ಕರ್ನಾಟಕ

ಜಿ.ಜನಾರ್ದನರೆಡ್ಡಿ ಪ್ರವೇಶಕ್ಕಾಗಿ ವಾಹನ ಸಂಚಾರ ತಡೆದ ಪೊಲೀಸರು

Pinterest LinkedIn Tumblr

pvec28-janardhan-reddyಬಳ್ಳಾರಿ: ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಅಡಿ ವಿಚಾರಣೆ ಎದುರಿಸುತ್ತಿರುವ ಜಿ.ಜನಾರ್ದನರೆಡ್ಡಿ, ಸುಪ್ರೀಂ ಕೋರ್ಟ್‌ ಅನುಮತಿ ಮೇರೆಗೆ ಮಂಗಳವಾರ ಸಂಜೆ ನಗರಕ್ಕೆ ಬಂದಾಗ ಅವರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಅದಕ್ಕಾಗಿ ನಗರದ ಮೂರು ಪ್ರಮುಖ ವೃತ್ತಗಳಲ್ಲಿ ಪೊಲೀಸರು ವಾಹನ ಸಂಚಾರ ಬಂದ್‌ ಮಾಡಿದ ಘಟನೆಯೂ ನಡೆಯಿತು.

ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನೆರೆದ ವಾಹನ ಸವಾರರು ಮತ್ತು ಪಾದಚಾರಿಗಳ ನಡುವೆಯೇ ಕೆಲ ಕಾರ್ಯಕರ್ತರು ಮದ್ಯಸೇವಿಸಿ ಹುಚ್ಚಾಟ ಪ್ರದರ್ಶಿಸಿದರು. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದ ವೇಳೆ ಕಿವಿಗಡಚಿಕ್ಕುವಂತೆ ಪಟಾಕಿ ಸಿಡಿಸಿದರು. ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರು ಅವರನ್ನು ತಡೆಯಲು ಆಗದೆ ವಾಹನಗಳನ್ನು ತಡೆಯುವತ್ತ ಮಾತ್ರ ತಮ್ಮ ಗಮನ ಹರಿಸಿದ್ದರು.

ನಗರದ ಗಡಿಗಿ ಚೆನ್ನಪ್ಪ ವೃತ್ತ, ಕನಕದುರ್ಗಮ್ಮ ಗುಡಿ ವೃತ್ತ ಮತ್ತು ಬಿಜೆಪಿ ಜಿಲ್ಲಾ ಘಟಕದ ಕಚೇರಿ ಇರುವ ಎಸ್ಪಿ ವೃತ್ತದಲ್ಲಿ ಪೊಲೀಸರು ವಾಹನ ಸಂಚಾರವನ್ನು ಬಂದ್‌ ಮಾಡಿದ್ದರು. ಚೆನ್ನಪ್ಪ ವೃತ್ತದಲ್ಲಿ ಸಂಚಾರ ನಿಯಂತ್ರಣ ದೀಪಗಳನ್ನು ಆರಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರು ಸಮಸ್ಯೆ ಎದುರಿಸಿದರು.

ಸಂಜೆ 4ರ ವೇಳೆಗೆ ಹೊರವಲಯದ ಪಿಡಿಹಳ್ಳಿಯಿಂದ ಯಾತ್ರೆಯನ್ನು ಆರಂಭಿಸಿದ ರೆಡ್ಡಿ ಬಳಿಕ ಅಲ್ಲಿಂದ 5 ಕಿಮೀ ದೂರದ ನಗರಕ್ಕೆ ಬರುವವರೆಗೆ ವಾಹನದ ದಟ್ಟಣೆ ಹೆಚ್ಚಿ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಇಂಥ ಸನ್ನಿವೇಶದ ನಡುವೆಯೇ, ನಿಧಾನಗತಿಯಲ್ಲಿ ಸಂಚರಿಸುತ್ತಿದ್ದ ತೆರೆದ ಕಾರಿನೊಳಗೆ ನಿಂತಿದ್ದ ರೆಡ್ಡಿ ಹಸನ್ಮುಖರಾಗಿ ಕಾರ್ಯಕರ್ತರೆಡೆಗೆ ಕೈಬೀಸುತ್ತಿದ್ದರು. ಅವರ ಕೈಕುಲುಕಲು ನೂರಾರು ಮಂದಿ ಮುಗಿಬಿದ್ದಿದ್ದರು. ರೆಡ್ಡಿ ಬರುವ ದಾರಿಯುದ್ದಕ್ಕೂ ಪಟಾಕಿ, ಬಾಣ ಬಿರುಸುಗಳು ವಿಜೃಂಭಿಸಿದವು. ಪಟಾಕಿ ಶಬ್ದಗಳನ್ನು ತಾಳಲಾಗದೆ ಹಲವು ಅಂಗಡಿಗಳ ಮಾಲೀಕರು ಬಾಗಿಲು ಮುಚ್ಚಿದರು.
ಎಸ್ಪಿ ವೃತ್ತದಲ್ಲಿ ಹೊಸಪೇಟೆ, ಸಿರುಗುಪ್ಪ ಕಡೆಯಿಂದ ಬರುವ ವಾಹನಗಳನ್ನು ತಡೆದು ಮೋತಿ ವೃತ್ತದ ಮೂಲಕ ತೆರಳಲು ಸೂಚಿಸಲಾಯಿತು. ವಾಹನ ಸಂಚಾರವಿಲ್ಲದ ರಸ್ತೆಯಲ್ಲಿ ಕಾರ್ಯಕರ್ತರು ಅಪಾಯಕಾರಿ ರೀತಿಯಲ್ಲಿ ಬೈಕ್‌ ವೀಲಿಂಗ್‌ ನಡೆಸಿ ಕಿರುಚಾಡಿದರು.

ಸಂಸದ ಬಿ.ಶ್ರೀರಾಮುಲು, ಕಂಪ್ಲಿ ಶಾಸಕ ಟಿ.ಎಚ್‌.ಸುರೇಶ್‌ಬಾಬು, ರೆಡ್ಡಿ ಸಂಬಂಧಿ ಜಿ.ಸೋಮಶೇಖರರೆಡ್ಡಿ ಮೆರವಣಿಗೆಯಲ್ಲಿ ರೆಡ್ಡಿ ಜೊತೆಗಿದ್ದರು.

ಪ್ರಕರಣ ದಾಖಲಿಸಲು ಸೂಚನೆ

‘ಈ ರೀತಿ ಮೆರವಣಿಗೆ ಮೂಲಕ ನಗರಕ್ಕೆ ಬರಲು ರೆಡ್ಡಿ ಅನುಮತಿ ಪಡೆದಿದ್ದರೆ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌, ‘ಯಾವುದೇ ಅನುಮತಿ ಪಡೆದಿರಲಿಲ್ಲ. ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡಿದ ಮೇರೆಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮದ್ಯಸೇವಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಹಂಪಿ ಉತ್ಸವದ ಸಿದ್ಧತೆ ನಡೆಯುತ್ತಿರುವುದರಿಂದ ಹೆಚ್ಚಿನ ಸಿಬ್ಬಂದಿಯನ್ನು ಅಲ್ಲಿಗೇ ನಿಯೋಜಿಸಲಾಗಿದೆ. ನಗರದಲ್ಲಿ ಸಿಬ್ಬಂದಿ ಕೊರತೆ ಇತ್ತು’ ಎಂದು ತಿಳಿಸಿದರು.

Comments are closed.