ಕರ್ನಾಟಕ

ಏಕರೂಪ ನಾಗರಿಕ ಸಂಹಿತೆ ಹೇಳಿಕೆಯ ಹಿಂದೆ ಒಂದು ದೇಶ ಒಂದು ಕಾನೂನು: ಯಡಿಯೂರಪ್ಪ

Pinterest LinkedIn Tumblr

yaddiಬೆಂಗಳೂರು, ಅ. ೧೫- ಏಕರೂಪ ನಾಗರಿಕ ಸಂಹಿತೆ ಹೇಳಿಕೆಯ ಹಿಂದೆ ಒಂದು ದೇಶ ಒಂದು ಕಾನೂನು ಎಂಬ ಉದ್ದೇಶವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಜನರ ಅಭಿಪ್ರಾಯ ಪ‌ಡೆದ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಕ್ಷದ ಕಚೇರಿಯಲ್ಲಿಂದು ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಇನ್ನು ಚರ್ಚೆಯ ಹಂತದಲ್ಲಿದೆ. ಎಲ್ಲವನ್ನು ನೋಡಿಯೇ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ರಾಜ್ಯದ ದಲಿತ ನಾಯಕರುಗಳು ಬಿಜೆಪಿ ಬಗ್ಗೆ ಒಲವು ತೋರುತ್ತಿದ್ದಾರೆ. ಹಲವು ದಲಿತ ನಾಯಕರು ಪಕ್ಷ ಸೇರಿದ್ದಾರೆ. ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆಯ್ಕೆ ಅವರ ಇಚ್ಛೆಗೆ ಬಿಟ್ಟದ್ದು ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಹರ್ಷಿ ವಾಲ್ಮೀಕಿ
ಇದಕ್ಕೂ ಮೊದಲು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಡರಾಗಿದ್ದ ವಾಲ್ಮೀಕಿ ಅವರು ಸಾಧನೆಯಿಂದ ಮಹರ್ಷಿಯಾದರು. ರಾಮಾಯಣ ಮಹಾಕಾವ್ಯ ಕೊಟ್ಟರು. ಇಂದು ಮಾಜಿ ರಾಷ್ಟ್ರಪತಿ ಕಲಾಂ ಅವರ ಜನ್ಮದಿನವೂ ಕೂಡ. ಈ ಎಲ್ಲ ನಾಯಕರುಗಳು ಜನಮಾನಸದಲ್ಲಿ ಚಿರಸ್ಥಾಯುವಾಗಿದ್ದಾರೆ ಎಂದರು.
ವಾಲ್ಮೀಕಿ ರಾಮಾಯಣ ಕೊಟ್ಟರೆ ಅಂಬೆಡ್ಕರ್ ಸಂವಿಧಾನ ನೀಡಿದ್ದಾರೆ. ಇವರಿಬ್ಬರು ನಮ್ಮ ಕಣ್ಣುಗಳಿದ್ದಂತೆ ಎಂದು ಯಡಿಯರೂಪ್ಪ ಹೇಳಿದರು. ಇಂದು ಅನಿವಾಸಿ ಕನ್ನಡಿಗರ ಜತೆ ವಿಡಿಯೋ ಸಂವಾದ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ತಂತ್ರಜ್ಞಾನ ಬಳಸಿಕೊಂಡು ಪಕ್ಷ ಬಲಪಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ, ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷ ರಾಜುಗೌಡ, ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಜೀಂ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

Comments are closed.