ಮಂಗಳೂರು, ಅ.31: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಯಾರ ಮಾತನ್ನೂ ಕೇಳುವುದಿಲ್ಲ. ಟಿಪ್ಪು ಜಯಂತಿ, ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ವಿಷಯಗಳಲ್ಲಿ ಅವರ ನಿಲುವು ಸರ್ವಾಧಿಕಾರಿ ನೀತಿಗೆ ನಿದರ್ಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಬಿಜೆಪಿ ಜಿಲ್ಲಾ ಕಚೇರಿಗೆ ಆಗಮಿಸಿದ ಅವರು ಮಾದ್ಯಮದವರೊಂದಿಗೆ ಮಾತನಾಡಿದರು. ಸ್ಟೀಲ್ ಬ್ರಿಡ್ಜ್ ನಲ್ಲಿ 500 ಕೋಟಿ ರೂಪಾಯಿಯನ್ನು ಲೂಟಿ ಮಾಡಲು ಯೋಜನೆಯನ್ನು ಸರಕಾರ ರೂಪಿಸಿದೆ. ಕಾಂಗ್ರೆಸ್ ಸರಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅವರಿಗೆ ವಿಶ್ವಾಸವಿಲ್ಲ ಎಂದು ಹೇಳಿದರು.
ಟಿಪ್ಪು ಜಯಂತಿ ಆಚರಣೆ ಬಗ್ಗೆ ವ್ಯಾಪಕ ಅಸಮಾಧಾನ ಮತ್ತು ವಿರೋಧ ಇದ್ದರು ಸಿದ್ದರಾಮಯ್ಯರವರು ಮಾತ್ರ ಟಿಪ್ಪು ಜಯಂತಿ ಆಚರಣೆ ನಿಲ್ಲುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯದ ಜನತೆಯ ಕೂಗಿಗೆ ಬೆಲೆ ನೀಡುತ್ತಿಲ್ಲ. ಇಡೀ ರಾಜ್ಯದಲ್ಲಿ ಅಶಾಂತಿಯ ವಾತವರಣವಿದ್ದು ಇಂತಹ ಪರಿಸ್ಥಿತಿಯಲ್ಲಿ ಅದನ್ನು ಆಚರಿಸುವುದು ಸರಿಯಲ್ಲ. ಯಾವ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಬೇಡ ಎಂದು ಬಿಎಸ್‌ವೈ ಹೇಳಿದರು.
ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ಸಚಿವ ಸ್ಥಾನದಿಂದ ಕೈಬಿಟ್ಟ ಬೇಸರದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಆರ್.ವಿ. ದೇಶಪಾಂಡೆ, ಮಾಜಿ ಸಂಸದ ವಿಶ್ವನಾಥ್ ಮತ್ತು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಧಿಯಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಗಮ, ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ನಾಯಕರು ಹೊಡೆದಾಟ ನಡೆಸಿದ್ದಾರೆ. ಇದೆಲ್ಲವೂ ಸಿದ್ದರಾಮಯ್ಯರವರು ಸರ್ವಾಧಿಕಾರಿತನವನ್ನು ತೋರಿಸುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರ ಜೊತೆ ಬಿಜೆಪಿಗೆ ಸೇರುವ ಬಗ್ಗೆ ಮಾತುಕತೆ ನಡೆಸಿದ್ದು ಅವರು ನ.7 ರಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದೆಂದು ತಿಳಿಸಿದ್ದು, ಅವರು ಬಿಜೆಪಿ ಸೇರುವುದು ಬಹುಪಾಲು ನಿಶ್ಚಿತ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿರುವ ಶ್ರೀನಿವಾಸ ಪ್ರಸಾದ್ ಈ ಹಿಂದೆ ವಾಜಪೇಯಿ ಪ್ರಧಾನಿ ಆಗಿದ್ದಾಗ ಬಿಜೆಪಿ ಪರ ಕೆಲಸ ಮಾಡಿದ್ದರು. ಇದೀಗ ಅವರು ಮರಳಿ ಬಿಜೆಪಿಗೆ ಬರಲು ನಿರ್ಧರಿಸಿದ್ದಾರೆ. ಈ ಬಗ್ಗೆ ತಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ದಿಲ್ಲಿಯಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕ್ಯಾ| ಗಣೇಶ್ ಕಾರ್ಣಿಕ್, ಕಿಶೋರ್ ರೈ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.