ಕರ್ನಾಟಕ

ನಿಗಮಗಳಿಗೆ ಅಧ್ಯಕ್ಷರ ನೇಮಕ: ಕಾಂಗ್ರೆಸ್ ಶಾಸಕರಿಗೆ ದೀಪಾವಳಿ ಉಡುಗೊರೆ

Pinterest LinkedIn Tumblr

congress_logoಬೆಂಗಳೂರು, ಅ. ೨೮- ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಶಾಸಕರು ಮತ್ತು ಕಾರ್ಯಕರ್ತರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿರುವ ಬೆನ್ನಲ್ಲೆ ಅತೃಪ್ತ ಹೊಗೆಯಾಡಲು ಆರಂಭಿಸಿದೆ. ದೀಪಾವಳಿ ಹಬ್ಬದ ಉಡುಗೊರೆಯಾಗಿ ತಮಗೆ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಶಾಸಕರು ಮತ್ತು ಕಾರ್ಯಕರ್ತರಿಗೆ ಅಧಿಕಾರ ಸ್ಥಾನಮಾನ ಸಿಗದೆ ಇರುವ ಕಾರಣ ನಿರಾಶೆ ಮೂಡಿಸಿದೆ.

ನಿರಾಶೆಗೊಂಡಿರುವ ಶಾಸಕರು ಮತ್ತು ಕಾರ್ಯಕರ್ತರು ಪ್ರತ್ಯೇಕವಾಗಿ ಸಭೆ ಸೇರಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಲು ಮುಂದಾಗಿದ್ದಾರೆ.

72 ವಿವಿಧ ನಿಗಮ ಮತ್ತು ಮಂಡಳಿಗಳ ಪೈಕಿ ಪ್ರಮುಖ 20 ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಲಾಗಿದ್ದು, ಈ ಕುರಿತ ಆದೇಶ ಆಯಾ ಇಲಾಖೆಗಳಿಂದ ಇಂದು ಸಂಬಂಧಪಟ್ಟವರಿಗೆ ತಲುಪಲಿದೆ. ಅದೇ ರೀತಿ ಕಾರ್ಯಕರ್ತರ ನೇಮಕಾತಿಗೆ ಸಂಬಂಧಿಸಿದಂತಹ ಆದೇಶಗಳು ರವಾನಿಯಾಗುತ್ತಿವೆ.

ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಿಗೆ ಹಾಗೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ನಿರಾಶೆಗೊಂಡಿರುವ ಹೊಸಬರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಕರುಣಿಸಲಾಗಿದೆ.

ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪಟ್ಟ ಅಲಂಕರಿಸಲು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಹಲವು ಶಾಸಕರು ಮತ್ತು ಕಾರ್ಯಕರ್ತರಿಗೆ ನಿರಾಸೆಯಾಗಿರುವ ಕಾರಣ ಅತೃಪ್ತಿ ಮತ್ತು ಅಸಮಾಧಾನಗಳು ವ್ಯಕ್ತವಾಗುತ್ತಿವೆ.

20 ಶಾಸಕರಲ್ಲೂ ಪೂರ್ಣ ಪ್ರಮಾಣದಲ್ಲಿ ಸಮಾಧಾನ ಇಲ್ಲವಾಗಿದೆ. ಪ್ರಮುಖ ಹಾಗೂ ಪ್ರತಿಷ್ಟಿತ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಲು ಆಕಾಂಕ್ಷಿಗಳಾಗಿದ್ದ ಶಾಸಕರಿಗೆ ಅಂತಹ ಅಧಿಕಾರ ಸಿಗದೆ ಇರುವ ಕಾರಣ ಅವರನ್ನೂ ಅತೃಪ್ತಿ ಕಾಡುತ್ತಿದೆ.

ನಿಷ್ಠಾವಂತ ಕಾರ್ಯಕರ್ತರಾಗಿ ಹಲವು ದಶಕಗಳಿಂದ ಅಧಿಕಾರ ಸ್ಥಾನಮಾನಗಳಿಗಾಗಿ ಕಾಯುತ್ತಿದ್ದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ನೇಮಕಾತಿಯಲ್ಲೂ ಅವಕಾಶ ಸಿಗದೆ ವಂಚಿತರಾಗಿದ್ದಾರೆ. ಅವರಲ್ಲಿ ಈಗ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸಲು ಸಚಿವ ಸ್ಥಾನ ವಂಚಿತ ಶಾಸಕರು ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಯತ್ನ ಮಾಡಿದರು.

ಇತ್ತೀಚೆಗೆ ಇಬ್ಬರೂ ದೆಹಲಿಗೆ ತೆರಳಿ ಬಹು ನಿರೀಕ್ಷಿತ ನಿಗಮಮಂಡಳಿಗಳ ನೇಮಕಾತಿ ಪಟ್ಟಿಗೆ ಹೈಕಮಾಂಡ್‌ನಿಂದ ಒಪ್ಪಿಗೆಯನ್ನೂ ಪಡೆದಿದ್ದರು.

ದೀಪಾವಳಿ ಹಬ್ಬದ ಉಡುಗೊರೆಯಾಗಿ ಕೆಲವರಿಗೆ ಅಧಿಕಾರ ಸ್ಥಾನಮಾನ ದೊರೆತಿದ್ದರೆ ಮತ್ತೆ ಕೆಲವರಿಗೆ ಹಬ್ಬ ನಿರಾಶೆ ತಂದಿದೆ.

Comments are closed.