ಕರ್ನಾಟಕ

ನಕಲಿ ಪಡಿತರ: ಕರ್ನಾಟಕ ನಂ.1; 2.62 ಕೋಟಿ ನಕಲಿ

Pinterest LinkedIn Tumblr

ration cardನವದೆಹಲಿ: ಸಾರ್ವಜನಿಕ ಪಡಿತರ ವ್ಯವಸ್ಥೆಯ ದಾಖಲೆಗಳನ್ನು ಡಿಜಿಟಲ್‌ ರೂಪಕ್ಕೆ ಪರಿವರ್ತಿಸಿದ ಕಾರಣ ದೇಶದಲ್ಲಿ 2.62 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಲು ಸಾಧ್ಯವಾಗಿದೆ.

ಇಷ್ಟು ನಕಲಿ ಪಡಿತರ ಚೀಟಿಗಳಲ್ಲಿ 65.54 ಲಕ್ಷ ಕರ್ನಾಟಕದಲ್ಲಿ ಪತ್ತೆಯಾಗಿವೆ! ಮಹಾರಾಷ್ಟ್ರದಲ್ಲಿ 31 ಲಕ್ಷ ನಕಲಿ ಪಡಿತರ ಚೀಟಿಗಳು ಪತ್ತೆಯಾಗಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಕೇರಳ, ಗುಜರಾತ್, ಚಂಡೀಗಡ, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಮೇಘಾಲಯ ರಾಜ್ಯಗಳಲ್ಲಿ ನಕಲಿ ಪಡಿತರ ಚೀಟಿ ಪತ್ತೆಯಾಗಿಲ್ಲ.
ಪಡಿತರ ಚೀಟಿಗಳ ಜೊತೆ ಆಧಾರ್‌ ಸಂಖ್ಯೆ ಜೋಡಿಸಲು ಸರ್ಕಾರ ತೀರ್ಮಾನಿಸಿದ ನಂತರ, ನಕಲಿ ಪಡಿತರ ಚಿಟಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿದೆ.

‘ಇದುವರೆಗೆ ಶೇಕಡ 71ರಷ್ಟು ಪಡಿತರ ಚೀಟಿಗಳ ಜೊತೆ ಆಧಾರ್‌ ಸಂಖ್ಯೆಯ ಜೋಡಣೆ ಪೂರ್ಣಗೊಂಡಿದೆ’ ಎಂದು ಸಚಿವ ಪಾಸ್ವಾನ್ ತಿಳಿಸಿದರು.

ಆಧಾರ್‌ ಜೋಡಣೆಯ ಜತೆಯಲ್ಲೇ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನವನ್ನು ಸಂಪೂರ್ಣವಾಗಿ ಗಣಕೀಕರಣ ಮಾಡುವ ಗುರಿ ಕೂಡ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸಚಿವರು ಹೇಳಿದರು.

ನೇರ ನಗದು ವರ್ಗಾವಣೆ ಯೋಜನೆಯನ್ನು ಕೇಂದ್ರ ಸರ್ಕಾರ ಚಂಡೀಗಡ, ಪುದುಚೇರಿ, ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಜಾರಿಗೆ ತಂದಿತ್ತು. ಇದರ ಅಡಿ, ಆಹಾರ ಧಾನ್ಯಗಳ ಸಬ್ಸಿಡಿ ಮೊತ್ತವನ್ನು ಅರ್ಹರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

Comments are closed.