ಬಂಟ್ವಾಳ, ಅ.13: ದ.ಕ. ಜಿಲ್ಲೆಯಲ್ಲಿ ಮರಳು ಗಾರಿಕೆ ಮತ್ತು ಮರಳು ಸಾಗಾಟಕ್ಕೆ ಈಗಾಗಲೇ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಆದರೆ ಜಿಲ್ಲಾಡಳಿತ ವಿಧಿಸಿರುವ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲಾದ್ಯಂತ ಮರಳುಗಾರಿಕೆ ಹಾಗೂ ಸಾಗಾಟ ನಿರಾತಂಕವಾಗಿ ನಡೆಯುತ್ತಿ ದ್ದರೂ ಜಿಲ್ಲಾಡಳಿತ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಜಿಲ್ಲೆಯ ಜೀವನದಿ ನೇತ್ರಾವತಿ ಮತ್ತು ಫಲ್ಗುಣಿ ನದಿ ಪಾತ್ರದಲ್ಲಿ ಕಾನೂನಿನ ಭಯವೇ ಇಲ್ಲದೆ ನಿರಾತಂಕವಾಗಿ ಭಾರೀ ಮರಳುಗಾರಿಕೆ ನಡೆಯುತ್ತಿದೆ. ಯಾಂತ್ರೀಕೃತ ಮರಳುಗಾರಿಕೆಯನ್ನು ಕಾನೂನುಬದ್ಧವಾಗಿ ನಿರ್ಬಂಧಿಸಲಾಗಿದ್ದರೂ ನದಿಯಲ್ಲಿ ಜೆಸಿಬಿ, ಕ್ರೇನ್, ಹೂಳೆತ್ತುವ ಯಂತ್ರಗಳನ್ನು ಬಳಸಿ ಮರಳನ್ನು ದೋಚಲಾಗುತ್ತಿದೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಹತ್ತನೆ ಮೈಲುಗಲ್ಲು, ಮಾರಿಪಳ್ಳ, ತುಂಬೆ, ಕೆಳಗಿನ ತುಂಬೆ, ವಳವೂರು, ಬ್ರಹ್ಮರಕೂಟ್ಲು, ತಲಪಾಡಿ, ಶಾಂತಿ ಅಂಗಡಿ, ಕೈಕುಂಜೆ, ಗೂಡಿನಬಳಿ, ಸರಪಾಡಿ, ಅಜಿಲಮೊಗರು, ಶಂಭೂರು, ಮುಲ್ಲರಪಟ್ನ ಸೇರಿದಂತೆ ಜಿಲ್ಲೆಯ ನೇತ್ರಾವತಿ ಮತ್ತು ಫಲ್ಗುಣಿ ನದಿಯಿಂದ ಮರಳು ಎತ್ತಲಾಗುತ್ತಿದೆ.
ಈ ರೀತಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ ದಂಧೆಕೋರರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಜರಗಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ವರ್ಷದಲ್ಲಿ ಮಳೆ ಕ್ಷೀಣಿಸಿದ್ದರಿಂದ ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಇದ ರಿಂದ ಈಗಾಗಲೇ ನದಿಯಲ್ಲೇ ಮರಳು ಗೋಚರಿಸತೊಡಗಿದೆ. ಇದು ಮರಳು ದಂಧೆಕೋರರಿಗೆ ವರದಾನವಾಗಿ ಪರಿಣಮಿ ಸಿದೆ.
ನವೆಂಬರ್, ಡಿಸೆಂಬರ್ನಲ್ಲಿ ಪ್ರಾರಂಭ ವಾಗುತ್ತಿದ್ದ ಮರಳು ದಂಧೆ ಈ ಬಾರಿ ಆಗಸ್ಟ್ ನಲ್ಲೇ ಆರಂಭಗೊಂಡಿದೆ. ಬಡ ವ್ಯಕ್ತಿಯೊಬ್ಬ ತನ್ನ ಉಪಯೋಗಕ್ಕಾಗಿ ನದಿಯಿಂದ ಒಂದು ಪಿಕಪ್ ಲೋಡ್ ಮರಳು ತೆಗೆದು ಸಾಗಿಸಿದರೆ ತಕ್ಷಣ ವಾಹನವನ್ನು ವಶಕ್ಕೆ ಪಡೆದು ಕೇಸ್ ಹಾಕುವ ಅಧಿಕಾರಿಗಳು ಹಗಲು ರಾತ್ರಿಯೆನ್ನದೆ ಮರಳು ದೋಚುತ್ತಿರುವ ಪ್ರಭಾವಿ ದಂಧೆ ಕೋರರನ್ನು ಕಂಡರೂ ಕಾಣದಂತೆ ನಟಿಸು ತ್ತಿರುವುದು ಸಾರ್ವಜನಿಕರನ್ನು ಸಂಶಯಕ್ಕೀಡು ಮಾಡಿದೆ.
ಕೃತಕ ಅಭಾವ:
ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿ ದೋಣಿ, ಹಿಟಾಚಿ, ಜೆಸಿಬಿ, ಕ್ರೇನ್ ಮತ್ತು ಹೂಳೆತ್ತುವ ಯಂತ್ರಗಳ ಮೂಲಕ ಮರಳು ತೆಗೆದು ಗೌಪ್ಯ ಸ್ಥಳಗಳಿಗೆ ಸಾಗಿಸಿ ದಾಸ್ತಾನಿಡಲಾಗುತ್ತಿದೆ. ಅಲ್ಲಿಂದ 10, 12 ಚಕ್ರ ಗಳ ಲಾರಿಗಳ ಮೂಲಕ ಬೆಂಗಳೂರು, ಕೇರಳ ಸೇರಿದಂತೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ಸಾಗಿಸಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಈ ರೀತಿ ಜಿಲ್ಲೆಯ ಹೊರ ಪ್ರದೇಶಗಳಿಗೆ ಅಕ್ರಮವಾಗಿ ಮರಳು ಸಾಗಾಟ ಆಗುವ ಕಾರಣ ಸ್ಥಳೀಯವಾಗಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದೆ. ಬಡವರು, ಮಧ್ಯಮ ವರ್ಗದ ಜನರು ಮನೆ, ಕಟ್ಟಡ ನಿರ್ಮಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಲೋಡ್ ಮರಳಿಗೆ 10ರಿಂದ 15 ಸಾವಿರ ರೂ. ನೀಡಿದರೂ ಮರಳು ಲಭಿಸುತ್ತಿಲ್ಲ. ಜನ ಸಾಮಾನ್ಯರು ಸಿಡಿದೇಳುವ ಮೊದಲು ಈ ಬಗ್ಗೆ ಜಿಲ್ಲಾಡಳಿತ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಅಪಾಯದಲ್ಲಿ ಸೇತುವೆಗಳು!
ಸೇತುವೆಗಳ ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಇಕ್ಕೆಲಗಳ 500 ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಕಾನೂನು ಪ್ರಕಾರ ನಿಷೇಧವಿದೆ. ಆದರೆ ಬಂಟ್ವಾಳ ತಾಲೂಕಿನ ಪ್ರಮುಖ ಸೇತುವೆಗಳ ಅಡಿ ಭಾಗದಲ್ಲೇ ದೋಣಿ, ಹಿಟಾಚಿ, ಜೆಸಿಬಿ, ಹೂಳೆತ್ತುವ ಯಂತ್ರಗಳ ಮೂಲಕ ಮರಳು ಎತ್ತಲಾಗುತ್ತಿದೆ. ಇದು ಸೇತುವೆಗಳ ಸುರಕ್ಷತೆಗೆ ಧಕ್ಕೆ ಉಂಟು ಮಾಡುವ ಬಗ್ಗೆ ಭೀತಿ ಎದುರಾಗಿದೆ. ಸೇತುವೆಗಳ ಪಿಲ್ಲರ್ಗಳು ಬುಡಭಾಗದಿಂದಲೇ ಗೋಚರಿಸುತ್ತಿವೆ.
ಬಂಟ್ವಾಳ ತಾಲೂಕಿನ ಮುಲ್ಲರಪಟ್ನ ಫಲ್ಗುಣಿ ನದಿಯ ಸೇತುವೆಯ ಅಡಿಭಾಗದಲ್ಲಿ ನಡೆಯುತ್ತಿರುವ ಮರಳುಗಾರಿಕೆಯ ಸಾಗಾಟಕ್ಕೆ ಬಳಕೆಯಾಗುವ ಲಾರಿಗಳ ಸಂಚಾರದಿಂದ ಎಂ.ಆರ್.ಪಿ.ಎಲ್‍ಗೆ ನೀರು ಪೂರೈಸುವ ಪೈಪ್ಲೈನ್ ಒಡೆದು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಂಭೂರಿನಿಂದ ನೇತ್ರಾವತಿ ನದಿ ನೀರನ್ನು ಬೃಹತ್ ಪೈಪ್ಗಳ ಮೂಲಕ ಎಂಆರ್ಪಿಎಲ್ಗೆ ಪೂರೈಸಲಾಗುತ್ತದೆ.
ಈ ಪೈಪ್ಗಳು ಮುಲ್ಲರಪಟ್ನ ಎಂಬಲ್ಲಿ ಫಲ್ಗುಣಿ ನದಿಯ ಮೂಲಕ ಹಾದುಹೋಗಿದೆ. ನೀರಿನ ಹರಿವಿನಿಂದ ಪೈಪ್ ಹಾನಿ ಉಂಟಾಗದಂತೆ ಪೈಪ್ ಮೇಲೆ ಕಾಂಕ್ರಿಟ್ ಹಾಕಲಾಗಿದೆ. ಈ ಕಾಂಕ್ರಿಟ್ ಮೇಲೆ ಮರಳು ಲಾರಿಗಳು ಸಂಚರಿಸುವುದರಿಂದ ಪೈಪ್ ಒಡೆದು ಎಂಆರ್ಪಿಎಲ್ಗೆ ನೀರು ಪೂರೈಕೆಗೆ ಅಡ್ಡಿಯಾಗಿದೆ. ಇದೀಗ ಹಾನಿಗೊಂಡಿರುವ ಪೈಪ್ಗಳ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಪೈಪ್ ದುರಸ್ತಿಗಾಗಿ ಫಲ್ಗುಣಿ ನದಿಗೆ ನೂರಾರು ಲೋಡ್ ಮಣ್ಣು, ಬಂಡೆಕಲ್ಲುಗಳನ್ನು ಹಾಕಲಾಗಿದ್ದು ಇದರಿಂದಾಗಿ ಇಡೀ ನದಿಯೇ ಮಲಿನಗೊಂಡಿದೆ.
ಸಮಸ್ಯೆ ಪರಿಹರಿಸದಿದ್ದಲ್ಲಿ ಸತ್ಯಾಗ್ರಹ: ರೈತ ಸಂಘ ಎಚ್ಚರಿಕೆ
ಕೆಲವು ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಮರಳುಗಾರಿಕೆಯನ್ನು ದಂಧೆಯ ನ್ನಾಗಿ ಮಾಡಿ ಕೊಂಡಿದ್ದು, ಇದಕ್ಕೆ ಅಧಿಕಾರಿಗಳ ಕೃಪಾಕಟಾಕ್ಷವು ಇದೆ. ದ.ಕ. ಜಿಲ್ಲೆಯಿಂದ ದಿನನಿತ್ಯ ನೂರಾರು ಲೋಡ್ ಮರಳು ಹೊರ ಜಿಲ್ಲೆ, ರಾಜ್ಯಗಳಿಗೆ ಸಾಗಾಟವಾಗುತ್ತಿದೆ. ಜಿಲ್ಲೆಯಲ್ಲಿ ಮರಳಿನ ಅಭಾವವಿದೆ. ಇದು ಉದ್ದೇಶ ಪೂರಕವಾಗಿಯೇ ಸೃಷ್ಟಿಸಿರುವ ಕೃತಕ ಅಭಾವ.
ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಮರಳಿನ ಸಮಸ್ಯೆ ಇಲ್ಲ. ಆದರೆ ಜಿಲ್ಲೆಯ ಬಡ ಜನರಿಗೆ ಮನೆ ನಿರ್ಮಿ ಸಲು ಒಂದು ಲೋಡ್ ಮರಳು ದೊರೆಯುತ್ತಿಲ್ಲ. ಅಕ್ರಮ ಮರಳುಗಾರಿಕೆ ಮತ್ತು ಸಾಗಾಟ ಅಧಿಕಾರಿಗಳ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ಅವರು ಜಾಣ ವೌನ ವಹಿಸಿದ್ದಾರೆ. ಮರಳು ಅಕ್ರಮ ಸಾಗಾಟ ಪತ್ತೆಗೆ ಕೆಲವೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅವುಗಳ ಮುಂದಿನಿಂದಲೇ ಲಾರಿಗಳು ನಿರಂತರವಾಗಿ ಸಂಚರಿ ಸುತ್ತಿದೆಯಾದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಮರಳು ಸಾಗಾಟ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಥವಾ ಜನ ಸಾಮಾನ್ಯರಿಗೂ ನೇರವಾಗಿ ನದಿಯಿಂದ ಮರಳು ತೆಗೆಯಲು ಅವಕಾಶ ಕಲ್ಪಿಸಬೇಕು. ಮರಳಿನ ಸಮಸ್ಯೆಗೆ ಶೀಘ್ರವೇ ಪರಿಹಾರ ಕಲ್ಪಿಸದಿದ್ದಲ್ಲಿ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದು. – ಶ್ರೀಧರ್ ಶೆಟ್ಟಿ, ರಾಜ್ಯ ಹಸಿರು ಸೇನೆ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ
ವರದಿ ಕೃಪೆ : ವಾರ್ತಾ ಭಾರತಿ – ವರದಿ: ಇಮ್ತಿಯಾಝ್ ಶಾ ತುಂಬೆ