ಕರ್ನಾಟಕ

ಬರ: 6 ಸಾವಿರ ಕೋಟಿ ನಷ್ಟ

Pinterest LinkedIn Tumblr

kendraಬೆಂಗಳೂರು: ರಾಜ್ಯದ ಬರಪೀಡಿತ 110 ತಾಲ್ಲೂಕುಗಳಲ್ಲಿ ಸುಮಾರು ₹ 6 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟ ಆಗಿರಬಹುದು ಎಂದು ರಾಜ್ಯ ಸರ್ಕಾರ ಅಂದಾಜು ಮಾಡಿದೆ.

ಬರ ಪ್ರದೇಶಗಳ ಅಧ್ಯಯನಕ್ಕೆ ತಜ್ಞರ ತಂಡ ಕಳುಹಿಸಿ ವರದಿ ತರಿಸಿಕೊಂಡು ಪರಿಹಾರ ಬಿಡುಗಡೆ ಮಾಡುವಂತೆ ಮುಂದಿನ ವಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ ಜೂನ್‌ 1ರಿಂದ ಸೆ. 30ರ ವರೆಗಿನ ವರದಿ ಮತ್ತು 2009ರ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ ಮಾರ್ಗಸೂಚಿ ಅನ್ವಯ ಮಳೆ ಕೊರತೆ, ತೇವಾಂಶ ಕೊರತೆ ಮತ್ತು ಸತತ ನಾಲ್ಕು ವಾರಗಳ ಶುಷ್ಕ ವಾತಾವರಣ ಪರಿಗಣಿಸಿ 22 ಜಿಲ್ಲೆಗಳ 68 ತಾಲ್ಲೂಕುಗಳನ್ನು ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ ಮತ್ತೆ 13 ಜಿಲ್ಲೆಗಳ 42 ತಾಲ್ಲೂಕುಗಳ ನೀರಾವರಿ ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಈ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಪೂರೈಕೆ, ಉದ್ಯೋಗ ಖಾತರಿ ಯೋಜನೆ ಮತ್ತು ಜಾನುವಾರು ಸಂರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು

‘ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾಗಿರುವ ಬೆಳೆ ನಷ್ಟವನ್ನು ಪ್ರತ್ಯೇಕವಾಗಿ ಅಂದಾಜಿಸಲಾಗುವುದು. ಕೃಷಿ, ನೀರಾವರಿ, ಕಂದಾಯ ಮತ್ತಿತರ ಇಲಾಖೆಗಳ ಮೂಲಕ ಈ ಪ್ರಕ್ರಿಯೆ ಆರಂಭಗೊಂಡಿದ್ದು, ನಿಖರವಾದ ಸಮೀಕ್ಷೆ ಬಳಿಕ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಕೇಂದ್ರ ಸಚಿವರನ್ನೂ ಭೇಟಿ ಮಾಡಲಾಗುವುದು’ ಎಂದರು.

‘ಅಂತರ್ಜಲ ಮಟ್ಟ ತೀರಾ ಕುಸಿದಿರುವುದರಿಂದ ಕೊಳವೆ ಬಾವಿ ಕೊರೆಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಕುಡಿಯುವ ನೀರಿನ ಅಗತ್ಯ ಸೇರಿದಂತೆ ಅನಿವಾರ್ಯ ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

‘ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡುವ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೃಷಿ ಬೆಲೆ ಆಯೋಗದ ವರದಿಯನ್ವಯ ಆಯಾ ವರ್ಷ ಪ್ರತಿ ಬೆಳೆಗೆ ಬೆಲೆ ನಿರ್ಧರಿಸಲಾಗುತ್ತದೆ. ಈರುಳ್ಳಿ ಮತ್ತು ಟೊಮೆಟೊ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಕುರಿತು ಕೃಷಿ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ’ ಎಂದರು.

ತಹಶೀಲ್ದಾರ್‌ಗಳ ವಿರುದ್ಧ ಕ್ರಮ: ‘ಅರಣ್ಯ ಹಕ್ಕು ಕಾಯ್ದೆಯಡಿ ಸುಮಾರು 4 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ವಾರಕ್ಕೊಮ್ಮೆ ಸಭೆ ಸೇರಿ ಹಕ್ಕುಪತ್ರ ನೀಡುವ ಕುರಿತು ಕ್ರಮ ತೆಗದುಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ನಿರ್ದಿಷ್ಟ ಆದೇಶ ಪಾಲಿಸದ ತಹಶೀಲ್ದಾರ್‌ಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು’ ಎಂದೂ ಕಾಗೋಡು ಎಚ್ಚರಿಕೆ ನೀಡಿದರು.

**

ಅತಿವೃಷ್ಟಿಗೆ ಪರಿಹಾರ
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಬೆಳೆ ನಷ್ಟ ಉಂಟಾಗಿರುವ ಬೀದರ್‌ ಜಿಲ್ಲೆಗೆ ₹ 50 ಕೋಟಿ ಮತ್ತು ಕಲಬುರ್ಗಿ ಜಿಲ್ಲೆಗೆ ₹ 25 ಕೋಟಿ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

Comments are closed.