ಕರ್ನಾಟಕ

ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ

Pinterest LinkedIn Tumblr

diwali

ಮಂಗಳೂರು: ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ ‘ನಹಿ ಜ್ಞಾನೇನ ಸದೃಶಂ'(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ‘ಜ್ಞಾನ ವಿನಃ ಪಶು:'(ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ.

ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ. ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ.

ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥವನ್ನು ತೆಗೆದುಕೊಳ್ಳದೇ ಕೇವಲ ಸ್ಥೂಲ ರೂಪದಲ್ಲಿ ಆಚರಿಸುತ್ತಿರುವುದರಿಂದ ಅಲೌಕಿಕ ಸಂತೋಷದ ಅನುಭವವಾಗುತ್ತಿಲ್ಲ.

ಕಾರ್ತಿಕ ಅಮವಾಸ್ಯೆಗೆ ಭಾರತದ ಪ್ರತಿಯೊಂದು ಮನೆಯಲ್ಲಿ ದೀಪಗಳನ್ನು ಬೆಳಗಿಸಿ ಅಬಾಲ ವೃಧ್ದರೂ ಸಂತೋಷ ಪಡುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆ, ಗುಡಿಗಳನ್ನು ಶುಚಿ ಗೊಳಿಸಿ, ಬಣ್ಣಗಳಿಂದ ಶೃಂಗರಿಸುತ್ತಾರೆ. ದೀಪಾವಳಿ ಭಾರತೀಯರ ಒಂದು ದೊಡ್ಡ ಹಬ್ಬ. ‘ಅವಳಿ’ ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು.

ನೀರು ತುಂಬುವ ಹಬ್ಬದಿಂದ ಆರಂಭವಾಗಿ ನರಕಚತುರ್ದಶಿ, ಧನತೇರಸ, ಬಲಿಪಾಡ್ಯಮಿ, ಭಾವನಬಿದಿಗೆ, ಅಕ್ಕನ ತದಿಗೆ, ಪಂಚಮಿವರೆಗೆ ಪ್ರತಿದಿನವೂ ಹಬ್ಬ. ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡುತ್ತಾರೆ.

ಧನ ದೇವತೆ ‘ಲಕ್ಷ್ಮೀ’ ಯನ್ನು ಇದೇ ಸಮಯದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ. ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ದೀಪದಾನವು ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನಲೆ ಇದ್ದು, ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳುಬೇಕು ಎನ್ನುವುದನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹೇಳಲಾಗುತ್ತದೆ.

ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ. ದೀಪಾವಳಿಯ ‘ಬಲಿ’ ರಾಜಾ ಮತ್ತು ನರಕಾಸುರನ ಎರಡು ಕಥೆಗಳು ಲಾಕ್ಷಣಿಕ ಭಾಷೆಯ ರೂಪದಲ್ಲಿ ವರ್ಣನೆ ಮಾಡಲಾಗಿದೆ. ಈಶ್ವರೀಯ ಜ್ಞಾನದ ದೃಷ್ಟಿಯಲ್ಲಿ ನೋಡಿದಾಗ ‘ನರಕಾಸುರ’ ಮಾಯೆ ಅಥವಾ ಮನೋವಿಕಾರಗಳ ರೂಪವಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಹಾಗೂ ಅಹಂಕಾರಗಳು ಆಸುರಿ ಲಕ್ಷಣಗಳು ಮತ್ತು ನರಕದ ದ್ವಾರ ಆಗಿವೆ. ಈ ವಿಕಾರಗಳನ್ನು ಜಯಿಸುವುದು ಎಂದರೆ ‘ಬಲಿ’ ಕೊಡುವುದು ಎಂದು ಹೇಳಲಾಗುತ್ತದೆ.

ವಿಶ್ವದ ಇತಿಹಾಸದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಈ ಕಲಿಯುಗದ ಅಂತಿಮ ಸಮಯವು ಪಂಚವಿಕಾರ ಮತ್ತು ಅಸುರಿಗುಣಗಳ ಸಾಮ್ರಾಜ್ಯದ ಸಮಯವಾಗಿದೆ. ಪ್ರತಿಯೊಬ್ಬ ನರ-ನಾರಿಯರ ಮನಸ್ಸಿನ ಮೇಲೆ ವಿಕಾರಗಳ ರಾಜ್ಯ ಇದೆ. ಇದಕ್ಕೆ ‘ನರಕಾಸುರ’ ಅಥವಾ ‘ರಾಜಾಬಲಿಯ’ ಅಧಿಪತ್ಯ ಎಂದು ಹೇಳಲಾಗುತ್ತದೆ. ಭಾರತವು ಸತ್ಯಯುಗದಲ್ಲಿ ಸ್ವರ್ಗವಾಗಿತ್ತು. ಅಲ್ಲಿನ ಮನುಷ್ಯರೆಲ್ಲರು ದೇವ-ದೇವತೆಗಳಾಗಿದ್ದರು. ಅವರೇ ಜನ್ಮ ಮರಣದ ಚಕ್ರದಲ್ಲಿ ಬರುತ್ತಾ ಈಗ ನರಕದಲ್ಲಿ ‘ನರಕಾಸುರ’ ಅಥವಾ ‘ಬಲಿ’ಯ ಅಧೀನರಾಗಿದ್ದಾರೆ

ಆತ್ಮಜ್ಞಾನ ಹಾಗೂ ನಿರಾಕಾರ ಶಿವನ ಧ್ಯಾನದಿಂದ ನಾವು ಪುನಃ ಬಂಧನ ಮುಕ್ತರಾಗಲು ಸಾಧ್ಯವಿದೆ. ಆತ್ಮಜ್ಞಾನ ಎಂದರೆ ಆತ್ಮದೀಪವನ್ನು ಬೆಳಗಿಸುವುದು. `ನಾನು ಒಂದು ಜ್ಯೋತಿ, ಜಾತಿ ಇಲ್ಲದ ಅತಿಸೂಕ್ಷ್ಮ ಆತ್ಮಜ್ಯೋತಿ. ಶರೀರದ ಹಣೆಯ ಮಧ್ಯದಲ್ಲಿ ಹೊಳೆಯುವ ಚ್ಯೆತನ್ಯ ಜ್ಯೋತಿ, ದೇಹ ಎಂಬ ರಥದ ಸಾರಥಿ ನಾನು ಆತ್ಮ. ದೇಹದ ಮೂಲಕ ಈ ಸೃಷ್ಟಿ ನಾಟಕದಲ್ಲಿ ಪಾತ್ರ ಅಭಿನಯಿಸುವ ಪಾತ್ರಧಾರಿ ನಾನು. ಈ ರೀತಿ ನಿತ್ಯಚಿಂತನೆ ಮಾಡಬೇಕು. ಇದನ್ನೇ ಆತ್ಮಾನುಭೂತಿ ಎಂದು ಕರೆಯಲಾಗುತ್ತದೆ.

 

ಎಲ್ಲ ಕನ್ನಡಿಗ ವರ್ಲ್ಡ್ ಓದುಗರಿಗೆ ದೀಪಾವಳಿ ಹಾಗೂ ನರಕ ಚತುರ್ದಶಿಯ ಆರ್ಥಿಕ ಶುಭಾಶಯಗಳು

Comments are closed.