ಬೆಂಗಳೂರು: ಬಿಬಿಎಂಪಿಯಲ್ಲಿ ಇಲಿ ಹಿಡಿಯೋದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಹಳೇ ವಿಷಯ. ಈಗ ಇದರ ಸರದಿ ಶಕ್ತಿಸೌಧದ್ದು. ವಿಧಾನಸೌಧದಲ್ಲಿ ಇಲಿ ಹಿಡಿಯೋಕೆ ಮೂರು ವರ್ಷದಿಂದ ಲಕ್ಷ ಲಕ್ಷ ಹಣವನ್ನ ಖರ್ಚು ಮಾಡಿದ್ದಾರೆ.
ಇಲಿ ಹಿಡಿಯೋಕೆ ಇಷ್ಟೆಲ್ಲಾ ಖರ್ಚಾಗುತ್ತಾ ಅಂತೀರಾ? ಹೌದು ಸ್ವಾಮಿ. ವಿಧಾನಸೌಧ ಹಾಗೂ ವಿಕಾಸ ಸೌಧದಲ್ಲಿ ಇಲಿ ಹಿಡಿಯೋಕೆ ಸರ್ಕಾರ ಮೂರು ವರ್ಷದಲ್ಲಿ ಸುಮಾರು 14 ಲಕ್ಷ ರೂ. ಹಣ ಖರ್ಚು ಮಾಡಿದೆ. 2013-14 ರಲ್ಲಿ 3 ಲಕ್ಷದ 49 ಸಾವಿರ ರೂ., 2014-15 ರಲ್ಲಿ ಸುಮಾರು 4 ಲಕ್ಷದ 96 ಸಾವಿರ ರೂ., ಹಾಗೂ 2015-16ನೇ ಸಾಲಿಗೆ ಮತ್ತೆ 4 ಲಕ್ಷದ 96 ಸಾವಿರ ರೂ. ಖರ್ಚು ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲೀ ಪಾಟೀಲ್ ಎಂಬವರು ಆರ್ಟಿಐ ಅಡಿ ಪಡೆದ ಮಾಹಿತಿಯಲ್ಲಿ ಇಲಿ ಹಿಡಿದ ರಹಸ್ಯ ಬಯಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ವಿಧಾನಸೌಧದಲ್ಲಿ ಇಲಿ ಸತ್ತು ಹೋಗಿತ್ತು ಅಂತ ಸಭಾಂಗಣದಲ್ಲಿದ್ದ ಮೀಟಿಂಗನ್ನ ರದ್ದು ಮಾಡಲಾಗಿತ್ತು. ವಿಧಾನಸೌಧದ ಫೈಲ್ಗಳನ್ನ ಇಲಿ ತಿನ್ನುತ್ತಿದೆ ಅನ್ನೋದು ಸುದ್ದಿಯಾಗಿತ್ತು. ಹೀಗಾಗಿ ಈ ಬಗ್ಗೆ ಮಾಹಿತಿ ಕೇಳಲಾಯ್ತು. ಇಷ್ಟೆಲ್ಲಾ ಖರ್ಚು ಮಾಡಿ ಎಷ್ಟು ಇಲಿ ಹಿಡಿದಿದ್ದೀರಾ ಅಂದ್ರೆ, ಅದರ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ. ಗಂಗಾ ಫೆಸಿಲಿಟೀಸ್ ಅಂಡ್ ಮ್ಯಾನೇಜ್ಮೆಂಟ್ ಸರ್ವೀಸಸ್ ಅನ್ನೋ ಒಂದೇ ಕಂಪನಿಗೆ ಮೂರು ವರ್ಷಗಳಿಂದ ಟೆಂಡರ್ ನೀಡ್ತಿರೋದು ಕೂಡ ಅನುಮಾನಕ್ಕೆ ಕಾರಣವಾಗಿದೆ.