ಕರ್ನಾಟಕ

ಸ್ವಚ್ಛತಾ ಆಂದೋಲನ: ಪೊರಕೆ ಹಿಡಿದ ಮೇಯರ್

Pinterest LinkedIn Tumblr

meyarಬೆಂಗಳೂರು, ಅ. ೧೫- ಸ್ವಚ್ಛತಾ ಆಂದೋಲನದ ಅಂಗವಾಗಿ ಕೆ.ಆರ್. ಮಾರುಕಟ್ಟೆಯಲ್ಲಿ ಮೇಯರ್ ಪದ್ಮಾವತಿ ಅವರು ಖುದ್ದುನಿಂತು ಟನ್‌ಗಟ್ಟಲೆ ಕಸವನ್ನು ಹೊರಸಾಗಿಸಿದರು.
ಇಂದು ಬೆಳಿಗ್ಗೆ ಕೂಡ ಕೆ.ಆರ್. ಮಾರುಕಟ್ಟೆಗೆ 200 ಮಂದಿಗೂ ಹೆಚ್ಚು ಪೌರಕಾರ್ಮಿಕರೊಂದಿಗೆ ತೆರಳಿದ ಮೇಯರ್ ಅವರು ತಾವೇ ಕಸ ಪೊರಕೆ ಹಿಡಿದು ಸ್ವಚ್ಛಗೊಳಿಸಿದರು.
ಉಪಮೇಯರ್ ಆನಂದ್, ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ, ಹಿರಿಯ ಅಧಿಕಾರಿಗಳು ಸಾಥ್ ನೀಡಿ ಮಾರುಕಟ್ಟೆಯ ಬಹುತೇಕ ಭಾಗಗಳಲ್ಲಿದ್ದ ಕಸವನ್ನು ತೆಗೆದು ಲಾರಿಗಳಲ್ಲಿ ತುಂಬಿ ಹೊರಸಾಗಿಸಿದರು.
ಮೇಯರ್ ಅವರು ಪೌರ ಕಾರ್ಮಿಕರನ್ನು ಹುರಿದುಂಬಿಸಿ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಹೂವು, ತರಕಾರಿ, ಮತ್ತಿತರ ತ್ಯಾಜ್ಯಗಳನ್ನು ತೆಗೆಸಿದರು.
ಇಡೀ ಮಾರುಕಟ್ಟೆಯಲ್ಲಿ ಮಧ್ಯಾಹ್ನದ ವೇಳೆಗೆ ಸ್ವಲ್ಪ ಮಟ್ಟಿಗಾದರೂ ಕಸದ ರಾಶಿ ಕಡಿಮೆಯಾಗಿದ್ದು, ಪ್ರತಿನಿತ್ಯ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಮೇಯರ್ ಅವರು ತಿಳಿಸಿದರು.
ನಿನ್ನೆ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಕಸದ ರಾಶಿ ಕಂಡು ಆಕ್ರೋಶಗೊಂಡಿದ್ದ ಮೇಯರ್ ಅವರು, ಇಂದು ತಾವೇ ಮಾರುಕಟ್ಟೆಯಲ್ಲಿ ಸ್ವಚ್ಛಗೊಳಿಸುವುದಲ್ಲದೆ, ನಿರ್ದೇಶನ ನೀಡಿ ಕಸ ಹೊರಸಾಗಿಸಿದ್ದಾರೆ.
ಅಲ್ಲದೆ, ಅಂಗಡಿಗಳ ಮುಂಭಾಗ ಒತ್ತುವರಿ ಮಾಡಿಕೊಂಡಿದ್ದ ಸ್ಥಳವನ್ನು ತೆರವುಗೊಳಿಸಿ ಇನ್ನುಮುಂದೆ ಒತ್ತುವರಿ ಮಾಡಿ ವ್ಯಾಪಾರ ನಡೆಸುವಂತಿಲ್ಲ ಎಂದು ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಮಿತಿ ರಚನೆ
ಕೆ.ಆರ್. ಮಾರುಕಟ್ಟೆಯನ್ನು ಸದಾ ಸ್ವಚ್ಛವಾಗಿಡಲು ಮಾರುಕಟ್ಟೆ ಸ್ವಚ್ಛತಾ ನಿರ್ವಹಣಾ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯರು, ಹಿರಿಯ ಅಧಿಕಾರಿಗಳು ಹಾಗೂ ಎನ್‌ಜಿಒ ಸಂಸ್ಥೆಗಳ ಪ್ರತಿನಿಧಿಗಳು ಇರುತ್ತಾರೆ.
ಇವರೆಲ್ಲರ ಸಹಾಯದಿಂದ ಮಾರುಕಟ್ಟೆ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಮಾರುಕಟ್ಟೆಯಲ್ಲಿ ಸೃಷ್ಟಿಯಾದ ಕಸವನ್ನು ಅದೇ ದಿನ ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಹೊರುತ್ತಾರೆ ಎಂದು ಅವರು ತಿಳಿಸಿದರು.

Comments are closed.