ಬೆಂಗಳೂರು: ಏನೇ ಅಡ್ಡಿ ಆತಂಕಗಳು ಎದುರಾದರೂ ಟಿಪ್ಪು ಜಯಂತಿ ಆಚರಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ, ಮುನ್ನೆಚ್ಚರಿಕೆ ಕ್ರಮವಾಗಿ ಸಮಾಜಘಾತುಕ ಶಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.
ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ತರಬಹುದು ಎಂಬ ಆತಂಕದಿಂದ ಸುಮಾರು 1300 ಸಮಾಜ ಘಾತುಕ ಶಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ರಾಜ್ಯಾದ್ಯಂತ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುವ ಸರ್ಕಾರದ ನಿಲುವು ಅಚಲ. ಕೊಡಗೂ ಸೇರಿದಂತೆ ಎಲ್ಲ ಕಡೆ ಆಚರಣೆ ನಡೆಯಲಿದೆ. ಆದರೆ, ಕಾನೂನು– ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಿದ ಅವರು, ಟಿಪ್ಪು ಜಯಂತಿ ಆಚರಣೆಗೆ ಕೈಗೊಂಡಿರುವ ಬಂದೋಬಸ್ತ್ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಉಪಸ್ಥಿತರಿದ್ದರು.
ನ.8ರಂದು ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕರೆ ನೀಡಿರುವ ಪ್ರತಿಭಟನೆ ಮತ್ತು 10ರಂದು ನಡೆಸಲು ಉದ್ದೇಶಿಸಿರುವ ಕರಾಳ ದಿನದ ಸಂದರ್ಭದಲ್ಲಿ ಪರಿಸ್ಥಿತಿ ನೋಡಿಕೊಂಡು ಪ್ರತಿಭಟನೆ, ಮೆರವಣಿಗೆಗೆ ಒಪ್ಪಿಗೆ ಕೊಡುವಂತೆ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಹೇಳಿದರು.
‘ಸಮಾಜಘಾತುಕ ಶಕ್ತಿಗಳನ್ನು ಬಂಧಿಸುವ ಪ್ರಕ್ರಿಯೆ ಮುಂದುವರಿ ಯಬೇಕು. ಹಿಂಸೆ ಪ್ರಚೋದಿಸುವ ವ್ಯಕ್ತಿಗಳ ಮೇಲೆ ನಿರಂತರ ನಿಗಾ ಇಡಬೇಕು’ ಎಂದು ಮುಖ್ಯಮಂತ್ರಿ ಆದೇಶಿಸಿದರು.
‘ನ.10ರಂದು ಗುರುವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಬಂದೋಬಸ್ತ್ ಮೇಲುಸ್ತುವಾರಿ ವಹಿಸಬೇಕು. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ಈ ಬಾರಿ ಕಹಿ ಘಟನೆಗಳು ಮರುಕಳಿಸಬಾರದು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು’ ಎಂದೂ ಹೇಳಿದರು.
* ಕೆಲವರು ಟಿಪ್ಪು ಜಯಂತಿಯನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಆಸ್ಪದ ನೀಡಬಾರದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ
Comments are closed.