ಮಂಗಳೂರು: ಬಂಜೆತನದ ಚಿಕಿತ್ಸೆಗಾಗಿ ಲಭ್ಯ ಇರುವ ಹಲವು ತಂತ್ರಗಳನ್ನು ಕಳೆದ ವಾರದಿಂದ ಚರ್ಚಿಸುತ್ತಿದ್ದೇವೆ. ಐವಿಎಫ್ ಚಿಕಿತ್ಸೆ ವೈಫಲ್ಯ ಕಾಣದಂತಿರಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಈ ಮುಂದೆ ತಿಳಿಸಲಾಗಿದೆ.
ಭ್ರೂಣ ಸಾಗಣೆ/ಸ್ಥಾಪನೆ:
ಬಂಜೆತನವನ್ನು ಅನುಭವಿಸುತ್ತಿರುವ ಸ್ತ್ರೀಯರಲ್ಲಿ ಬಹುತೇಕವಾಗಿ ಮಧ್ಯವಯಸ್ಕ ಅಥವಾ 37ರ ಅಂಚಿನಲ್ಲಿರುವ, ಮೀರಿರುವ ಮಹಿಳೆಯರಲ್ಲಿ ಒಂದೆರಡು ಭ್ರೂಣಗಳನ್ನು ಫಲಿತಗೊಳಿಸುವುದು ಸಾಧ್ಯವಾಗಿರುತ್ತದೆ. ಫಲಿತಗೊಂಡ ಭ್ರೂಣವನ್ನು ಗರ್ಭಾಶಯಕ್ಕೆ ಸಾಗಿಸುವ ಮುನ್ನವೇ ಇನ್ನೊಂದೆರಡು ಭ್ರೂಣಗಳನ್ನು ಫಲಿತಗೊಳಿಸಿ ಹೆಪ್ಪುಗಟ್ಟಿಸಿ ಇಡಲಾಗುತ್ತದೆ.
ಒಂದು ಎರಡು ಅಥವಾ ಅದಕ್ಕೂ ಹೆಚ್ಚು ಭ್ರೂಣಗಳನ್ನು ಫಲಿತಗೊಳಿಸಿ ನಂತರ ಅವೆಲ್ಲವನ್ನೂ ಒಟ್ಟಿಗೆ ಗರ್ಭಾಶಯದೊಳಗೆ ಕಸಿ ಮಾಡಲಾಗುತ್ತದೆ. ಇದರಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚಾಗುತ್ತದೆ. ತನ್ನದೇ ಅಂಡಾಣುಗಳನ್ನು ಬಳಸಿ ಗರ್ಭಫಲಿತಗೊಳಿಸಿ ಬಸಿರಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ದಾನಿಗಳ ಅಂಡಾಣು ಬಳಸುವುದಿಲ್ಲ ಎನ್ನುವ ಮಹಿಳೆಯರಿಗೆ ಇದೊಂದು ವರದಾನವಾಗಿದೆ. ಐವಿಎಫ್‌ನ ಒಂದು ಋತುವಿನಿಂದ ಇನ್ನೊಂದು ಋತುವಿನಲ್ಲಿ ಅಳವಡಿಸುವ ಪ್ರಕ್ರಿಯೆಯ ಬಗ್ಗೆ ನಿಮ್ಮ ವೈದ್ಯರು ಉತ್ತಮ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ.
ಒಂದೇ ಫಲಿತ ಭ್ರೂಣವನ್ನು ಸಾಗಿಸಿ ಸ್ಥಾಪಿಸುವುದೋ ಅಥವಾ ಒಂದನ್ನು ಹೆಪ್ಪುಗಟ್ಟಿಸಿ ಸಂರಕ್ಷಿಸಿಟ್ಟು, ಇನ್ನೊಂದು ಋತುವಿನಲ್ಲಿ ಮತ್ತೊಂದು ಫಲಿತ ಭ್ರೂಣದೊಂದಿಗೆ ಸಾಗಿಸಿ ಸ್ಥಾಪಿಸುವುದೋ ಎನ್ನುವ ತೀರ್ಮಾನ ವೈದ್ಯರಿಗೇ ಬಿಡುವುದು ಒಳಿತು.
ಹೆಪ್ಪುಗಟ್ಟಿಸಿರುವ ಭ್ರೂಣಗಳ ಸಾಗಣೆಯಿಂದಾಗಿ ಸಾಮಾನ್ಯವಾಗಿ ಆಗುವ ಲಾಭಗಳು:
* ಬಸಿರಿನ ಸಾಧ್ಯತೆಗಳು ಹೆಚ್ಚಿಸುತ್ತವೆ.
* ಅಂಡಾಣು ಬಿಡುಗಡೆಗೊಳಿಸುವ ಉತ್ತೇಜನಾಕಾರಿ ಔಷಧಿಗಳ ಸೇವನೆಯನ್ನು ತಡೆಯಬಹುದು.
* ಗರ್ಭಾಶಯ ಮತ್ತು ಅದರ ಸ್ಥಿತಿಯನ್ನು ಅವಲೋಕಿಸಿ, ಭ್ರೂಣವನ್ನು ಸ್ಥಾಪಿಸಲು ಅನುಕೂಲವಾಗುತ್ತದೆ.
* ಬಹುಬಸಿರುಗಳನ್ನು ಅಂದರೆ ತ್ರಿವಳಿ ಅಥವಾ ಅದಕ್ಕೂ ಹೆಚ್ಚಿನ ಮಕ್ಕಳು ಪಡೆಯುವುದನ್ನು ತಪ್ಪಿಸುತ್ತದೆ.
* ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ. ಬೇರೆಯ ಚಿಕಿತ್ಸೆಗಳಿಗೆ ಹೋಲಿಸಿದರೆ ಇದು ನೋವು ರಹಿತವಾಗಿರುತ್ತದೆ.
ಅಂಡಾಣು ಹೆಪ್ಪುಗಟ್ಟಿಸುವ ಪ್ರಕ್ರಿಯೆ ಅಥವಾ ಅಂಡಾಣುಗಳ ಬ್ಯಾಂಕಿಂಗ್:
ಅಂಡಾಣು ಹೆಪ್ಪುಗಟ್ಟಿಸುವ ವಿಧಾನವೆಂದರೆ ಫಲಿತಗೊಳ್ಳದ ವೀರ್ಯಾಣುವಿನೊಂದಗೆ ಸಂಯೋಗವಾಗದ ಅಂಡಾಣುವನ್ನು ಸಂರಕ್ಷಿಸುವುದಾಗಿದೆ. ಈ ಪ್ರಕ್ರಿಯೆಯು ಫಲಿತ ಭ್ರೂಣವನ್ನು ಹೆಪ್ಪುಗಟ್ಟಿಸುವ ಕ್ರಿಯೆಯಂತೆಯೇ ಇರುತ್ತದೆ. ಆದರೆ ಈ ವಿಧಾನದಲ್ಲಿ ಅಂಡಾಣುಗಳು ವೀರ್ಯಾಣುವಿನೊಂದಿಗೆ ಸಂಯೋಗ ಹೊಂದಿರುವುದಿಲ್ಲ. ದಾನಿಗಳಿಂದ ಪಡೆದ ಅಂಡಾಣುಗಳನ್ನು ಸಂರಕ್ಷಿಸಿ ಇಡಲು ಈ ವಿಧಾನ ಸಹಾಯಕವಾಗಿದೆ.
ಇದರಿಂದ ಯಾರಿಗೆ ಉಪಯೋಗವಿದೆ:
1.ಸಾಮಾನ್ಯವಾಗಿ ವೃತ್ತಿಪರರಲ್ಲಿ ಸದ್ಯಕ್ಕೆ ತಾಯ್ತನವನ್ನು ಪಡೆಯಲು ಇಷ್ಟ ಪಡದವರು,
2.ನಂತರದ ಕಾಲಮಾನದಲ್ಲಿ ಆರೋಗ್ಯವಂತ ಮಗುವನ್ನೇ ಬಯಸುವವರು ತಮ್ಮ ಆರೋಗ್ಯವಂತ ಅಂಡಾಣುವನ್ನು ಸಂರಕ್ಷಿಸಿ ಇಡಬಹುದು.
3.ತಮ್ಮ ಶೈಕ್ಷಣಿಕ ಪದವಿ ಪಡೆಯುವಲ್ಲಿ ನಿರತರಾದವರು, ಇಲ್ಲವೇ ವೈಯಕ್ತಿಕ ಕಾರಣಗಳಿಂದಾಗಿ ತಾಯ್ತನವನ್ನು ಮುಂದೂಡುವ ಮಹಿಳೆಯರು ತಮ್ಮ ಅಂಡಾಣುವನ್ನು ಹೆಪ್ಪುಗಟ್ಟಿಸಿ ಸಂರಕ್ಷಿಸಬಹುದಾಗಿದೆ.
4.ಕ್ಯಾನ್ಸರ್ ಇದ್ದ ಮಹಿಳೆಯರು, ಅಥವಾ ದಾನಿಗಳಿಂದ ಅಂಡಾಣು ಪಡೆಯಲು ಧಾರ್ಮಿಕ ಅಥವಾ ನೈತಿಕ ಕಾರಣಗಳಿಂದಾಗಿ ಹಿಂಜರಿಯುವವರೂ ತಮ್ಮದೇ ಆರೋಗ್ಯವಂತ ಅಂಡಾಣುವನ್ನು ಸಂರಕ್ಷಿಸಿ ಇಡಬಹುದು.
5.ತಾಯ್ತನಕ್ಕೆ ಕಾಲ ಪಕ್ವವಾಗಿದೆಯೆಂದು ಭಾವಿಸಿದಾಗ, ಅವರ ತಾಯ್ತನವನ್ನು ಆನಂದಿಸುವ ಪರಿಸರದ ನಿರ್ಮಾಣವಾಗಿದೆ ಎಂದು ನಿಖರವಾಗಿ ಎನಿಸಿದಾಗ ಅವರು ಈ ಅಂಡಾಣುವನ್ನು ಬಳಸಬಹುದಾಗಿದೆ.
Comments are closed.