ಕರ್ನಾಟಕ

ಗುಳ್ಳೆ ತೆಗೆಯಲು ಹೋಗಿ ಯುವತಿಯ ಕಣ್ಣ ರೆಪ್ಪೆಯನ್ನೇ ಕತ್ತರಿಸಿದ ವೈದ್ಯರು

Pinterest LinkedIn Tumblr

smg-girlಶಿವಮೊಗ್ಗ: ಯುವತಿಯೊಬ್ಬಳ ಎಡಭಾಗದ ಹುಬ್ಬಿನ ಮೇಲೆ ಇರುವ ಗುಳ್ಳೆಯನ್ನು ತೆಗೆಯಲು ಹೋಗಿ ವೈದ್ಯರು ಕಣ್ಣಿನ ರೆಪ್ಪೆಗೆ ಕತ್ತರಿ ಹಾಕಿದ ಪ್ರಕರಣವೊಂದು ಇಲ್ಲಿನ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ಹೌದು. ಶೀಬಾ ಮುಕ್ತಾರ್ ಎಂಬಾಕೆಗೆ ಹುಟ್ಟಿನಿಂದಲೂ ಎಡಭಾಗದ ಹುಬ್ಬಿನ ಮೇಲೆ ಒಂದು ಸಣ್ಣ ಗುಳ್ಳೆ ಇತ್ತು. ಸದ್ಯ ಪಿಯುಸಿ ಓದುತ್ತಿರುವ ಈಕೆಗೆ ಇದು ಇತ್ತೀಚೆಗೆ ಇರುಸುಮುರುಸು ಮಾಡಿತ್ತು. ಹೀಗಾಗಿ ಇದನ್ನ ತೆಗೆಸಲು ಈಕೆಯ ತಾಯಿ ರೆಹಮತ್ ಉನ್ನಿಸಾ ಅವರು ಶಿವಮೊಗ್ಗದಲ್ಲಿರುವ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ, ನೀವು ನಯಾಪೈಸೆ ಖರ್ಚು ಮಾಡುವುದು ಬೇಡ. ನೀವು ಮಾಡಿಸಿರುವ ಇನ್ಶುರೆನ್ಸ್‍ನಿಂದಲೇ ಎಲ್ಲಾ ಹಣ ಪಡೆಯುತ್ತೇವೆ. ನೀವು ಬಂದು ಸೇರಿದರೆ ಸಾಕು ಎಂದು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು.

ವೈದ್ಯರ ಮಾತಿಗೆ ಬೆಲೆಕೊಟ್ಟ ಉನ್ನಿಸಾ ಅವರು ಹಿಂದುಮುಂದು ನೋಡದೆ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಹಣೆಯ ಮೇಲಿನ ಗುಳ್ಳೆಯ ಜೊತೆಗೆ ರೆಪ್ಪೆಯನ್ನೂ ಕತ್ತರಿಸಿದ್ದಾರೆ. ಆದರೆ ಈ ವಿಚಾರವನ್ನು ಯುವತಿಯ ಪೋಷಕರಿಗೆ ತಿಳಿಸಲೇ ಇಲ್ಲ. ಕಣ್ಣಿನ ರೆಪ್ಪೆಯನ್ನೂ ಶಸ್ತ್ರ ಚಿಕಿತ್ಸೆ ಮಾಡಬೇಕಿದ್ದರೆ ನೇತ್ರತಜ್ಞರು ಇರಲೇಬೇಕಿತ್ತು. ಆದರೆ, ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ಜನರಲ್ ಸರ್ಜನ್ ಅವರೇ ಮಾಡಿ ಮುಗಿಸಿದ್ದಾರೆ. ಇದರೊಂದಿಗೆ ಇನ್ಶುರೆನ್ಸ್‍ಗಾಗಿ ಹಣ ಪಡೆಯಲು ದಾಖಲೆಗಳನ್ನೂ ಸೂಕ್ತ ಸಮಯದಲ್ಲಿ ಸಲ್ಲಿಸಿಲ್ಲ. ಇದರಿಂದ ಶೀಬಾ ತಾಯಿ ತನ್ನ ಬಂಗಾರ ಅಡವಿಟ್ಟು 29 ಸಾವಿರ ರೂಪಾಯಿ ಕಟ್ಟಿದ್ದಾರೆ. ಹಣ ಕಟ್ಟಿದ ಮೇಲೆ ವೈದ್ಯರು, ಯುವತಿಯ ರೆಪ್ಪೆಯಲ್ಲಿ ತೊಂದರೆ ಇದೆ. ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ.

ಒಟ್ಟಿನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಇದೀಗ ಶೀಬಾ ರೆಪ್ಪೆ ಕಳೆದುಕೊಂಡು ತೊಂದರೆ ಅನುಭವಿಸುತ್ತಿದ್ದಾಳೆ. ಆದರೆ ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಮಂಡಳಿ ಯಾವುದೇ ರೀತಿ ಸ್ಪಂದನೆಯನ್ನು ನೀಡುತ್ತಿಲ್ಲ. ಇತ್ತ ರೆಪ್ಪೆಯನ್ನೂ ಕಳೆದುಕೊಂಡು, ಹಣವನ್ನೂ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ತುಂಗಾನಗರ ಠಾಣೆಯಲ್ಲಿ ಶೀಬಾ ಹಾಗೂ ಆಕೆಯ ಪೋಷಕರು ದೂರು ನೀಡಿದ್ದಾರೆ. ಜೊತೆಗೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ಈ ಕುಟುಂಬ ನಿರ್ಧರಿಸಿದೆ.

Comments are closed.