ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಗೈದಿದ್ದು, ಉದ್ಯಮಿ ಪರಚೂರಿ ಸುರೇಂದ್ರ ಅವರನ್ನು ಗುಂಡಿಕ್ಕಿ ಹತ್ಯೆ ಗೈದಿದ್ದಾರೆ.
ನಿನ್ನೆ ರಾತ್ರಿ ಸುಮಾರು 9.30ರ ಸುಮಾರಿನಲ್ಲಿ ಪರಚೂರಿ ಸುರೇಂದ್ರ ಅವರ ಮೇಲೆ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 6 ಸುತ್ತು ಗುಂಡು ಹಾರಿಸಿದ್ದಾರೆ. ನಿನ್ನೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗಿದ್ದ ಪರಚೂರಿ ಸುರೇಂದ್ರ ಅವರನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು, ಸಂಜಯನಗರದಲ್ಲಿರುವ ಅವರ ಆಪಾರ್ಟ್ ಮೆಂಟ್ ಬಳಿಯಲ್ಲೇ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ತೀವ್ರ ರಕ್ತಸ್ರಾವದಿಂದ ಕುಸಿದಿದ್ದ ಸುರೇಂದ್ರ ಅವರನ್ನು ಎಂಎಸ್ ರಾಮ್ಯಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಉದ್ಯಮಿ ಪರಚೂರಿ ಸುರೇಂದ್ರ ಅವರು, ಸಚಿವ ರಮೇಶ್ ಕುಮಾರ್ ಅವರ ಆಪ್ತರು ಎಂದು ಹೇಳಲಾಗುತ್ತಿದೆ. ಅಲ್ಲದೆ ಸುರೇಂದ್ರ ಅವರು ಸೆಕ್ಯೂರಿಟಿ ಸಂಸ್ಥೆಯ ಮಾಲೀಕರಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸಂಜಯನಗರ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.