ರಾಷ್ಟ್ರೀಯ

‘ಚೀನಾ ಸರಕು ಬಹಿಷ್ಕಾರ’ ಉಭಯ ರಾಷ್ಟ್ರಗಳ ಸಂಬಂಧವನ್ನು ಬಾಧಿಸಲಿದೆ

Pinterest LinkedIn Tumblr

india-chinaನವದೆಹಲಿ: ಭಾರತದಲ್ಲಿ ವ್ಯಾಪಕವಾಗಿ ಕರೆ ನೀಡಲಾಗಿರುವ ಚೀನಾ ಸರಕು ಬಹಿಷ್ಕಾರದ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ, ಈ ಬಹಿಷ್ಕಾರ ಪ್ರಕ್ರಿಯೆ ಭಾರತದ ಜತೆಗಿನ ಸಂಬಂಧ ಮತ್ತು ಹೂಡಿಕೆಯವನ್ನು ಬಾಧಿಸಲಿದೆ ಎಂದಿದೆ.

ಈ ರೀತಿಯ ಬಹಿಷ್ಕಾರವು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತು ಭಾರತದಲ್ಲಿ ಚೀನಾದ ಹೂಡಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ, ಈ ರೀತಿ ಆಗಬಾರದು ಎಂದು ಚೀನಾ ಮತ್ತು ಭಾರತದ ಪ್ರಜೆಗಳು ಬಯಸುತ್ತಾರೆ ಎಂದು ನವದೆಹಲಿಯಲ್ಲಿರುವ ಚೀನಾ ರಾಯಭಾರದ ವಕ್ತಾರ ಕ್ಸಿ ಲಿಯಾನ್ ಹೇಳಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಭಾರತವು ಚೀನಾದ ವ್ಯಾಪಾರದಲ್ಲಿ ಬಹುದೊಡ್ಡ ಪಾಲು ವಹಿಸಿದೆ. ಆದರೆ ಸದಾ ಪಾಕಿಸ್ತಾನದ ಬೆನ್ನಿಗೆ ನಿಲ್ಲುವ ಚೀನಾದ ಉತ್ಪನ್ನಗಳನ್ನು ಖರೀದಿಸಬೇಡಿ ಎಂಬ ಸಂದೇಶಗಳು ಸಾಮಾಜಿಕ ತಾಣದಲ್ಲಿ ಹರಿದಾಡಿದ್ದು, ಈ ಅಭಿಯಾನದಿಂದ ಚೀನಾಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚೀನಾದಲ್ಲಿ ತಯಾರಿಸಿದ ಪಟಾಕಿಗಳಿಗೆ ಬಹಿಷ್ಕಾರ ಹಾಕುವಂತೆ ಕೆಲವು ಸಂಘಟನೆಗಳು ದೇಶದ ಜನರಿಗೆ ಆಹ್ವಾನ ನೀಡಿದ್ದವು. ಏತನ್ಮಧ್ಯೆ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಭಾರತ ಸರ್ಕಾರ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ಮೇಡ್ ಇನ್ ಚೀನಾ’ ಉತ್ಪನ್ನಗಳಿಗೆ ಬಹಿಷ್ಕಾರ ಹೇರಲಾಗಿದೆ, ಆದರೆ ಈ ಬಹಿಷ್ಕಾರ ದೀಪಾವಳಿಯಲ್ಲಿ ಬಳಸುವ ವಸ್ತುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇನ್ನಿತರ ಉತ್ಪನ್ನಗಳಿಗೂ ಬಹಿಷ್ಕಾರ ಹಾಕಲಾಗಿದೆ.

ಮುಂಬರುವ ದಿನಗಳಲ್ಲಿ, ಈ ರೀತಿಯ ಬಹಿಷ್ಕಾರಗಳು ಚೀನಾದ ಉತ್ಪನ್ನಗಳ ಮಾರಾಟದ ಮೇಲೆ ಮಾತ್ರವಲ್ಲ ದೇಶೀಯ ಗ್ರಾಹಕರ ಮೇಲೆಯೂ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಕ್ಸಿ ಹೇಳಿದ್ದಾರೆ.

Comments are closed.