ಕರ್ನಾಟಕ

ಮತ್ತೊಬ್ಬ ಆರ್.ಎಸ್.ಎಸ್ ಕಾರ್ಯಕರ್ತ ನಿಗೂಢ ಸಾವು

Pinterest LinkedIn Tumblr

raviಪಿರಿಯಾಪಟ್ಟಣ, ನ. ೫- ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯ ಕೋಪ ತಾಪ ಆರುವ ಮುನ್ನವೆ ಮತ್ತೊಬ್ಬ ಸಂಘ ಪರಿವಾರದ ಕಾರ್ಯಕರ್ತ ರವಿ ನಿಗೂಢ ರೀತಿಯಲ್ಲಿ ಮೃತಪಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ.

ಟಿಪ್ಪು ಜಯಂತಿ ಆಚರಣೆ ಸಂಬಂಧ ವಾದ-ವಿವಾದ ಭುಗಿಲೆದ್ದಿರುವ ಸಂದರ್ಭದಲ್ಲೇ ಪಿರಿಯಾಣಪಟ್ಟಣ ತಾಲ್ಲೂಕಿನ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ರವಿ ಅವರ ನಿಗೂಢ ಸಾವು ಉದ್ರಿಕ್ತ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಪಿರಿಯಾಪಟ್ಟಣ ಹೊರ ವಲಯದ ಸಿದ್ದಾಪುರ ರಸ್ತೆಯ ಮಾಗಳಿ ಗ್ರಾಮದ ಬಳಿ ರವಿ ಅವರ ಮೃತದೇಹ ಪತ್ತೆಯಾಗಿದೆ.

ತಾಲೂಕಿನ ಮಾಗಳಿ ಗ್ರಾಮದ ಜವರೇಗೌಡ ರವರ ಮಗ ಜೆ.ರವಿ(28) ಎಂಬ ವ್ಯಕ್ತಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ನೆನ್ನೆ ರಾತ್ರಿ ಪಟ್ಟಣದಿಂದ ತನ್ನ ಗ್ರಾಮವಾದ ಮಾಗಳಿಗೆ ಬೈಕಿನಲ್ಲಿ ತೆರಳುವಾಗ ಹಳೆಪೇಟೆ ಕಂಠಾಪುರ ಮತ್ತು ಮಾಗಳಿ ಗ್ರಾಮದ ಬಳಿ ಇರುವ ತೇಗದ ತೋಟದ ಪಕ್ಕ ಅಪಘಾತದಲ್ಲಿ ಬಿದ್ದ ಸ್ಥಿತಿಯಲ್ಲಿ ದೇಹ ಇರುವುದನ್ನು ಕಂಡು ದಾರಿಹೋಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.

ಶವ ಪರೀಕ್ಷೆಯ ವೇಳೆ ರವಿ ಅವರ ತಲೆ ಭಾಗಕ್ಕೆ ಗಂಭೀರವಾದ ಗಾಯ ಕಂಡು ಬಂದಿದ್ದು, ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ. ಮೇಲ್ನೋಟಕ್ಕೆ ಅಪಘಾತ ಎಂದು ಹೇಳಲಾಗುತ್ತಿದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪಿರಿಯಾಪಟ್ಟಣ ಪೊಲೀಸರು ಕೂಲಂಕಷ ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಸಂಸದ ಪ್ರತಾಪ್‌ ಸಿಂಹ ಅವರು ಭೇಟಿ ನೀಡಿ ಪ್ರಕರಣದ ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದಾರೆ.

ರವಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಸ್ಕೂಟರ್‌ನಲ್ಲಿ ವಾಪಾಸಾಗುತ್ತಿದ್ದರು ಎಂದು ತಿಳಿದು ಬಂದಿದೆ. ಸಂಘ ಪರಿವಾರದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಲವರ ವೈರ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ.

ತಕ್ಷಣ ಸ್ಥಳಕ್ಕೆ ಪೊಲೀಸರು ಹಾಗೂ ಮೃತನ ಸಂಬಂಧಿಕರು ಆಗಮಿಸಿ ರವಿ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ರವಿಯನ್ನು ಪರೀಕ್ಷಿಸಿದ ವೈದ್ಯರು ಈತ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು. ಈ ವಿಷಯವಾಗಿ ಮೃತನ ತಮ್ಮ ಜೆ.ಸ್ವಾಮಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧವಾಗಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ರವಿ ಅಪಘಾತದಲ್ಲಿ ಸಾವನ್ನಪ್ಪಿದರೋ ಅಥವಾ ದುಷ್ಕರ್ಮಿಗಳಿಂದ ಹತ್ಯೆಯಾಗಿರುವರೇ ಎಂಬುದು ತನಿಖೆಯಿಂದಷ್ಟೇ ತಿಳಿಯುತ್ತದೆ.

Comments are closed.