ಕರ್ನಾಟಕ

ಬಡವರ ಮದುವೆಗೆ 12 ಎಕರೆ ಜಮೀನು ಮಾರಿದ ಹಾವೇರಿಯ ನಿಂಗಪ್ಪ

Pinterest LinkedIn Tumblr

ningappaಹಾವೇರಿ: ಈಗಿನ ಕಾಲದಲ್ಲಿ ಅರ್ಧ ಗುಂಟೆ ಜಾಗಕ್ಕೆ ಮಚ್ಚು ಲಾಂಗು ತಗೊಂಡು ಹೊಡೆದಾಡ್ತಾರೆ. ಆದರೆ ವ್ಯಕ್ತಿಯೊಬ್ಬರು ಬಡವರ ಮದುವೆಗೆ ಅಂತಾ ತಮ್ಮ 25 ಎಕರೆ ಜಮೀನಿನಲ್ಲಿ 12 ಎಕರೆಯನ್ನೇ ಮಾರಿದ್ದಾರೆ. ಪ್ರತಿವರ್ಷ 50 ಜೋಡಿಗೆ ಮದುವೆ ಮಾಡಿಸ್ತಾರೆ. ಇಷ್ಟೇ ಅಲ್ಲ ಅಂಧರ ಬಾಳಿಗೆ ಇವರು ಬೆಳಕು ನೀಡ್ತಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಿದರಕೊಪ್ಪ ಗ್ರಾಮದವರಾದ 62 ವರ್ಷ ವಯಸ್ಸಿನ ನಿಂಗಪ್ಪ ಕಾಳೇರ್, 4ನೇ ಕ್ಲಾಸ್‍ವರೆಗೂ ಓದಿ ಆಮೇಲೆ ಶಾಲೆಗೆ ಗುಡ್ ಬೈ ಹೇಳಿಬಿಟ್ರು. ದೊಡ್ಡವರಾದಂತೆ ತಮ್ಮ 25 ಎಕರೆಯಲ್ಲಿ ಕೃಷಿ ಮಾಡೋಕೆ ಶುರು ಮಾಡಿದ್ರು. ಆಮೇಲೆ ಯಾಕೋ ಸಮಾಜ ಸೇವೆ ಕಡೆಗೆ ಮನಸ್ಸಾಯ್ತು. ಆಗ ದಲಿತ ಸಂಘರ್ಷ ಸಮಿತಿ ಮೂಲಕ ಸಮಾಜ ಸೇವೆಗೆ ಕಾಲಿಟ್ರು.

ಹೀಗೆ ಅಂಬೇಡ್ಕರ್ ಜಯಂತಿಯಂದು ಉಚಿತ ಸಾಮೂಹಿಕ ವಿವಾಹ ಮಾಡಿಸೋಕೆ ಶುರು ಮಾಡಿದ್ರು. ಕಳೆದ 15 ವರ್ಷಗಳಿಂದ ಪ್ರತಿವರ್ಷ 50ಕ್ಕೂ ಅಧಿಕ ಮದುವೆ ಮಾಡಿಸ್ತಾರೆ. ತಾಳಿ, ಸೀರೆ, ಕಾಲುಂಗುರ, ಬಟ್ಟೆ ಎಲ್ಲವನ್ನೂ ಕೊಟ್ಟು ಇಲ್ಲಿವರೆಗೂ 800ಕ್ಕೂ ಅಧಿಕ ಬಡ ಜೋಡಿಗೆ ಶಾದಿ ಭಾಗ್ಯ ಕರುಣಿಸಿದ್ದಾರೆ. ಯಾರೂ ಸಹಾಯ ಮಾಡದಿದ್ದಾಗ ತಮ್ಮ ಜಮೀನನ್ನೇ ಮಾರಿದ್ದಾರೆ. ಹೀಗಾಗಿ 25 ಎಕರೆಯಿದ್ದ ಇವರ ಜಮೀನು ಈಗ 13 ಎಕರೆಗೆ ಕರಗಿದೆ. ಹಾನಗಲ್ ತಾಲೂಕಿನ ವಿವಿಧ ಗ್ರಾಮದಲ್ಲಿ ಉಚಿತ ಸಾಮೂಹಿಕ ವಿವಾಹ ಮಾಡಿಸಿದ್ದಾರೆ.

ಉಚಿತ ಸಾಮೂಹಿಕ ಮದುವೆಯಷ್ಟೇ ಅಲ್ಲ. ಜನರಿಗೆ ಪಡಿತರ ಚೀಟಿ ಕೊಡೊಸೋದು, ಮನೆ ಕೊಡಿಸೋದು, ವಿಧವಾ ವೇತನ ಕೊಡಿಸೋದು, ಅಂಗವಿಕಲರ ವೇತನ ಕೊಡೊಸೋದು ಹೀಗೆ ಸಣ್ಣಪುಟ್ಟ ಕೆಲಸಗಳನ್ನೂ ಮಾಡ್ತಿದ್ದಾರೆ ನಿಂಗಪ್ಪ. ಇವರ ಸಮಾಜ ಸೇವೆಯನ್ನ ಸ್ಥಳಿಯರು ಮೆಚ್ಚಿಕೊಂಡಿದ್ದಾರೆ.

ನಿಂಗಪ್ಪ ಕಾಳೇರ್ ಅವರ ಸೇವೆ ಗುರುತಿಸಿ ಆನೇಕ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಸೇವೆ ಮಾಡೋಕೆ ದುಡ್ಡೇ ಬೇಕು ಅಂತಾ ಅಲ್ಲ. ಮನಸ್ಸೊಂದಿದ್ದರೆ ಸಾಕು ಅನ್ನೋದನ್ನ ನಿಂಗಪ್ಪ ತೋರಿಸಿಕೊಟ್ಟಿದ್ದಾರೆ.

Comments are closed.