ಕರ್ನಾಟಕ

ಗಲ್ಲು ಶಿಕ್ಷೆ: ಹೈಕೋರ್ಟ್ ಗೆ ಉಮೇಶ್ ರೆಡ್ಡಿಯಿಂದ ರಿಟ್ ಅರ್ಜಿ

Pinterest LinkedIn Tumblr

umeshಬೆಂಗಳೂರು: ವಿಕೃತಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳೋಕೆ ಕೊನೆಯ ಪ್ರಯತ್ನವಾಗಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ.

15 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದೇನೆ. ಕ್ಷಮಾದಾನ ಅರ್ಜಿ ವಿಲೇವಾರಿ ಕೂಡ ವಿಳಂಬವಾಗಿದೆ. 1998 ಮಾರ್ಚ್ ತಿಂಗಳಿನಿಂದ ಜೈಲಿನಲ್ಲಿದ್ದೇನೆ. ಏಕಾಂತ ಸೆರೆವಾಸದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದೇನೆ ಅಂತ ಅರ್ಜಿಯಲ್ಲಿ ಹೇಳಿದ್ದಾನೆ.

ಕ್ಷಮದಾನ ಅರ್ಜಿ ವಿಲೇವಾರಿಗೆ ರಾಷ್ಟ್ರಪತಿಗಳು 2 ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ರಾಷ್ಟ್ರಪತಿ ಕ್ಷಮಾದಾನ ಅರ್ಜಿ ವಿಳಂಬದಿಂದ ಅನ್ಯಾಯವಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕು. ಮರಣದಂಡನೆಯಿಂದ ಜೀವಾವಧಿಗೆ ಶಿಕ್ಷೆ ಇಳಿಸಬೇಕು. ರಾಷ್ಟ್ರಪತಿಗಳು, ರಾಜ್ಯಪಾಲರ ಆದೇಶ ರದ್ದು ಮಾಡಬೇಕು ಎಂದು ಉಮೇಶ್ ರೆಡ್ಡಿ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.

ಮಂಗಳವಾರದಂದು ಉಮೇಶ್ ರೆಡ್ಡಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಉಮೇಶ್ ರೆಡ್ಡಿ ಪರವಾಗಿ ಮುಂಬೈ ವಕೀಲ ವೈಎಂ ಚೌಧರಿ ವಕಾಲತ್ತು ವಹಿಸಲಿದ್ದಾರೆ. ಸದ್ಯಕ್ಕೆ ಉಮೇಶ್ ರೆಡ್ಡಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.

ಉಮೇಶ್ ರೆಡ್ಡಿ ಯಾರು?: 1969ರಲ್ಲಿ ಚಿತ್ರದುರ್ಗ ತಾಲೂಕು ಬಸಪ್ಪ ಮಾಳಿಗೆ ಗ್ರಾಮದಲ್ಲಿ ಜನಿಸಿದ್ದ ಉಮೇಶ್ ರೆಡ್ಡಿ ಸಿಆರ್‍ಪಿಎಫ್‍ಗೆ ಸೇರಿ ಜಮ್ಮು ಕಾಶ್ಮೀರದಲ್ಲಿ ಸೇವೆ ಆರಂಭಿಸಿದ್ದ. ಆದರೆ ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಮರಳಿ ಊರಿಗೆ ಬಂದಿದ್ದ. ನೆರೆ ಮನೆಯ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಈತ ಅದನ್ನು ಧರಿಸಿ ವಿಕೃತ ಸುಖವನ್ನು ಅನುಭವಿಸುತ್ತಿದ್ದ. ವಿಳಾಸ ಮತ್ತು ನೀರು ಕೇಳುವ ನೆಪದಲ್ಲಿ ಒಬ್ಬಂಟಿ ಗೃಹಿಣೆಯರ ಮನೆಗೆ ನುಗ್ಗಿ ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ. ಒಟ್ಟು 18 ಮಹಿಳೆಯರನ್ನು ಕೊಲೆ ಮಾಡಿದ್ದ. 1997ರಲ್ಲಿ ಮೊದಲ ಬಾರಿಗೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಈತ ನಂತರ 1998, 1999, 2002ರಲ್ಲಿ ಪರಾರಿಯಾಗಿದ್ದ. 2002 ಮೇ 17ರಂದು ಅಂತಿಮವಾಗಿ ಬೆಂಗಳೂರಿನ ಯಶವಂತಪುರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.

ಉಮೇಶ್ ರೆಡ್ಡಿಗೆ ನೇಣು ಕುಣಿಕೆ ಸಿದ್ಧವಾಗಿದೆ. ಹಿಂಡಲಗಾ ಜೈಲಿನಲ್ಲಿ ಶುಕ್ರವಾರದಂದು ಮರಣ ದಂಡನೆ ವಿಧಿಸುವ ಪ್ರಕ್ರಿಯೆಗೆ ತಾಲೀಮು ನಡೆಸಲಾಯಿತು.

Comments are closed.