ಗೆ ನೋಟಿಸ್ ಕೊಟ್ಟದ್ದಕ್ಕೆ ಬೆಳಗಾವಿಯಲ್ಲಿ ಕನ್ನಡ ಶಾಲೆ ಧ್ವಂಸ

Pinterest LinkedIn Tumblr

belagaviಬೆಳಗಾವಿ: ಎಂಇಎಸ್ ಕರಾಳ ದಿನ ಆಚರಣೆ ವೇಳೆ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗಾವಿ ಪೊಲೀಸರು ಎಂಇಎಸ್ ಗೆ ನೊಟೀಸ್ ನೀಡಿದ್ದರು. ಇದರ ಬೆನ್ನಲ್ಲೇ ಎಂಇಎಸ್ ಮತ್ತೆ ಪುಂಡಾಟ ಮೆರೆದಿದ್ದು, ಬೆಳಗಾವಿಯ ಶಹಾಪುರದ ಭಾರತ ನಗರದಲ್ಲಿರುವ ಕನ್ನಡ ಶಾಲೆಯನ್ನು ಧ್ವಂಸಗೊಳಿಸಿದೆ.

ಈ ಶಾಲೆಯು ಶಹಾಪುರ ಪೊಲೀಸ್ ಠಾಣೆಯ ಪಕ್ಕದಲ್ಲೆ ಇದ್ದರೂ ಕ್ಯಾರೇ ಎನ್ನದ ದುಷ್ಕರ್ಮಿಗಳು, ಶಾಲೆ ಬೀಗ ಮುರಿದು ದಾಖಲೆಗಳಿಗೆ ಬೆಂಕಿ ಹಚ್ಚಿದ್ದಾರೆ. ಶಾಲೆಯ ಡೆಸ್ಕ್ ಹಾಗೂ ವಿದ್ಯುತ್ ಉಪಕರಣಗಳನ್ನು ಹಾನಿಗೊಳಿಸಿದ್ದಾರೆ. ಬೇಸರದ ಸಂಗತಿ ಏನೆಂದರೆ ಒಂದೇ ವರ್ಷದಲ್ಲಿ 10ಕ್ಕೂ ಹೆಚ್ಚು ಬಾರಿ ಶಾಲೆಯನ್ನು ಧ್ವಂಸಗೊಸಿದ್ದರೂ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್ ಕರಾಳ ದಿನಾಚರಣೆ ಮಾಡಿದ್ದು, ಈ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಎಂಇಎಸ್‍ಗೆ ಪೊಲೀಸ್ ಆಯುಕ್ತರಿಂದ ನೋಟಿಸ್ ಜಾರಿ ಮಾಡಲಾಗಿತ್ತು.

ಕರಾಳ ದಿನಾಚರಣೆಗೆ ಪೊಲೀಸ್ ಇಲಾಖೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿತ್ತು. ಆದರೆ ಎಂಇಎಸ್ ಇದರಲ್ಲಿ 3 ಷರತ್ತುಗಳನ್ನು ಉಲ್ಲಂಘಿಸಿತ್ತು. ಅವುಗಳಲ್ಲಿ ಕರಾಳ ದಿನಾಚರಣೆ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹರಿದು ಹಾಕಿ ಉದ್ವಿಗ್ನ ವಾತಾವರಣ ನಿರ್ಮಿಸಿ, ಕೆಲ ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ದರು. ರತ್ನ ಪ್ರಸಾದ್ ಎಂಬವರು ವ್ಯಕ್ತಿ ಕುದುರೆ ಏರಿ ಬಂದೂಕು ಹಿಡಿದ ಓಡಾಡಿ ಶಾಂತಿ ಭಂಗ, ನಿಗದಿತ ಸಮಯ ಮೀರಿ ಬೈಕ್ ರ್ಯಾಲಿ ಮುಂತಾದ ನಿಯಮಗಳನ್ನು ಉಲ್ಲಂಘಿಸಿ ಕರಾಳ ದಿನ ಆಚರಿಸಿದ್ದರು. ಹೀಗಾಗಿ ನಿಮ್ಮ ಮೇಲೆ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್ ತಲುಪಿದ ಮೂರು ದಿನದಲ್ಲಿ ಕಚೇರಿಗೆ ಹಾಜರಾಗಬೇಕು ಎಂದು ಪೊಲೀಸ್ ಆಯುಕ್ತರು ಎಂಇಎಸ್ ಮುಖಂಡರಿಗೆ ಖಡಕ್ ಸೂಚನೆ ನೀಡಿದ್ದರು.

Comments are closed.