ಕರ್ನಾಟಕ

ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಬಿಜೆಪಿ ಸೇರ್ಪಡೆ

Pinterest LinkedIn Tumblr

shivaramಬೆಂಗಳೂರು(ಅ.14): ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಲವಾದಿ ಸಮುದಾಯಕ್ಕೆ ಸೇರಿರುವ ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ’ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಬಿಜೆಪಿಗೆ ಸೇರುವುದು ಸಂತಸ ತಂದಿದೆ. ಮಾಜಿ ಐಎಎಸ್ ಅಧಿಕಾರಿಗಳು ಬಿಜೆಪಿಗೆ ಖುಷಿಪಟ್ಟು ಬರುತ್ತಿದ್ದಾರೆ. ಸಂವಿಧಾನದಲ್ಲಿ ದಲಿತರಿಗೆ ನೀಡಿರುವ ಸವಲತ್ತನ್ನು ಬೇರೆಲ್ಲೂ ನೀಡಿಲ್ಲ. ದಲಿತರು ಸ್ವಾಭಿಮಾನದಿಂದ ಬೆಳೆಯಬೇಕು ಎಂದು ಅಂಬೇಡ್ಕರ್ ಆಶಯವಾಗಿತ್ತು. ಅದಕ್ಕೆ ಒಗ್ಗಟ್ಟನ್ನು ಜಪಿಸಿದ್ದರು. ಈ ದೇಶದಲ್ಲಿ ದಲಿತರಿಗೆ ಅವರ ಹಕ್ಕನ್ನು ನೀಡಲು ಕ್ರಾಂತಿ ಅವಶ್ಯಕತೆ ಇಲ್ಲ. ಸಂವಿಧಾನದಲ್ಲಿ ಇರುವುದನ್ನೇ ನೀಡಿದರೆ ಸಾಕು ಎಂದು ಅಂಬೇಡ್ಕರ್ ನಂಬಿದ್ದರು ಎಂದು ತಿಳಿಸಿದರು.
ನಮ್ಮ ಪುರಾಣದಲ್ಲಿ ಎಲ್ಲೂ ಸಹ ಅಸ್ಪೃಶ್ಯತೆ ಬಗ್ಗೆ ಹೇಳಿಲ್ಲ. ಯಾವ ಸಂತರೂ ಜಾತಿ ಬಗ್ಗೆ ಮಾತಾಡಿಲ್ಲ. ಆದರೆ ಬಳಿಕ ಆಳ್ವಿಕೆ ನಡೆಸಿದವರು ಜಾತಿ ವ್ಯವಸ್ಥೆ ಜಾರಿಗೆ ತಂದರು. ಕಾಂಗ್ರೆಸ್ ಆಳ್ವಿಕೆಯಲ್ಲಿ ಭ್ರಷ್ಟಾಚಾರ ತೀರ್ವವಾಗಿ ತಾಂಡವವಾಡುತ್ತಿದ್ದು, ಆದರೆ ನಮ್ಮ ಸರ್ಕಾರದ ಮೇಲೆ ಚಿಕ್ಕ ಭ್ರಷ್ಟಾಚಾರದ ವಾಸನೆಯೂ ಇಲ್ಲ ಎಂದು ಹೇಳಿದರು.
ಗಾಂಧೀಜಿ ಸ್ವಚ್ಛತೆಯನ್ನು ಪ್ರತಿಪಾದಿದ್ದರು.ಸ್ವಚ್ಛತೆ ಜಾತಿಯನ್ನು ಮೀರಿ ಒಬ್ಬರನ್ನು ಒಂದುಗೂಡಿಸುತ್ತೆ ಎಂದು ಗಾಂಧೀಜಿ ತಿಳಿಸಿದ್ದರು.ನಮ್ಮ ಸರ್ಕಾರ ಅದೇ ಹಾದಿಯಲ್ಲಿದೆ. ಅಧಿಕಾರ ಸ್ವೀಕರಿಸಿದ ಮೊದಲ ಬಾರಿಗೆ ನಮ್ಮ ಸರ್ಕಾರ ಬಡವರ ಪರ ಎಂದು ಘೋಷಣೆ ಮಾಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ. ಅವರು ಬಡವರಿಗಾಗಿಯೆ ಅಟಲ್ ಪಿಂಚಣಿ , ಜನ್ ಧನ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ನಂತರ ಮಾತನಾಡಿದ ಕೆ. ಶಿವರಾಮ್, ದಲಿತ ಸಿ.ಎಂ ಮಾಡೋಕೆ ಕಾಂಗ್ರೆಸ್ ಮುಂದಾಗಿಲ್ಲ. ದಲಿತರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಳ್ಳತ್ತೆ. ರತ್ನ ಪ್ರಭ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಬೇಕಿತ್ತು. ರತ್ನ ಪ್ರಭಗೆ ಅವಕಾಶ ನೀಡುವಂತೆ ಯಡಿಯೂರಪ್ಪ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ರಾಜ್ಯ ಸರ್ಕಾರ ಅವಕಾಶ ಕೊಡಲಿಲ್ಲ. ಬಿಜೆಪಿ ಸೇರುವ ಇಂಗಿತವನ್ನು ವರ್ಷದ ಹಿಂದೆಯೇ ಮಾಡಿದ್ದೆ. ಯಡಿಯೂರಪ್ಪ, ರಾಜನಾಥ್ ಸಿಂಗ್ ಅವರನ್ನು ಕೇಳಿಕೊಂಡಿದ್ದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ದಲಿತರ ಪರವಾದ ಹಲವು ಕಾರ್ಯಕ್ರಮ ರೂಪಿಸುತ್ತಿದೆ ಹಾಗಾಗಿ ಬಿಜೆಪಿ ಬಂದೆ. ಅಂಬೇಡ್ಕರ್ ಬಳಿಕ ಸಂಸತ್ತಿಗೆ ಕೈ ಮುಗಿದು ಒಳಹೋದವರು ಮೋದಿ ಮಾತ್ರ.ಕಾಂಗ್ರೆಸ್ ಪಕ್ಷವು ಬಿಜೆಪಿ ದಲಿತರ‌ ವಿರೋಧಿ ಎನ್ನುವಂತೆ ಬಿಂಬಿಸುತ್ತಿದೆ. ಹಲವು ಕಾಂಗ್ರೆಸ್ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಸರಿಯಾಗಿ ಗೊತ್ತೆ ಇಲ್ಲ. ಚುನಾವಣೆ ಬಂದಾಗ ಮಾತ್ರ ಅವರಿಗೆಲ್ಲ‌ ಅಂಬೇಡ್ಕರ್ ನೆನಪಾಗ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.

Comments are closed.