ಕರ್ನಾಟಕ

ಮಕ್ಕಳಿಗೆ ಕಾಡುವ ಹುಳದ ಭಾಧೆ ನಿವಾರಣೆಗೆ “ಡಿ-ಮರ್ಮಿಂಗ್”

Pinterest LinkedIn Tumblr

d_warming_1

ಮಂಗಳೂರು: ಮಕ್ಕಳು ಆಹಾರ ಸೇವಿಸಲು ಕೆಲವೊಮ್ಮೆ ಆಸಕ್ತಿ ತೋರಿಸುವುದಿಲ್ಲ. ಅವರಿಗೆ ಹಸಿವೆಯೇ ಆಗುವುದಿಲ್ಲ. ಕ್ರಮೇಣ ಅವರಲ್ಲಿ ನಿಶ್ಶಕ್ತಿ ಕಾಣಿಸಿಕೊಳ್ಳುತ್ತದೆ; ರಕ್ತಹೀನತೆಯಿಂದ ನರಳುತ್ತಾರೆ. ಆಟ ಪಾಠಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸದಾ ಆಯಾಸಗೊಂಡವರಂತೆ ಇರುತ್ತಾರೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳಿಗೆ ಕಾರಣ ಅವರ ಕರುಳನ್ನು ಹೊಕ್ಕಿರುವ ಹುಳುಗಳು. ಈ ಹುಳುಗಳಿಂದ ಪಾರಾಗದ ಹೊರತು ಅವರು ಸಾಮಾನ್ಯಸ್ಥಿತಿಗೆ ಬರಲಾರರು. ಹೀಗೆ ಮನುಷ್ಯನ ಕರುಳನ್ನು ಆಕ್ರಮಿಸಿರುವ ಜಂತುಗಳನ್ನು ನಾಶಮಾಡುವ ಪ್ರಕ್ರಿಯೆಯೇ ‘ಡಿ ವರ್ಮಿಂಗ್‌’.

ಡಿ ವರ್ಮಿಂಗ್‌ ಹುಳುಗಳ ಹಾವಳಿಯಿಂದ ಮಕ್ಕಳ ರಕ್ಷಣೆ

ಮಕ್ಕಳು ಊಟ ಮಾಡದೆ ಎಷ್ಟು ಹೊತ್ತಾದರೂ ಇರುತ್ತಾನೆಂದೂ, ಹಸಿವು ಎಂದು ಹೇಳುವುದೇ ಇಲ್ಲವೆಂದೂ, ತೂಕ, ಎತ್ತರದಲ್ಲಿಯೂ ಅವನ ಸಹಪಾಠಿಗಳಿಗಿಂತ ಕಡಿಮೆ ಇದ್ದು ಅವನ ಬೆಳವಣಿಗೆಯಲ್ಲಿ ಎರಡು ವರ್ಷಗಳಿಂದ ಯಾವುದೇ ಬದಲಾವಣೆ ಇಲ್ಲವೆಂದರೆ, ಸದಾ ಆಯಾಸ, ಮಂಪರಿನಿಂದ ಇದ್ದರೆ ಅತಂಹ ಮಕ್ಕಳು ಹುಳದ ಬಾಧೆಗೆ ಒಳಪಟ್ಟವರಾಗಿದ್ದರೆ ಎಂದು ಹೇಳಬಹುದು.

‘ಡಿ ವರ್ಮಿಂಗ್‌’ ಎಂದರೆ ಎನು?
ಮನುಷ್ಯನ ಕರುಳಿನಲ್ಲಿ ಪರಾವಲಂಬಿಗಳಾಗಿ ವಾಸಮಾಡುತ್ತಾ, ಅವನ ಪೋಷಕಾಂಶ ಹೀರಿ ಬೆಳೆದು, ಆ ಮನುಷ್ಯನನ್ನು ನಿಶ್ಶಕ್ತರನ್ನಾಗಿ ಮಾಡುವ ಜಂತುಗಳನ್ನು (Parasites) ಮಾತ್ರೆಗಳ ಮೂಲಕ ನಾಶ ಮಾಡುವ ಪ್ರಕ್ರಿಯೆಗೆ ‘ಡಿ ವರ್ಮಿಂಗ್‌’ ಎಂದು ಕರೆಯುತ್ತಾರೆ.

ನಮ್ಮ ಕರುಳಿನಲ್ಲಿ ವಾಸಮಾಡುವ ಪರಾವಲಂಬಿ ಜೀವಿಗಳು:
*ಆಸ್ಕಾರಿಸ್‌ ಲಂಬ್ರಿಕಾಯ್ಡಿಸ್‌ (Ascoris *umbricoides) ಜಂತುಹುಳ (Round worm)
*ಹುಕ್‌ ವರ್ಮ್‌ ಕೊಕ್ಕೆಹುಳ ವರ್ಗಕ್ಕೆ ಸೇರಿದ ಆಂಕೈಲೊಸ್ಟೊಮಾ ಡ್ಯುಯೊಡಿನಾಲೆ (Anky*ostoma duodena*e) ಮತ್ತು ನಿಕೆಟರ್‌ ಅಮೆರಿಕಾನಸ್‌ (Necator Americanus).
*ಟ್ರಿಚುರಿಸ್‌ ಟ್ರಿಚಿಯೂರಾ (Trichuris trichiura) – whip worm. ಚಾವಟಿ ಹುಳು.
*ಸ್ಟ್ರಾಂಗೈಲಾಯಿಡಿಸ್‌ ಸ್ಟರ್ಕೊರಾಲಿಸ್‌ (Strongy*oides sterstercora*is)
ಮೇಲೆ ತಿಳಿಸಿದ ಎಲ್ಲವೂ ಮಣ್ಣಿನ ಮುಖಾಂತರ ಮನುಷ್ಯನ ದೇಹವನ್ನು ಹೊಕ್ಕುವುದರಿಂದ ಇವನ್ನು ‘Soi*transmitted he*minth infections’ ಎಂದು ಗುಂಪಿನಿಂದ ಗುರುತಿಸಲಾಗುತ್ತದೆ.

ಇವೇ ಅಲ್ಲದೆ ಎಂಟಿರೊಬಿಯಸ್‌ ವರ್ಮಿಕುಲಾರಿಸ್‌, ಸ್ಟ್ರಾಂಗೈಲಾಯಿಡಿಸ್‌ ಫುಲೆಬೋರ್ನಿ, ಟ್ರೈಚಿನೆಲ್ಲಾ ಸ್ಪೈರಾಲಿಸ್‌, ಡ್ರಾಕಂಕುಲಸ್‌ ಮೆಡಿನೆಸ್ಸಿಸ್‌ ಮತ್ತು ಕ್ಯಾಪಿಲ್ಲೇರಿಯ ಫಿಲಿಪ್ಪಿನೆಸ್ಸಿಸ್‌ ಸಹ ಈ ಗುಂಪಿಗೆ ಸೇರುತ್ತವೆ.

ಮೇಲೆ ಹೇಳಿದ ಗುಂಪಿನಲ್ಲಿ ಮೊದಲಿನ ನಾಲ್ಕು ಜಂತುಗಳ ಮೊಟ್ಟೆ /ಕೋಶ/ಮರಿಗಳು ಮಣ್ಣಿನಲ್ಲಿ ವಾಸವಾಗಿದ್ದು ಕಲುಷಿತಗೊಂಡ ನೀರು, ಶುಚಿಗೊಳಿಸದ ಹಣ್ಣು, ಸರಿಯಾಗಿ ತೊಳೆಯದ/ ಬೇಯಿಸಿದ ತರಕಾರಿ ಸೇವಿಸುವುದರಿಂದ ಮನುಷ್ಯನ ದೇಹವನ್ನು ಪ್ರವೇಶಿಸುತ್ತವೆ. ಕರುಳಿನಲ್ಲಿ ವಾಸವಾಗಿರುವ ಇವುಗಳ ಮೊಟ್ಟೆ ಮಲದಲ್ಲಿ ವಿಸರ್ಜನೆಗೊಳ್ಳುವುದರಿಂದ, ಮಲವಿಸರ್ಜನೆಯ ನಂತರ ಕೈಗಳನ್ನು ಸರಿಯಾಗಿ ಶುಚಿಗೊಳಿಸದೆ ಆಹಾರ ತಯಾರಿಸುವುದು/ ಸೇವಿಸುವುದರಿಂದಲೂ ಈ ಜಂತುಗಳು ನಮ್ಮ ದೇಹ ಪ್ರವೇಶಿಸುತ್ತವೆ.

ಈ ಎಲ್ಲ ಪರೋಪಜೀವಿಗಳ ಪೈಕಿ ಕೊಕ್ಕೆಹುಳುವಿನ ಮೊಟ್ಟೆ/ಮರಿಗಳಿಂದ ಕಲುಷಿತಗೊಂಡ ಮಣ್ಣಿನ ಮೇಲೆ ಬರಿಗಾಲಿನಲ್ಲಿ ನಡೆಯುವುದರಿಂದ ಅವು ಕಾಲಿನ ಚರ್ಮಕ್ಕೆ ಅಂಟಿಕೊಂಡು ದೇಹವನ್ನು ಪ್ರವೇಶಿಸುತ್ತವೆ. ಹೀಗೆ ದೇಹವನ್ನು ಹೊಕ್ಕ ಹುಳ ರಕ್ತನಾಳವನ್ನು ಪ್ರವೇಶಿಸಿ ಕೊನೆಗೆ ಸಣ್ಣ ಕರುಳಿನಲ್ಲಿ ಬಂದು ನೆಲೆಸುತ್ತವೆ. ಅಲ್ಲಿ ಸಂತಾನೋತ್ಪತ್ತಿಯಿಂದ ಹೆಣ್ಣುಹುಳಗಳು ಮೊಟ್ಟೆಯಿಟ್ಟು, ಅವು ಮಲದಲ್ಲಿ ಹೊರಬರುತ್ತವೆ. ಹೀಗೆ ಅವುಗಳ ಜೀವನಚಕ್ರ ಮುಂದುವರೆಯುತ್ತದೆ.

ಸಾಮಾನ್ಯವಾಗಿ ಈ ಜಂತುಹುಳ ಮನುಷ್ಯನ ಕರುಳಿನಲ್ಲಿ ಕಡಿಮೆ ಪ್ರಮಾಣದಲ್ಲಿದ್ದರೆ, ಆ ವ್ಯಕ್ತಿ ಯಾವುದೇ ತೊಂದರೆ ಇಲ್ಲದೆ ಜೀವನ ನಡೆಸುತ್ತಾನೆ. ಆದರೆ ಇವುಗಳ ಸಂಖ್ಯೆ ಅಧಿಕವಾದಾಗ ಅನೇಕ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಮಕ್ಕಳಲ್ಲಿ ಅವುಗಳ ಸಂಖ್ಯೆ ಅಧಿಕವಾದಾಗ ಆ ವ್ಯಕ್ತಿಯ ಆಹಾರ, ಪೌಷ್ಟಿಕಾಂಶಗಳ ಮೇಲೆ ಅವಲಂಬಿತವಾಗುತ್ತವೆ. ಈ ಕಾರಣದಿಂದಾಗಿ ಮಕ್ಕಳು ಪೌಷ್ಟಿಕಾಂಶಗಳ ಕೊರತೆಯಿಂದ ನರಳಬೇಕಾಗುತ್ತದೆ.

ಇದರ ಪರಿಣಾಮ ಮಕ್ಕಳಲ್ಲಿ ಹಸಿವೆಯಾಗುವುದಿಲ್ಲವಾದ್ದರಿಂದ, ಆಹಾರಸೇವನೆಯೂ ಕುಂಠಿತವಾಗಿ, ಜೀವಸತ್ವ – ಎ ಇನ್ನಿತರ ಅವಶ್ಯ ಜೀವಸತ್ವಗಳ ಕೊರತೆಯುಂಟಾಗಿ ಮಕ್ಕಳ ಬೆಳವಣಿಗೆಗೆ ಕುಂಠಿತವಾಗುತ್ತದೆ. ಜಂತುಹುಳದ ಸಂಖ್ಯೆ ಸಣ್ಣಕರುಳಿನಲ್ಲಿ ವಿಪರೀತವಾದಾಗ ಅವು ಒಂದಕ್ಕೊಂದು ಗಂಟು ಹಾಕಿಕೊಂಡು ಕರುಳಿನ ನಾಳ ಮುಚ್ಚಿಹೋಗಬಹುದು.

ಆಗ ವಿಪರೀತ ಹೊಟ್ಟೆನೋವಿನಿಂದ ನರಳುವ ರೋಗಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಿ ಕರುಳನ್ನು ಸಮಸ್ಥಿತಿಗೆ ತರಬೇಕಾಗುತ್ತದೆ. ಈ ಹುಳಗಳು ಕೆಲವೊಮ್ಮೆ ‘ಅಪೆಂಡಿಕ್ಸ್’ನ ರಂಧ್ರ ಮುಚ್ಚಿ ಹೋಗುವಂತೆ ಮಾಡಿ ರೋಗ ‘ಅಪೆಂಡಿಸೈಟಿಸ್‌’ (Appendicites) ನಿಂದ ಬಲವಂತವಾಗಿ ಶಸ್ತ್ರಚಿಕಿತ್ಸೆಯ ಮೊರೆಹೋಗಬೇಕಾಗುತ್ತದೆ. ಕೆಲವೊಮ್ಮೆ ಹೊಟ್ಟೆಯ ಅಲ್ಸರ್‌ ಅಥವಾ ಇನ್ನಾವುದೇ ಕಾರಣದಿಂದ ಕರುಳಿನ ಅಲ್ಸರ್‌ನಿಂದ ನರಳುವ ರೋಗಿಗಳಲ್ಲಿ ಈ ಜಂತುಗಳು ರಂಧ್ರ ಮಾಡಿ ಶಸ್ತ್ರಚಿಕಿತ್ಸೆ ಮಾಡಬೇಕಾದ ಪರಿಸ್ಥಿತಿ ತಂದೊಡ್ಡುತ್ತದೆ.

ವಿಪರೀತ ಪರಿಸ್ಥಿತಿಗಳಲ್ಲಿ ಈ ಜಂತುಹುಳಗಳು ಅನ್ನನಾಳದ ಮುಖಾಂತರ ಬಾಯಿ/ ಮೂಗಿನಲ್ಲೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಕೋಶಾವಸ್ಥೆಯಲ್ಲಿರುವ ಹುಳುಗಳು ಕರುಳಿನಿಂದ ರಕ್ತದ ಮುಖಾಂತರ ಗಂಟಲು, ಶ್ವಾಸನಾಳಗಳಲ್ಲಿ ಹಾದು ಕರುಳು ಪ್ರವೇಶಿಸುವಾಗ ಅಲ್ಲಿ ಹಾನಿಯುಂಟು ಮಾಡಿ ಕೆಮ್ಮಿಗೂ ಕಾರಣವಾಗಬಹುದು. ಇಂತಹ ಪರಿಸ್ಥಿತಿಗಳಲ್ಲಿ ಮಕ್ಕಳು/ ಹಿರಿಯರು ಕಾರಣವಿಲ್ಲದೆ ಒಣ ಕೆಮ್ಮು, ಎದೆಯುರಿಯುವಿಕೆಯಿಂದ ನರಳುತ್ತಾರೆ. ಇದು ಹುಳುವಿನ ಉಪಟಳದಿಂದ ಎಂದು ತಿಳಿಯುವುದೇ ಇಲ್ಲ.

ಇನ್ನು ಕರುಳಿನಲ್ಲಿ ಕೊಕ್ಕೆಹುಳ ಸೇರಿಕೊಳ್ಳುವುದರಿಂದ ಅವು ಕರುಳಿನಲ್ಲಿ ತಮ್ಮ ಬಾಯಿಯಲ್ಲಿರುವ ಕೊಕ್ಕೆಯಂತಹ ಅಂಗದಿಂದ ಸಣ್ಣ ರಂಧ್ರ ಮಾಡಿ ಅಲ್ಲಿನ ಧಮನಿಗಳಿಂದ ರಕ್ತ ಹೀರಿಕೊಳ್ಳುತ್ತವೆ. ಒಂದು ಹುಳ ಒಂದು ದಿನಕ್ಕೆ ಸರಿ ಸುಮಾರು 0.2 ಎಂ.ಎಲ್‌.ನಷ್ಟು ರಕ್ತ ಹೀರುತ್ತದೆ. ಕ್ರಮೇಣ ಹುಳಗಳ ಪ್ರಮಾಣ ಅಧಿಕವಾದಾಗ, ಹೆಚ್ಚು ಹೆಚ್ಚು ರಕ್ತ ನಷ್ಟವಾಗುವುದರಿಂದ ಕ್ರಮೇಣ ಆ ವ್ಯಕ್ತಿ ರಕ್ತಹೀನತೆ ಮತ್ತು ಅದಕ್ಕೆ ಸಂಬಂಧಪಟ್ಟ ಚಿಹ್ನೆಗಳಾದ ಬಿಳಿಚುವಿಕೆ, ಸುಸ್ತು, ತಲೆಸುತ್ತುವಿಕೆ, ಆಯಾಸ, ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು, ಉಸಿರಾಟದ ತೊಂದರೆ, ಮಂಪರು, ಮಕ್ಕಳಲ್ಲಿ ತಗ್ಗಿದ ಜ್ಞಾಪಕಶಕ್ತಿಯಿಂದ ನರಳುತ್ತಾರೆ. ಇದರ ಪರಿಣಾಮವಾಗಿ ಅಂಥ ಮಕ್ಕಳ ಶಾಲಾ ಕಲಿಕಾ ಸಾಮರ್ಥ್ಯ ತಗ್ಗುತ್ತದೆ.

ಟ್ರಿಚೂರಿಯಾದ ಸಮಸ್ಯೆಯಿಂದ ನರಳುವವರು ಈ ಎಲ್ಲ ಸಮಸ್ಯೆಗಳಿಂದ ನರಳುತ್ತಾರೆ; ಕೆಲವೊಮ್ಮೆ ರಕ್ತ ಬೇಧಿಯೂ ಆಗಬಹುದು. ಶಾಲೆಗೆ ಹೋಗುವ ಮಕ್ಕಳು ಮಣ್ಣಿನಲ್ಲಿ ಆಡುವುದು, ಕೈ ತೊಳೆಯದೆ ತಿನ್ನುವುದು, ಬಾಯಿಗೆ ಕೈ ಹಾಕುವುದನ್ನು ತಡೆಯುವುದು ಅಸಾಧ್ಯ. ಆದ್ದರಿಂದ ಮಕ್ಕಳಲ್ಲಿ ಈ ಪರಾವಲಂಬಿ ಜಂತುಗಳ ಹಾವಳಿಯು ಅಧಿಕ. ಆದ್ದರಿಂದ ಮಕ್ಕಳಿಗೆ ಶುಚಿತ್ವದ ಮಹತ್ವ ತಿಳಿದು ಅದನ್ನು ಅನುಸರಿಸುವುದನ್ನು ಪಾಲಿಸುವ ತನಕ ಆಗಾಗ ‘ಜಂತು ನಿವಾರಕ’ ಮಾತ್ರೆಗಳನ್ನು ಕೊಡುವುದು ಅವಶ್ಯ.

ಶಾಲೆಗೆ ಹೋಗುವ ಮಗು ತಿನ್ನಲು ಹಿಂಜರಿಯುವುದು ಹಸಿವಾಗದಿರುವುದು, ಬೆಳವಣಿಗೆ ಕುಂಠಿತವಾಗಿ ಆಗಾಗ್ಗೆ ಹೊಟ್ಟೆ ನೋವಿನಿಂದ ನರಳುವುದು, ಸದಾ ಸುಸ್ತು ಎನ್ನುತ್ತಿದ್ದು ಯಾವುದರಲ್ಲೂ ಆಸಕ್ತಿ ತೋರದಿದ್ದರೆ ವೈದ್ಯರನ್ನೊಮ್ಮೆ ಸಂಪರ್ಕಿಸಿ ‘ಡಿ ವರ್ಮಿಂಗ್‌’ ಮಾಡುವುದು ಉತ್ತಮ. ಇದನ್ನು ಆಗಾಗ್ಗೆ ಮಾಡುತ್ತಿದ್ದರೆ ಒಳಿತು ಮತ್ತು ಕುುಟುಂಬದಲ್ಲಿ ಒಬ್ಬರಿಗಿದ್ದರೆ ಶುಚಿತ್ವ ಕಾಪಾಡದಿದ್ದಾಗ ಎಲ್ಲರಿಗೂ ಹರಡುವುದರಿಂದ ಆಗಿಂದೊಮ್ಮೆ ಇಡೀ ಕುಟುಂಬ ಸದಸ್ಯರೆಲ್ಲರೂ ಜಂತುನಿವಾರಕ ಮಾತ್ರೆ ತೆಗೆದುಕೊಳ್ಳುವುದು ಉತ್ತಮ.

ಮುಖ್ಯವಾಗಿ ಮಕ್ಕಳಿಗೆ ಶುಚಿತ್ವದ ಮಹತ್ವ ತಿಳಿಸಿ, ಮೂತ್ರ ಮಲವಿಸರ್ಜನೆಯ ನಂತರ ಕೈಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ತಿಳಿವಳಿಕೆ ಮೂಡಿಸಬೇಕು; ಆಹಾರವನ್ನು ತಿನ್ನುವ ಮುನ್ನ ಅವಶ್ಯವಾಗಿ ಕೈ ತೊಳೆಯುವುದರ ಬಗ್ಗೆ, ಬಯಲಿನಲ್ಲಿ ಆಡುವಾಗ ಪಾದರಕ್ಷೆ ಹಾಕುವುದರ ಬಗ್ಗೆ ಆಗಾಗ ಎಚ್ಚರಿಸುವುದು ಅತ್ಯವಶ್ಯ. ಮನೆಯಲ್ಲಿಯೂ ಹಣ್ಣು, ತರಕಾರಿ ತಿನ್ನುವ ಮುನ್ನ ಸರಿಯಾಗಿ ಸ್ವಚ್ಛಮಾಡಿ ಸೇವಿಸುವುದರಿಂದ ಅನೇಕ ತೊಂದರೆಗಳನ್ನು ಬದಿಗಿಡಬಹುದು.

Comments are closed.