ಬೆಂಗಳೂರು, ಅ. ೧೩- ಕಳಸಾ ಬಂಡೂರಿ ಹೋರಾಟ ಮತ್ತು ಕಾವೇರಿ ಗಲಭೆಗಳ ಸಂದರ್ಭದಲ್ಲಿ ಅಮಾಯಕರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಭೇಷರತ್ತಾಗಿ ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಇಂದಿಲ್ಲಿ ಒತ್ತಾಯಿಸಿದರು.
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಹೋರಾಟ ಮಾಡಿದ ರೈತರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಮಾಯಕ ರೈತರು ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಅಂತಹವರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಕಳಸಾ ಬಂಡೂರಿ ಹೋರಾಟದ ಸಂದರ್ಭದಲ್ಲಿ 187 ಮಂದಿ ಅಮಾಯಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದ್ದು, ಅವುಗಳನ್ನು ಕೂಡಲೇ ಕೈಬಿಡಬೇಕು. ಅಮಾಯಕರಿಗೆ ಮುಕ್ತಿ ದೊರಕಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಗಲಭೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಅಮಾಯಕರನ್ನು ಬಂಧಿಸಲಾಗಿದೆ. ಅಲ್ಲದೆ, ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇವುಗಳನ್ನೂ ವಾಪಸ್ ಪಡೆಯಬೇಕು. ಬಂಧಿತರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ವರದಿ ಬಹಿರಂಗ ಪಡಿಸಿ
ಕಳಸಾ ಬಂಡೂರಿ ಹೋರಾಟ ಸಂದರ್ಭದಲ್ಲಿ ಯಮನೂರು ಸೇರಿದಂತೆ, ವಿವಿಧ ಕಡೆಗಳಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದರು. ಯುವತಿಯರು, ವೃದ್ಧರು ಎಂಬ ಬೇಧಭಾವ ಇಲ್ಲದಂತೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್‌ಕರ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು.
ಸಮಿತಿಯ ತನಿಖೆ ವರದಿ ಏನಾಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಸರ್ಕಾರ ಕೂಡಲೇ ಔರಾದ್‌ಕರ್ ಸಮಿತಿ ವರದಿಯನ್ನು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.
ಇತ್ತೀಚೆಗೆ ನಡೆದ ಸರ್ವ ಪಕ್ಷಗಳ ಸಭೆಯಲ್ಲೂ ನಾವು ಇದೇ ರೀತಿಯ ಹೋರಾಟವನ್ನು ಮುಂದಿಟ್ಟಿದ್ದಾಗ ಔರಾದ್‌ಕರ್ ಸಮಿತಿ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ಟೀಕಿಸಿದರು.