ಕರ್ನಾಟಕ

ಪಪ್ಪಾಯ v/s ತುಳಸಿ ಅಮೂಲ್ಯ ಗುಣಗಳು.

Pinterest LinkedIn Tumblr

tulasi_papaya_ayur

ಮಂಗಳೂರು: ಮನೆಯಂಗಳವನ್ನು ಅಲಂಕರಿಸುವ ಶ್ರೀತುಳಸಿ, ಪೂಜೆಯಲ್ಲಿ ಇರಲೇಬೇಕಾದ ತುಳಸಿ, ಧಾರ್ಮಿಕವಾಗಿ ಎಷ್ಟು ಮಹತ್ವದ್ದೋ ಅಷ್ಟೇ ಔಷಧಿಸತ್ವದಿಂದ ಕೂಡಿದ ವನಸ್ಪತಿ. ಸಂಸ್ಕೃತದಲ್ಲಿ ತುಳಸಿಗೆ ಸುರಸಾ, ಗ್ರಾಮ್ಯ, ಸುಲಭಾ, ಗೌರಿ, ಬಹುಮಂಜರಿ, ಶೂಲಘ್ನಿ, ದೇವದುಂದುಭಿ, ಪಾವನಿ, ವಿಷ್ಣುಪ್ರಿಯೆ, ದಿವ್ಯ, ಭಾರತಿ ಮುಂತಾದ ಅನೇಕ ಪರ್ಯಾಯ ನಾಮಗಳಿವೆ.

ತುಳಸಿಗೆ ‘ಸರ್ವರೋಗ ನಿವಾರಕ’ ಎಂಬ ಬಿರುದೂ ಇದೆ. ಇದು ಪುರಾಣಪ್ರಸಿದ್ಧವಾಗಿದೆ, ಶ್ರದ್ಧೆಯ ಕೇಂದ್ರವಾಗಿದೆ. ತುಳಸಿಯಲ್ಲಿ ಅಮೂಲ್ಯ ರಾಸಾಯನಿಕ ಘಟಕಗಳಿವೆ. ತುಳಸಿ ಇದ್ದಲ್ಲಿ ಸೊಳ್ಳೆಗಳ ಕಾಟ ಕಡಿಮೆ. ಅನೇಕ ಬಗೆಯ ಸೂಕ್ಷ್ಮ ರೋಗಾಣುಗಳನ್ನು ಇದು ನಾಶಮಾಡುತ್ತದೆ, ಪರಿಸರವನ್ನು ಶುದ್ಧಗೊಳಿಸುತ್ತದೆ.

ತುಳಸಿಯಲ್ಲಿ ಔಷಧಿಗುಣಗಳು:
ಕೆಮ್ಮುನೆಗಡಿ ಇರುವಾಗ ತುಳಸಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.
ಗಂಟಲ ನೋವು ಇದ್ದಾಗ, ಸ್ವರಕಳೆದಾಗ ತುಳಸಿಯ ಎಲೆಹಾಕಿ ನೀರನ್ನು ಕುದಿಸಿ ಬಾಯಿಮುಕ್ಕಳಿಸಬೇಕು.
ಎಲ್ಲ ಬಗೆಯ ಜ್ವರದ ಪೀಡೆಗೆ ತುಳಸಿಯ ಕಷಾಯ ಪರಿಣಾಮಕಾರಿಯಾಗಿದೆ.
ಉರಿಮೂತ್ರದ ತೊಂದರೆಗೆ ತುಳಸಿಯ ರಸವನ್ನು ಹಾಲುಸಕ್ಕರೆಯೊಂದಿಗೆ ಬೆರೆಸಿ ಕುಡಿಯಬೇಕು.
ಚರ್ಮರೋಗಕ್ಕೆ (ಇಸಬು,ಗಜಕರ್ಣಕ್ಕೆ) ತುಳಸಿಯ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸಬೇಕು, ತುಳಸಿ ಕಷಾಯ ಕುಡಿಯಬೇಕು.
ಮಕ್ಕಳಿಗೆ ಕಫಕೂಡಿದ ಕೆಮ್ಮು ಬಂದಾಗ ತುಳಸಿಯ ದಳ ಜೇನಿನಲ್ಲಿ ಅದ್ದಿ ತಿನ್ನಿಸಬೇಕು.
ಯಕೃತ್ತಿನ(ಲಿವರ್) ತೊಂದರೆಗೆ ತುಳಸಿ ಕಷಾಯ ಉಪಶಮನಕಾರಿ.
ಕಿವಿಯ ನೋವಿಗೆ ತುಳಸಿಯ ರಸ ಕಿವಿಯಲ್ಲಿ ಹಾಕಬೇಕು. (ರಸದ ಶುದ್ಧಿಯ ಬಗ್ಗೆ ಗಮನವಿರಬೇಕು.)
ರೋಗನಿರೋಧಕ ಶಕ್ತಿ ಹೆಚ್ಚಿಸಲು ಖಾಲಿಹೊಟ್ಟೆಯಲ್ಲಿ 5ರಿಂದ 10 ತುಳಸಿಯ ದಳ ತಿನ್ನಬೇಕು.
ವಾಂತಿಭೇದಿ ಆದಾಗ ತುಳಸಿಯ ಬೀಜ ಬಳಸಬೇಕು.

ಪಪ್ಪಾಯ :

ಮನೆಯ ಅಂಗಳದಲ್ಲಿ ಬೆಳೆಯುವ ಪಪ್ಪಾಯಕ್ಕೆ ‘ಫರಂಗಿಹಣ್ಣು’ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಇದು ವಿದೇಶದಿಂದ ಬಂದದ್ದಾಗಿದೆ. ಇದರ ಮೂಲ ದಕ್ಷಿಣ ಅಮೆರಿಕಾ ಇದನ್ನು ಕಂಡುಹಿಡಿದವ ಕೋಲಂಬಸ್. ಆದಿವಾಸಿ ಜನ ಕೋಲಂಬಸ್‌ನನ್ನು ಸ್ವಾಗತಿಸಿದಾಗ ಅವನಿಗೆ ಕೊಟ್ಟ ಹೂವುಹಣ್ಣುಗಳಲ್ಲಿ ಪಪ್ಪಾಯ ಒಂದಾಗಿತ್ತು. ವಾಷಿಂಗ್‌ಟನ್ ವಿಜ್ಞಾನ ಕೇಂದ್ರದವರು ಸಾರ್ವಜನಿಕ ಹಿತದ ದೃಷ್ಟಿಯಿಂದ ಆರೋಗ್ಯರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಹಣ್ಣುಗಳ ಪಟ್ಟಿ ಪ್ರಕಟಿಸಿದ್ದಾರೆ. ಅದರಲ್ಲಿ ‘ಪಪ್ಪಾಯ’ಕ್ಕೆ ಅಗ್ರಸ್ಥಾನ.

ಪಪ್ಪಾಯ ಕಾಯಿಯನ್ನು ತರಕಾರಿಯಂತೆ ಕೂಡ ಬಳಸುತ್ತಾರೆ. ಅದರ ಹಸಿರು ಸಿಪ್ಪೆ ಗೀರಿದಾಗ ಬಿಳಿಯ ಬಣ್ಣದ ರಸವೊಂದು ಸ್ರವಿಸುತ್ತದೆ. ಇದನ್ನು ಸಂಗ್ರಹಿಸಿ ಸಂಸ್ಕರಿಸಿದಾಗ ‘ಪೆಪೇನ್’ ಎಂಬ ಕಿಣ್ವ ದೊರೆಯುತ್ತದೆ. ಇದಕ್ಕೆ ದೇಶವಿದೇಶಗಳಲ್ಲಿ ಬೇಡಿಕೆ ಇದೆ. ಅನೇಕ ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ.

ಪಪ್ಪಾಯದಲ್ಲಿಯ ಔಷಧೀಯ ಗುಣಗಳು :
ಪಪ್ಪಾಯ ಜೀರ್ಣಕಾರಿ ಶಕ್ತಿಯನ್ನು ಪಡೆದಿದೆ, ಜೀರ್ಣಾಂಗದ ಅನೇಕ ತೊಂದರೆಗಳಿಗೆ ನಿವಾರಣೆ ನೀಡುತ್ತದೆ.
ಪಪ್ಪಾಯದಲ್ಲಿ ವಿಟಮಿನ್ ‘ಎ’ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇರುಳುಗಣ್ಣು ದೋಷ ನಿವಾರಣೆಗೆ ಸಹಕಾರಿ.
ಮೂಲವ್ಯಾಧಿಯಿಂದ ಬಳಲುವವರಿಗೆ ಇದು ಒಳ್ಳೆಯದು.
ನರದ ದೌರ್ಬಲ್ಯ ಇರುವವರಿಗೆ, ಹೃದ್ರೋಗದಿಂದ ಬಳಲುವವರಿಗೆ ಇದು ಉತ್ತಮವಾಗಿದೆ.
ಬಾಣಂತಿಯರು ಪಪ್ಪಾಯ ಸೇವಿಸಿದರೆ ಅವರ ಎದೆಹಾಲು ವರ್ಧಿಸುವುದು. (ಗರ್ಭಿಣಿ ಸ್ತ್ರೀಯರು ಮೂರು ತಿಂಗಳ ವರೆಗೆ ಪಪ್ಪಾಯ ಸೇವಿಸಬಾರದು, ನಂತರ ಸೇವಿಸಬಹುದು.)
ಮಲಬದ್ಧತೆ ಇರುವವರು ಊಟದ ನಂತರ ಇದನ್ನು ಸೇವಿಸಬಹುದು.
ಮೊಡಮೆ ಮತ್ತು ಗುಳ್ಳೆಗಳಿಗೆ ಪಪ್ಪಾಯ ತಿರುಳನ್ನು ಲೇಪಿಸಬೇಕು.
ಕೂದಲಿನ ಆರೋಗ್ಯಕ್ಕೆ, ಹದಿನೈದು ದಿನಗಳಿಗೊಮ್ಮೆ, ಚೆನ್ನಾಗಿ ಹಣ್ಣಾಗಿರುವ ಪಪ್ಪಾಯ ಸಿಪ್ಪೆ, ತಿರುಳು, ಬೀಜ ಸಮೇತ ನುಣ್ಣಗೆ ಅರೆಯಬೇಕು. ಇದನ್ನು ತಲೆಗೆ ಲೇಪಿಸಿ ಅರ್ಧ ಗಂಟೆಯ ನಂತರ ತೊಳೆಯಬೇಕು. ಇದರಿಂದ ಕೂದಲು ಕಾಂತಿಯುಕ್ತವಾಗುತ್ತವೆ, ಆರೋಗ್ಯಕರವಾಗುತ್ತವೆ.
ಪಪ್ಪಾಯಹಣ್ಣಿನ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಮಲೇಶಿಯಾದಲ್ಲಿ ನಡೆದ ಸಂಶೋಧನೆಯ ಪ್ರಕಾರ ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಗುತ್ತದೆಯಂತೆ. ಬ್ರಾಜಿಲ್‌ನಲ್ಲಿ ನಡೆದ ಸಂಶೋಧನೆಯ ಪ್ರಕಾರ ಪಪ್ಪಾಯ ಬೀಜದಲ್ಲಿ ಗರ್ಭನಿರೋಧಕ ಗುಣ ಇದೆಯಂತೆ.

ಪಪ್ಪಾಯದಿಂದ ಬರ್ಫಿ, ಉಪ್ಪಿನಕಾಯಿ, ಜ್ಯೂಸ್, ಸೀಕರಣೆ, ಚಟ್ನಿ, ಕ್ಯಾಂಡಿ, ಜೆಲ್ಲಿ, ಟೂಟಿಫ್ರೂಟಿ, ಜಾಂ, ಸಲಾಡ್ ಮಾಡಬಹುದು. ಪಪ್ಪಾಯ ಕಾಯಿ ಹುಳಿಮಜ್ಜಿಗೆ, ಖೀರ, ಕೂಟ ಮಾಡಲು ವಿಧಾನ ತಿಳಿಸಿದ್ದಾರೆ.

Comments are closed.