ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.
ಜನವರಿಯಿಂದ ಉಪಹಾರ ಕೇಂದ್ರಗಳು ಕಾರ್ಯಾರಂಭಿಸಲಿದ್ದು, 4 ರೂ.ಗೆ ಇಡ್ಲಿ, 8 ರೂ.ಗೆ ಚಪಾತಿ, 8 ರೂ.ಗೆ ಅನ್ನ ಸಾಂಬಾರ್, ಮಜ್ಜಿಗೆ ದೊರೆಯಲಿದೆ. ಸ್ವಯಂ ಸೇವಾ ಸಂಸ್ಥೆ, ಸ್ತ್ರೀ ಶಕ್ತಿ ಸಂಘಗಳಿಗೆ ಆದ್ಯತೆ ನೀಡಲಾಗುತ್ತದೆ. ಹಾಪ್ ಕಾಮ್ಸ್ ಮತ್ತು ಕೆಎಂ ಎಫ್ ಮಳಿಗೆ , ರೋಗಿಗಳ ಶಸ್ತ್ರಚಿಕಿತ್ಸೆಗೆ ಅಗತ್ಯವಾದಾಗ ಕ್ಷೌರ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಡಯಾಲಿಸಿಸ್ ಕೇಂದ್ರ
ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಯಾಗಲಿದೆ. ಈಗಾಗಲೇ 20 ಜಿಲ್ಲಾ ಹಾಗೂ 148 ತಾಲೂಕು ಆಸ್ಪತ್ರೆಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಪಿಪಿಪಿ ಮಾದರಿಯಲ್ಲಿ ಡಯಾಲಿಸಿಸ್ ಘಟಕಗಳ ಟೆಂಡರ್ ಕರೆಯಲಾಗಿದೆ.
ತೀವ್ರ ನಿಘಾ ಘಟಕ
146 ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಘಾ ಘಟಕಗಳ ಸ್ಥಾಪನೆ ಮಾಡಲು ನಿಧ೯ರಿಸಲಾಗಿದೆ. ಒಂದು ತೀವ್ರ ನಿಘಾ ಘಟಕದ ಸ್ಥಾಪನೆಗೆ 27 ಲಕ್ಷ ವೆಚ್ಚವಾಗಲಿದ್ದು, ಇದಕ್ಕಾಗಿ ಆಯಾ ಭಾಗದ ಶಾಸಕರ ನಿಧಿಯಿಂದ 10 ಲಕ್ಷ ಹಾಗೂ ಸಂಸದರ ನಿಧಿಯಿಂದ 5 ಲಕ್ಷ ದೇಣಿಗೆ ಪಡೆಯಲಾಗುತ್ತದೆ. ಈ ವಿಚಾರವಾಗಿ ಈಗಾಗಲೇ ಶಾಸಕರು, ಸಂಸದರಿಗೆ ಪತ್ರ ಬರೆಯಲಾಗಿದೆ. 2018ರ ಫೆಬ್ರವರಿ 1ರೊಳಗೆ ತುತು೯ ಚಿಕಿತ್ಸಾ ಘಟಕಗಳ ಸ್ಥಾಪನೆ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ವೈದ್ಯರಿಗೆ ವಸತಿ ಭತ್ಯೆ
ಸಕಾ೯ರಿ ಆರೋಗ್ಯ ಕೇಂದ್ರಗಳ ವೈದ್ಯರಿಗೆ ವಸತಿ ಗೃಹಗಳ ಸೌಲಭ್ಯ ಅಥವಾ ವಸತಿ ಭತ್ಯೆ ನೀಡಲಾಗುವುದು. ಗ್ರಾಮೀಣ ಪ್ರದೇಶದ ವೈದ್ಯರಿಗೆ ₹1500 ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಿಗೆ ₹2,000 ವಸತಿ ಭತ್ಯೆ ಸಿಗಲಿದೆ.
ಜೆನರಿಕ್ ಔಷಧಿ ಕೇಂದ್ರ
ಎಲ್ಲ ತಾಲೂಕು ಜಿಲ್ಲಾ ಆಸ್ಪತ್ರೆಗಳಲ್ಲಿ ಜೆನರಿಕ್ ಔಷಧಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಈಗಾಗಲೇ ಪ್ರಧಾನ ಮಂತ್ರಿ ಜನೌಷಧಿ ಯೋಜನೆ ಸಹಭಾಗಿತ್ವದಲ್ಲಿ ಮಳಿಗೆಗಳಿದ್ದು, ಇನ್ನೂ 200 ಮಳಿಗೆಗಳನ್ನು ಪ್ರಾರಂಭಿಸಲಾಗುವುದು.
₹10 ಕೋಟಿ ಮೌಲ್ಯದ ಅವಧಿ ಮೀರಿದ ಮೆಡಿಸಿನ್ ರಾಜ್ಯದ ಹಲವೆಡೆ ಇದೆ. ಅವಧಿ ಮೀರಿದ ಔಷಧಿ ಪೂರೈಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.